Publish Date: Tue, 20 Jan 2009 (17:57 IST)
Updated Date: Tue, 20 Jan 2009 (17:57 IST)
ಚಿಂದಿಯಾದ ಯಾರ‌್ಯಾರದೋ ಬದುಕನ್ನು ಹಸಿಬಿಸಿಯಾಗಿ ತೋರಿಸಿ ದುಡ್ಡು ಮಾಡುವ ಸಿನಿಮಾ ಮಂದಿ ದಾನ ಮಾಡುವುದರಲ್ಲಿ ಹಿಂದೆ ಎಂದು ನಮಗೆ ಗೊತ್ತೇ ಇದೆ. ಒಂದಷ್ಟು ಕೋಟಿ ಲಾಭವಾಯಿತೆಂದಾಗ ಮತ್ತೊಂದು ಚಿತ್ರಕ್ಕೆ ಸ್ಕೆಟ್ ಹಾಕುವ ವಕ್ರ ಬುದ್ಧಿ ಅವರದ್ದು. ಬಿಡಿ - ಅವರದ್ದೇನಿದ್ದರೂ ಕಲೆಯ ಹೆಸರಿನಲ್ಲಿ ನಡೆಯುತ್ತಿರುವ ಬಿಸಿನೆಸ್.
ಆದರೆ ಇಲ್ಲೊಂದು ವ್ಯತಿರಿಕ್ತ ಪ್ರಕರಣ ವರದಿಯಾಗಿದೆ. ನಮ್ಮ ಬಾಲಿವುಡ್ ಬಾದ್‌ಶಾ ಶಾರೂಖ್ ಖಾನ್ ರೀಲ್‌ನಿಂದ ಹೊರಗೂ ಹೀರೋ ಆಗಿದ್ದಾರೆ. ಶ್ರೀನಗರದಲ್ಲಿ ಗ್ರೆನೇಡ್ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಇಬ್ಬರು ಪುಟ್ಟ ಕಂದಮ್ಮಗಳಿಗೆ ಆಸರೆಯಾಗಿದ್ದಾರೆ.
ಮುಂಬೈಯಲ್ಲಿನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಶಾರೂಖ್ ತೆಗೆದುಕೊಂಡಿದ್ದಾರಂತೆ. ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರ ಮೂಲಕ ವಿಚಾರ ತಿಳಿದುಕೊಂಡ ಶಾರೂಖ್ ಖಾನ್ ನೆರವಿಗಾಗಿ ಧಾವಿಸಿದ್ದಾರೆ. ಮುದ್ಧಾಸರ್ (5) ಮತ್ತು ಅಮೀನಾ (3) ಎಂಬ ಇಬ್ಬರು ಅನಾಥ ಮಕ್ಕಳನ್ನು ಕಂಡು ಮರುಗಿದ ನಟ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ತನ್ನ ತಾಯಿಯ ಹೆಸರಿನಲ್ಲಿ 50 ಲಕ್ಷ ರೂಪಾಯಿಗಳನ್ನು ದಾನ ರೂಪವಾಗಿ ಕೊಟ್ಟಿದ್ದಾರೆ. ಅಲ್ಲದೆ ತನ್ನ ಮಕ್ಕಳಿಗೆ ನೀವು ಗುಣಮುಖರಾದ ನಂತರ ನಿಮ್ಮನ್ನು ಪರಿಚಯಿಸುವುದಾಗಿ ಕೂಡ ಹೇಳಿದ್ದಾರಂತೆ ಶಾರೂಖ್. ಆ ಮಕ್ಕಳು ಕೂಡ ತುಂಬಾ ಖುಷಿಯಿಂದ ಶಾರೂಖ್ ಮಕ್ಕಳನ್ನು ಶ್ರೀನಗರಕ್ಕೆ ಆಹ್ವಾನಿಸಲಿದ್ದಾರಂತೆ.
ಇಷ್ಟು ದೊಡ್ಡ ಮೊತ್ತವನ್ನು ಧನ ಸಹಾಯ ಅಂತ ಕೊಡುವ ಮಹಾನುಭಾವರು ಯಾರಿದ್ದಾರೆ ಹೇಳಿ? ಹಂಚಿ ತಿನ್ನುವ ಪಾಠವನ್ನು ಬಾದ್‌ಶಾ ಹೇಳಿಕೊಟ್ಟಿದ್ದಾರೆ. 'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರದ ಬಗ್ಗೆ ಟೀಕಿಸುವ ಶ್ರೀಮಂತರು ಈ ದಾರಿಯನ್ನು ತುಳಿಯ ಬಹುದು. ಆ ರೀತಿ ಮಾಡುವ ಮೂಲಕ ಭಾರತದ ಬಡತನವನ್ನು ವಿಶ್ವಕ್ಕೆ ತೋರಿಸುವ ಚಿತ್ರ ಮತ್ತೆ ಬಾರದಂತೆ ನೋಡಿಕೊಳ್ಳಬಹುದು.