ಬೆಂಗಳೂರು: ಕರ್ನಾಟಕ ಮೂಲದ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ವಂಚನೆ ಪ್ರಕರಣವೊಂದರಲ್ಲಿ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಏನಿದು ಪ್ರಕರಣ? ಇಲ್ಲಿದೆ ವಿವರ.
ರಾಬಿನ್ ಉತ್ತಪ್ಪ ಬೆಂಗಳೂರಿನಲ್ಲಿ ತಮ್ಮದೇ ಒಂದು ಕಂಪನಿ ನಡೆಸುತ್ತಿದ್ದಾರೆ. ಸೆಂಚುರಿಸ್ ಲೈಫ್ ಸ್ಟೈಲ್ ಬ್ರ್ಯಾಂಡ್ ಪ್ರೈವೇಟ್ ಲಿಮಿಟೆಡ್ ಎನ್ನುವ ಕಂಪನಿ ಇದಾಗಿದ್ದು, ಈ ಸಂಸ್ಥೆಯ ಉದ್ಯೋಗಿಗಳಿಗೆ ವಂಚನೆ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಕಂಪನಿಯ ಉದ್ಯೋಗಿಗಳ ವೇತನದಿಂದ ಪಿಎಫ್ ಹಣ ಕಡಿತ ಮಾಡಿ ಅವರ ಖಾತೆಗೆ ಹಣ ಹಾಕದೇ ವಂಚಿಸಿದ್ದಾರೆ ಎಂಬುದು ಆರೋಪ.
ಸುಮಾರು 23 ಲಕ್ಷ ರೂ.ಗಳಷ್ಟು ಹಣವನ್ನು ಉದ್ಯೋಗಿಗಳಿಗೆ ನೀಡದೇ ರಾಬಿನ್ ಉತ್ತಪ್ಪ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಅವರ ವಿರುದ್ಧ ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೀಗ ಅವರನ್ನು ಬಂಧಿಸಲು ವಾರೆಂಟ್ ಜಾರಿಯಾಗಿದೆ. ಇತ್ತೀಚೆಗಷ್ಟೇ ಉತ್ತಪ್ಪ ಸಂದರ್ಶನವೊಂದರಲ್ಲಿ ಬೆಂಗಳೂರಿನ ಟ್ರಾಫಿಕ್ ನಲ್ಲಿ ನನ್ನ ಮಕ್ಕಳು ಜೀವನದ ಸಮಯವನ್ನೆಲ್ಲಾ ಕಳೆಯುವುದು ಬೇಡವೆನಿಸಿತು. ಆ ಕಾರಣಕ್ಕೆ ದುಬೈಗೆ ಶಿಫ್ಟ್ ಆಗಿದ್ದೇನೆ ಎಂದಿದ್ದರು. ಅವರ ಈ ಹೇಳಿಕೆಗೆ ನೆಟ್ಟಿಗರಿಂದ ಟೀಕೆ ಎದುರಾಗಿತ್ತು. ಇದೀಗ ತಮ್ಮ ಕಂಪನಿಯ ಉದ್ಯೋಗಿಗಳಿಗೆ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ.