ಮುಂಬೈ: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನರಾಗಿದ್ದಾರೆ ಎಂಬ ಸುದ್ದಿಗಳು ಸುಳ್ಳು. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬಸ್ಥರೇ ಸ್ಪಷ್ಟನೆ ನೀಡಿದ್ದಾರೆ.
ಬಾಲಿವುಡ್ ನ ಎವರ್ ಗ್ರೀನ್ ಹೀರೋ ಧರ್ಮೇಂದ್ರ ನಿಧನರಾಗಿದ್ದಾರೆ ಎಂದು ಇಂದು ಬೆಳಿಗ್ಗೆ ಭಾರೀ ಸುದ್ದಿಯಾಗಿತ್ತು. ಅವರ ನಿಧನದ ಸುದ್ದಿಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದರು. ಆದರೆ ಈ ಸುದ್ದಿ ಸುಳ್ಳು ಎಂದು ಪುತ್ರ ಸನ್ನಿ ಡಿಯೋಲ್ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.
ಧರ್ಮೇಂದ್ರಗೆ ಅನಾರೋಗ್ಯವಾಗಿ ಆಸ್ಪತ್ರೆಗೆ ದಾಖಲಾಗಿರುವುದು ನಿಜ. ಆದರೆ ಅವರ ಪರಿಸ್ಥಿತಿ ಈಗ ಸುಧಾರಿಸುತ್ತಿದೆ. ಸದ್ಯದಲ್ಲೇ ಅವರ ಆರೋಗ್ಯದ ಬಗ್ಗೆ ಪ್ರಕಟಣೆ ನೀಡಲಿದ್ದೇವೆ. ಅವರ ಆರೋಗ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದಾರೆ.
ಇನ್ನು, ಪತ್ನಿ ಹೇಮಮಾಲಿನಿ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದು, ಇದು ಅಕ್ಷಮ್ಯ. ಮಾಧ್ಯಮಗಳೇ ಈ ರೀತಿ ದೃಢೀಕರಿಸದೇ ಸುಳ್ಳು ಸುದ್ದಿ ಹಬ್ಬಿಸಿದರೆ ಹೇಗೆ? ಧರ್ಮೇಂದ್ರ ಕುಟುಂಬಕ್ಕೆ ಗೌರವ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.