ಹಗಲು-ರಾತ್ರಿ ಟೆಸ್ಟ್ ಪಂದ್ಯವಾಡುವ ಪ್ರಸ್ತಾಪವನ್ನು ನ್ಯೂಜಿಲೆಂಡ್ ತಿರಸ್ಕರಿಸಿದ ಬಳಿಕ ಬಿಸಿಸಿಐ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯನ್ನು ಸಂಪರ್ಕಿಸಿದೆ. ಇಸಿಬಿ ಈ ಕುರಿತು ತನ್ನ ನಿರ್ಧಾರವನ್ನು ಇನ್ನೂ ತಿಳಿಸಬೇಕಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ ಮುಂದಿನ ವರ್ಷ ಭಾರತ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಹಗಲು-ರಾತ್ರಿ ಟೆಸ್ಟ್ ಆಡುವ ಕುರಿತು ಆ ರಾಷ್ಟ್ರದ ಜತೆ ಕೂಡ ಮಾತುಕತೆ ನಡೆಸುತ್ತಿದೆಯೆಂದು ನಂಬಲಾಗಿದೆ.
ಭಾರತದ ಪಿಚ್ ಪರಿಸ್ಥಿತಿಗಳಲ್ಲಿ ನಸುಗೆಂಪು ಚೆಂಡಿನ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳುವ ಕುರಿತು ನ್ಯೂಜಿಲೆಂಡ್ ಶಂಕೆ ವ್ಯಕ್ತಪಡಿಸಿ ಕೆಲವು ವಾರಗಳ ಹಿಂದೆ ಬಿಸಿಸಿಐಗೆ ಈ ಕುರಿತು ಮಾಹಿತಿ ನೀಡಿದೆ. ನ್ಯೂಜಿಲೆಂಡ್ ಮಂಡಳಿಯು ಭಾರತದ ಪಿಚ್ ಪರಿಸ್ಥಿತಿಗಳ ಬಗ್ಗೆ ಹಿತಕರ ಅನುಭವ ಇಲ್ಲದಿರುವುದರಿಂದ ಹಗಲು-ರಾತ್ರಿ ಟೆಸ್ಟ್ ಆಡಲು ನಿರಾಕರಿಸಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ನ್ಯೂಜಿಲೆಂಡ್ ಆಸ್ಟ್ರೇಲಿಯಾ ವಿರುದ್ಧ ಮೊದಲ ಹಗಲು-ರಾತ್ರಿ ಟೆಸ್ಟ್ ಆಡಿದ್ದು, ಇರುಳಿನಲ್ಲಿ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಸುಲಭವಾಗಿ ಆಟಗಾರರಿಗೆ ಕಂಡಿಲ್ಲ. ಆದ್ದರಿಂದ ಬಿಸಿಸಿಐ ಇಸಿಬಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಜತೆ ಸಂಪರ್ಕಿಸಿ, ಭಾರತಕ್ಕೆ ಪ್ರವಾಸ ಕೈಗೊಂಡಾಗ ಹಗಲು-ರಾತ್ರಿ ಟೆಸ್ಟ್ ಆಡಲು ಆಸಕ್ತಿ ಇದೆಯಾ ಎಂದು ಕೇಳಿದೆ.
ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಕೊಲ್ಕತಾದ ಎಡೆನ್ ಗಾರ್ಡನ್ಸ್‌ನಲ್ಲಿ ಆಡಿಸಲು ಗಂಗೂಲಿ ಆಸಕ್ತಿ ಹೊಂದಿದ್ದರು. ಆದರೆ ಮುಂಬೈ ವಾಂಖಡೆ ಸ್ಟೇಡಿಯಂ ಹಗಲು ರಾತ್ರಿ ಪಂದ್ಯದ ಆತಿಥ್ಯ ವಹಿಸುವ ಸಾಲಿನಲ್ಲಿದೆ. ಆಸ್ಟ್ರೇಲಿಯಾ ನಸುಗೆಂಪು ಚೆಂಡಿನ ಟೆಸ್ಟ್ ಪಂದ್ಯದಲ್ಲಿ ಆಡುವ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದಿದ್ದರೂ, ಸಿಎ ಮತ್ತು ಬಿಸಿಸಿಐ ಆಗಸ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಭಾರತ ಎ ತಂಡದ ಪ್ರವಾಸದ ಸಂದರ್ಭದಲ್ಲಿ ನಸುಗೆಂಪು ಚೆಂಡಿನಲ್ಲಿ ಆಡಿಸಲು ಒಪ್ಪಿಕೊಂಡಿವೆ.
ನಸುಗೆಂಪು ಚೆಂಡನ್ನು ತಯಾರಿಸುವ ಕಂಪನಿ ಕೋಕಾಬುರಾ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಕೆಲವು ಮಾದರಿಗಳನ್ನು ಕಳಿಸಲಿದೆ. ಚೆಂಡು ತನ್ನ ಹೊಳಪನ್ನು ಉಳಿಸಿಕೊಂಡರೆ, ಸ್ಪರ್ಧೆಯಲ್ಲಿ ಸತ್ವ ಇರುವುದಿಲ್ಲ. ಹೊಳಪು ಹಾಗೇ ಉಳಿದರೆ ಚೆಂಡು ಹೆಚ್ಚು ಸ್ವಿಂಗ್ ಆಗುತ್ತದೆ ಮತ್ತು ಸ್ಪಿನ್ನರುಗಳಿಗೆ ಯಾವುದೇ ಉಪಯೋಗವಿಲ್ಲ. ಆದ್ದರಿಂದ ಅದನ್ನು ಎನ್‌ಸಿಎಯಲ್ಲಿ ಪರೀಕ್ಷಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.