ಉಸಿರು ಬಿಗಿಹಿಡಿಸಿದ ಆ ಕೊನೆಯ ಓವರ್ ಬಹುಶಃ ಯಾವುದೇ ಕ್ರಿಕೆಟ್ ಪ್ರೇಮಿಯೂ ಮರೆಯುವಂಥದ್ದಲ್ಲ. ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯವೆಂದರೆ ಜನಪ್ರವಾಹ ಹೇಗಿರುತ್ತದೆಯೆಂಬುದನ್ನು ಬರಿ ಹೇಳಿ ಕೇಳಿ ಗೊತ್ತಿದ್ದ ಹಲವರು ಅಂದು ಪ್ರತ್ಯಕ್ಷವಾಗಿ ನೋಡಿ ದಂಗು ಬಡಿದಿದ್ದರು. ಮತ್ತೊಂದೆಡೆ ಇದನ್ನು ಕಾಮೆಂಟೇಟರುಗಳು 'ದಿಸ್ ಈಸ್ ಎಕ್ಸಾಕ್ಟ್ಲೀ ಏನ್ ಎಕ್ಸಾಂಪಲ್ ಫಾರ್ ಟ್ರೆಡಿಷನಲ್ ಇಂಡಿಯಾ ಪಾಕಿಸ್ತಾನ್ ಮ್ಯಾಚ್' ಎಂದು ಬೊಬ್ಬೆ ಹೊಡೆಯುತ್ತಿದ್ದರು. ಇಂದು ದ.ಆಫ್ರಿಕಾದಲ್ಲಿ ನಡೆದ 2007ರ ಚೊಚ್ಚಲ ಟ್ವೆಂಟಿ-ಟ್ವೆಂಟಿ ಎಂಬ ಹೊಡೆಬಡಿಯ ವಿಶ್ವಕಪ್ ಕ್ರಿಕೆಟ್ ಕೂಟದ ಭಾರತ ಪಾಕ್ ರೋಚಕ ಫೈನಲ್ ನಡೆದ ದಿನ. ಅಗ್ರ ಆಟಗಾರರ ಅನುಪಸ್ಥಿತಿಯಲ್ಲಿ ತಂಡದ ಚುಕ್ಕಾಣಿ ಹಿಡಿದಿದ್ದ ಮಹೇಂದ್ರ ಸಿಂಗ್ ಧೋನಿಗೇ ಬಹುಶಃ ತಂಡ ಅರ್ಹತಾ ಸುತ್ತಿನಿಂದ ಮೇಲೆ ಬರುವ ವಿಶ್ವಾಸವಿತ್ತೋ ಇಲ್ಲವೋ. ಆದರೆ ಕೊನೆಗೆ ಯುವ ಉತ್ಸಾಹಿಗಳು ತಮ್ಮ ಸಾಮರ್ಥ್ಯವನ್ನು ಮೆರೆದು ಯಾರೂ ಊಹಿಸಿರದ ರೀತಿಯಲ್ಲಿ ಗೆದ್ದು ಬೀಗಿದ್ದು ಇದೇ ದಿನ.ಅದರಲ್ಲೂ ಅದುವರೆಗೆ ರಾಷ್ಟ್ರೀಯ ತಂಡಕ್ಕೆ ಬರಲು ಹವಣಿಸುತ್ತಿದ್ದ ಜೋಗಿಂದರ್ ಶರ್ಮಾ, ಯೂಸುಫ್ ಪಠಾಣ್, ರಾಬಿನ್ ಉತ್ತಪ್ಪ, ಗೌತಮ್ ಗಂಭೀರ್‌ರೇ ಕೊನೆಗೆ ಕಿರೀಟ ತೊಡಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಅದಕ್ಕೆ ಟಿ-20 ನನ್ನ ಕ್ರಿಕೆಟ್ ಜೀವನವನ್ನೇ ಬದಲಾಯಿಸಿತು ಎಂದು ಹೇಳುವ ಇರ್ಫಾನ್ ಮಾತಿನಲ್ಲೂ ಅರ್ಥವಿದೆ ಎಂದೆನಿಸುತ್ತದೆ.
ಉಸಿರು ಕಟ್ಟಿಸುವ, ನಾಯಕತ್ವಕ್ಕೇ ಸವಾಲೆಸೆಯುವ ಕೊನೆಯ ಓವರ್‌ನ ಒತ್ತಡ ಯುವ ಧೋನಿಗೆ ಎದುರಾದಾಗ ಅನೇಕ ಮಂದಿ ಟಿವಿ ಆಫ್ ಮಾಡಿ ಛೇ ಭಾರತಕ್ಕೆ ಹೀಗಾಗಬಾರದಿತ್ತು ಎಂದು ಲೊಚಗುಟ್ಟಿದ್ದರು. ಅದಕ್ಕೂ ಕಾರಣವಿತ್ತು.
ಪಾಕಿಸ್ತಾನಕ್ಕೆ ಗೆಲ್ಲಲು ಕೇವಲ 158 ರನ್ ಮಾಡಿದ್ದರೆ ಸಾಕು. ಭಾರತದ ಪರ ಗಂಭೀರ್ 54 ಬಾಲ್‌ಗಳಲ್ಲಿ 75 ಮಾಡಿದ್ದು ಬಿಟ್ಟರೆ ಇಂಗ್ಲೆಂಡ್ ಪಂದ್ಯದ ನಂತರ ಸಿಕ್ಸರ್ ರಾಜ ಎನಿಸಿಕೊಂಡಿದ್ದ ಯುವರಾಜ್, ನಾಯಕ ಧೋನಿ ಅಲ್ಪ ಮೊತ್ತಕ್ಕೆ ಪೆವಿಲಿಯನ್ ಸೇರಿಕೊಂಡಿದ್ದಾಗಿತ್ತು. ಹಾಗೂ ಹೀಗೂ 157 ರನ್ ಪೇರಿಸಿದಾಗ ಎಲ್ಲರ ಮುಖದಲ್ಲೂ ನಿರಾಸೆ ಮೂಡಿದ್ದರೂ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಉತ್ತಮ ದಾಖಲೆಯಿದ್ದುದರಿಂದ ಭರವಸೆಯೊಂದು ಮೂಲೆಯಲ್ಲಿತ್ತು ಕಂಡೂ ಕಾಣದಂತಿತ್ತು.
ಒಂದು ಹಂತದಲ್ಲಿ ಇದನ್ನೆಲ್ಲಾ ಪುಷ್ಟೀಕರಿಸುವಂತೆ ಇರ್ಫಾನ್ ಪಠಾಣ್‌ರ ಮಾರಕ ಆರಂಭಿಕ ದಾಳಿಗೆ ಸಿಲುಕಿ ಪಾಕ್ ಅಗ್ರ ಆಟಗಾರರು ಬಾಲ ಮುದುರಿಕೊಂಡಾಗ ಭಾರತದ ಆಸೆ ಚಿಗುರೊಡೆದಿತ್ತು. ಆದರೆ ಒಂಟಿ ಸಲಗದಂತೆ ಏಕಾಂಗಿಯಾಗಿ ಹೋರಾಡುತ್ತಿದ್ದ ಮಿಸ್ಬಾ ಉಲ್ ಹಕ್ ಪಾಕ್ ಆಸೆಯನ್ನೂ ಜೀವಂತವಾಗಿರಿಸಿದ್ದರಲ್ಲದೆ ಪಂದ್ಯವನ್ನು ಇನ್ನಷ್ಟು ರೋಚಕತೆಗೆ ತಳ್ಳಿದ್ದರು.
ಕೊನೆಯ ಓವರ್‌ನಲ್ಲಿ ಪಾಕ್‌ಗೆ ಬೇಕಿದ್ದಿದ್ದು 13 ರನ್. ಒಂದು ವಿಕೆಟ್ ಕೈಯಲ್ಲಿತ್ತು. ಮಿಸ್ಬಾ ಕ್ರೀಸಿನಲ್ಲಿದ್ದರು. ದೀರ್ಘ ಯೋಚನೆಯ ನಂತರ ಧೈರ್ಯ ಮಾಡಿ ಧೋನಿ ಬಾಲ್ ಕೊಟ್ಟದ್ದು ಜೋಗಿಂದರ್ ಶರ್ಮಾ ಎಂಬ ಯುವ ಬೌಲರ್ ಕೈಗೆ.
ಅಂತೂ ಓವರ್ ಪ್ರಾರಂಭವಾಗಿತ್ತು. ಮೊದಲ ಬಾಲ್ ವೈಡ್ ಆದಾಗ ಎದೆ ಡಬ್ ಎನಿಸಿತ್ತು. ಆದರೆ ಎರಡನೇ ಬಾಲ್‌ನ್ನು ರನ್ ಆಗಿ ಪರಿವರ್ತಿಸುವಲ್ಲಿ ಮಿಸ್ಬಾ ಎಡವಿದಾಗ ಭಾರತೀಯರೆಲ್ಲರಲ್ಲೂ ನಿಟ್ಟುಸಿರೊಂದು ಬಂದಿತ್ತು. ಈಗ ಉಳಿದ ಐದು ಬಾಲ್‌ಗಳಿಂದ 12 ರನ್ ತೆಗೆಯುವ ಅನಿವಾರ್ಯತೆ ಪಾಕಿಸ್ತಾನಕ್ಕಿತ್ತು. ಮೂರನೇ ಬಾಲ್ ಮಿಸ್ಬಾ ಮಿಡ್ ವಿಕೆಟ್ ಕಡೆಗೆ ಲಾಫ್ಟ್ ಶಾಟ್ ಹೊಡೆದಾಗ ಜಂಘಾಬಲವನ್ನೇ ಉಡುಗಿಸಿತ್ತು. ಇನ್ನುಳಿದ ಮೂರು ಬಾಲ್‌ಗಳಿಂದ ಕೇವಲ ಆರು ರನ್ ಪಡೆದರೆ ಪಾಕ್ ಗೆಲ್ಲುತ್ತಿತ್ತು.
ಆದರೆ ಆದದ್ದೇ ಬೇರೆ. ಮಿಸ್ಬಾರ ಹಣೆಬರಹದೊಂದಿಗೆ ಪಾಕಿಸ್ತಾನದ ಗ್ರಹಚಾರವೂ ಸರಿಯಿರಲಿಲ್ಲ.. ಮುಂದಿನ ಬಾಲ್‌ನ್ನೂ ಮತ್ತೊಮ್ಮೆ ಕಣ್ಣು ಮುಚ್ಚಿ ಸಿಕ್ಸರ್‌ಗಟ್ಟಲು ನೋಡಿದ ಮಿಸ್ಬಾರ ಪ್ರಯತ್ನ ಈ ಬಾರಿ ಕೈಕೊಟ್ಟಿತ್ತು. ಎತ್ತರಕ್ಕೆ ಹಾರಿದ ಚೆಂಡು ಅರೆ ಗಳಿಗೆ ಎಲ್ಲಿ ಹೋಯಿತೆಂದು ಯಾರಿಗೂ ಗೊತ್ತಾಗಲಿಲ್ಲ. ಮರುಕ್ಷಣ ವಿಕೆಟ್ ಹಿಂದೆ ಶ್ರೀಶಾಂತ್ ಕಣ್ಣು ರೆಪ್ಪೆ ಮಿಟುಕಿಸದೆ ಏಕಾಗ್ರತೆಯಿಂದ ನೋಡುತ್ತಾ ಗಬಕ್ಕನೆ ಕ್ಯಾಚ್ ಹಿಡಿದಾಗ....! ಭಾರತ ಮೊದಲ ಟಿ-ಟ್ವೆಂಟಿ ವಿಶ್ವಕಪ್ ಮತ್ತು ಎರಡನೇ ಬಾರಿ ಜಾಗತಿಕ ಕಪ್ ಎತ್ತಿದ ಹಿರಿಮೆಯನ್ನು ತನ್ನದಾಗಿಸಿಕೊಂಡಿತ್ತು!
ಏಕಾಏಕಿ ಧೋನಿ ಪಡೆಯ ಯುವಕರು ಹೀರೋಗಳಾಗಿದ್ದರು... ಭಾರತೀಯ ಕ್ರಿಕೆಟ್‌ನಲ್ಲಿ ಎಷ್ಟೆಷ್ಟೋ ಬದಲಾವಣೆಗಳನ್ನು ತಂದ ಟಿ-ಟ್ವೆಂಟಿ ಎಂಬ ಹೊಸ ಆಯಾಮದ ಕ್ರಿಕೆಟ್ ವೈಖರಿ ಜಾಗತಿಕ ಕ್ರಿಕೆಟ್‌ನಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ ಭಾರತಕ್ಕೆ ಹಲವು ಭಾವೀ ಕ್ರಿಕೆಟರುಗಳನ್ನು ಕೊಡುಗೆಯಾಗಿ ನೀಡಿತು.
ಭಾರತ ಕ್ರಿಕೆಟ್ ಚರಿತ್ರೆಯಲ್ಲಿ ಎಂದೂ ಅಳಿಸಲಾಗದ ಅಚ್ಚಳಿಯದ ನೆನಪಾಗಿ ಉಳಿದ ಈ ದಿನ ಮತ್ತೊಮ್ಮೆ ಮಗದೊಮ್ಮೆ ಮರುಕಳಿಸಲಿ ಎಂದು ಭಾರತೀಯರ ಹಾರೈಕೆ.