ಲೋಧಾ ಸಮಿತಿಯ ಶಿಫಾರಸುಗಳ ಅನುಷ್ಠಾನ ಕುರಿತಂತೆ ಬಿಸಿಸಿಐ ರಾಜ್ಯ ಘಟಕಗಳು ಒಟ್ಟಾಗಿ ಕಳವಳ ವ್ಯಕ್ತಪಡಿಸಿದ್ದು, ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಅವರಿಗೆ ಲೋಧಾ ಸಮಿತಿ ಜತೆ ವ್ಯವಹರಿಸಲು ಅಧಿಕಾರ ನೀಡಿದವು. ಲೋಧಾ ಸಮಿತಿ ಸುಧಾರಣೆಗಳನ್ನು ಅನುಷ್ಠಾನಕ್ಕೆ ತರುವುದು ಹೇಗೆಂದು ತಿಳಿಯದೇ ಬಿಸಿಸಿಐ ಕೂಡಾ ಗೊಂದಲದಲ್ಲಿ ಸಿಕ್ಕಿಬಿದ್ದಿದೆ.
ಸಭೆಯು ಯಾವುದೇ ಫಲಿತಾಂಶ ಕಾಣದೇ ಒಂದು ಗಂಟೆಯಲ್ಲಿ ಮುಕ್ತಾಯವಾಯಿತು. ಸಮಿತಿಯ ಜತೆ ವ್ಯವಹರಿಸಲು ಸರ್ವಸದಸ್ಯರ ಸಭೆಯು ಅಧ್ಯಕ್ಷ ಮತ್ತು ಕಾರ್ಯದರ್ಶಿಗೆ ಹೊಣೆ ವಹಿಸಿತು ಎಂದು ಹಿರಿಯ ಬಿಸಿಸಿಐ ಅಧಿಕಾರಿ ತಿಳಿಸಿದರು.
ರಾಜ್ಯ ಘಟಕಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ 9 ವರ್ಷಗಳ ಅಧಿಕಾರಾವಧಿ, 70 ವರ್ಷಗಳ ವಯೋಮಿತಿ ಮತ್ತು ಮೂರು ವರ್ಷಗಳ ಕೂಲಿಂಗ್ ಆಫ್ ಅವಧಿ ಕುರಿತು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
ಸುಧಾರಣೆಗಳನ್ನು ಜಾರಿಗೆ ತರಲು ಬಿಸಿಸಿಐಗೆ 6 ತಿಂಗಳ ಕಾಲಾವಧಿ ನೀಡಲಾಗಿದ್ದು, ಅನೇಕ ಅಧಿಕಾರಿಗಳಿಗೆ ಇದು ಕಠಿಣವಾಗಿ ಕಂಡಿದ್ದರೂ ಸುಪ್ರೀಂಕೋರ್ಟ್ ತೀರ್ಪನ್ನು ಅನುಸರಿಸಬೇಕಾಗಿದೆ.