Select Your Language

Notifications

webdunia
webdunia
webdunia
webdunia

ಪಿಎಫ್ ವಂಚನೆ ಆರೋಪದಡಿ ರಾಬಿನ್ ಉತ್ತಪ್ಪಗೆ ಬಂಧನ ವಾರಂಟ್: ಮೌನ ಮುರಿದ ಕ್ರಿಕೆಟಿಗ

Cricketer Robin Uthappa

Sampriya

ಬೆಂಗಳೂರು , ಭಾನುವಾರ, 22 ಡಿಸೆಂಬರ್ 2024 (10:00 IST)
Photo Courtesy X
ಬೆಂಗಳೂರು: ಇಪಿಎಫ್ ಹಣ ವಂಚಿಸಿದ ಆರೋಪದ ಮೇಲೆ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಬಂಧನದ ವಾರಂಟ್ ಜಾರಿಗೊಳಿಸಲಾಗಿದೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಉತ್ತಪ್ಪ ಅವರು ಸೆಂಚುರೀಸ್ ಲೈಫ್-ಸ್ಟೈಲ್ ಬ್ರ್ಯಾಂಡ್ ಪ್ರೈವೇಟ್‌ ಲಿಮಿಟೆಡ್ ಎಂಬ ಖಾಸಗಿ ಕಂಪನಿಯ ಸಹ ಪಾಲುದಾರರಾಗಿದ್ದಾರೆ. ಕಂಪನಿಯ ಕೆಲ ಉದ್ಯೋಗಿಗಳ ಭವಿಷ್ಯ ನಿಧಿ ಹಣ ಪಾವತಿಸಿಲ್ಲ. ಸಂಬಳದಲ್ಲಿ ಭವಿಷ್ಯ ನಿಧಿ ಹಣ ಕಡಿತಗೊಳಿಸಿಕೊಂಡು, ಉದ್ಯೋಗಿಗಳ ಖಾತೆಗೆ ಹಾಕದೇ ₹ 23 ಲಕ್ಷ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಅವರಿಗೆ ಡಿಸೆಂಬರ್ 4ರಂದು ಬಂಧನದ ವಾರಂಟ್ ಜಾರಿಗೊಳಿಸಲಾಗಿದೆ.

ಕೆಲ ವರ್ಷಗಳ ಹಿಂದೆಯೇ ಪ್ರಸ್ತುತ ಆರೋಪ ಕೇಳಿ ಬಂದಿರುವ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೆ. ಈ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿದ್ದಾರೆ.

2018-19ರಲ್ಲಿ ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈವೇಟ್ ಲಿಮಿಟೆಡ್, ಸೆಂಟಾರಸ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್, ಬೆರ್ರೀಸ್ ಫ್ಯಾಶನ್ ಹೌಸ್ ಕಂಪನಿಗಳಿಗೆ ನಾನು ಸಾಲದ ರೂಪದಲ್ಲಿ ಹಣ ಹೂಡಿಕೆ ಮಾಡಿದ್ದೆ. ಇದಕ್ಕಾಗಿ ಆ ಕಂಪನಿಗಳು ನನ್ನನ್ನ ನಿರ್ದೇಶಕನಾಗಿ ನೇಮಕ ಮಾಡಿದ್ದವು. ಆದಾಗ್ಯೂ ಸಹ ನಾನು ಈ ಕಂಪನಿಗಳಲ್ಲಿ ಯಾವುದೇ ಸಕ್ರಿಯ ಕಾರ್ಯನಿರ್ವಾಹಕ ಪಾತ್ರ ಹೊಂದಿರಲಿಲ್ಲ ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.

ವೃತ್ತಿಪರ ಕ್ರಿಕೆಟಿಗ, ನಿರೂಪಕ, ವೀಕ್ಷಕ ವಿವರಣೆಗಾರನಾಗಿ ಇದ್ದಿದ್ದರಿಂದ ಆ ಕಂಪನಿಗಳ ಕೆಲಸಗಳಲ್ಲಿ ಭಾಗವಹಿಸಲು ನನಗೆ ಸಮಯವಿರಲಿಲ್ಲ. ವಾಸ್ತವವಾಗಿ ನಾನು ಈವರೆಗೂ ಹಣ ಹೂಡಿಕೆ ಮಾಡಿದ ಇತರೆ ಕಂಪನಿಗಳಲ್ಲಿಯೂ ಕಾರ್ಯನಿರ್ವಾಹಕನಾಗಿ ಕೆಲಸ ಮಾಡಿಲ್ಲ. ಈಗ ಆರೋಪ ಹೊತ್ತಿರುವ ಕಂಪನಿಗಳು ನಾನು ಸಾಲದ ರೂಪದಲ್ಲಿ ನೀಡಿದ ಹಣವನ್ನು ಮರುಪಾವತಿಸಲು ವಿಫಲವಾಗಿವೆ. ಹೀಗಾಗಿ ನಾನು ಹಲವು ವರ್ಷಗಳ ಹಿಂದೆಯೇ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆ ಕಂಪನಿಗಳ ವಿರುದ್ಧ ಪ್ರಸ್ತುತ ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ ಎಂದು ಅವರು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಈ ವಿಷಯವನ್ನು ಬಗೆಹರಿಸಲು ನನ್ನ ಪರ ಕಾನೂನು ಸಲಹೆಗಾರರು ಕ್ರಮ ಕೈಗೊಳ್ಳಲಿದ್ದಾರೆ ಎಂದೂ ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಜಿತ್‌ ಆರ್ಭಟಕ್ಕೆ ಬೆಚ್ಚಿದ ಮುಂಬೈ: ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕಕ್ಕೆ ಭರ್ಜರಿ ಜಯ