ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರ ಮೆಚ್ಚುಗೆ ಗಳಿಸಿದ್ದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸದ್ಯದಲ್ಲೇ ಚಿತ್ರವೊಂದರ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಹೆಸರು 'ಮೈ ಕಲಾಂ ಹೂಂ'!
ಡಾ. ಅಬ್ದುಲ್ ಕಲಾಂ ಏರೋನಾಟಿಕಲ್ ಎಂಜಿನಿಯರ್ ಹಾಗೂ ವಿಜ್ಞಾನಿ. ಯುದ್ಧ ವಿಮಾನಗಳು ಹಾಗೂ ರಾಕೆಟ್ ಟೆಕ್ನಾಲಜಿಯಲ್ಲಿ ಕಲಾಂ ಗಳಿಸಿದ್ದ ಜ್ಞಾನ ಅಪಾರ. ಅಷ್ಟೇ ಪ್ರಸಿದ್ಧಿ ಕೂಡಾ. 'ಮಿಸೈಲ್ ಮ್ಯಾನ್ ಆಫ್ ಇಂಡಿಯಾ' ಎಂದೇ ಖ್ಯಾತಿವೆತ್ತ ಕಲಾಂ ಮಕ್ಕಳ ಜತೆಗೆ ಚಿತ್ರದಲ್ಲಿ ನಟಿಸಿದ್ದಾರೆ. ಮಾಧವ್ ಪಾಂಡೆಯಾ ನಿರ್ದೇಶಿಸಿರುವ ಈ ಚಿತ್ರವನ್ನು ಸ್ಮೈಲ್ ಫೌಂಡೇಶನ್ ನಿರ್ಮಿಸುತ್ತಿದೆ. ಮಕ್ಕಳೆಂದರೆ ತುಂಬ ಇಷ್ಟಪಡುವ ಅಬ್ದುಲ್ ಕಲಾಂ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದು, ಮಕ್ಕಳ ಜತೆಗೆ ಕೆಲಕಾಲ ಕಳೆಯಲಾಗುತ್ತದೆ ಎಂಬ ಕಾರಣದಿಂದ..!
ಚಿತ್ರದ ಕಥೆಯೂ ಕೂಡಾ ಅಷ್ಟೆ. ಕಲಾಂ ಬದುಕಿನಲ್ಲಿ ಅನುಸರಿಸಿದ ಹಾಗೂ ಅನುಸರಿಸಲು ಮಕ್ಕಳಿಗೆ ಕರೆಕೊಟ್ಟ ತತ್ವಗಳ ಮೇಲೆಯೇ ನಿಂತಿದೆ. ಪ್ರತಿಯೊಬ್ಬನಿಗೂ ಕನಸು ಕಾಣುವ ಸ್ವಾತಂತ್ರ್ಯವಿದೆ. ಹಾಗಾಗಿ ದೊಡ್ಡ ಕನಸು ಕಾಣಿ ಎಂದಿದ್ದರು ಕಲಾಂ. ತಾವೂ ಕೂಡಾ ದೊಡ್ಡ ಕನಸು ಕಂಡು ಅದನ್ನು ಸಾಕಾರಗೊಳಿಸಿದವರು ಕಲಾಂ. ಈ ಕಥೆಯೂ ಅದೇ ನಂಬಿಕೆಯ ತಳಹದಿಯ ಮೇಲೆ ನಿಂತಿದೆ. ಚಿತ್ರದಲ್ಲಿ ಗುಲ್ಶನ್ ಗ್ರೋವರ್, ಫ್ರೆಂಚ್ ನಟಿ ಸೋಫಿ ಬ್ರಾಸ್ಟೆಲ್ ಜತೆಗೆ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. ಕಲಾಂ ಈ ಚಿತ್ರದಲ್ಲಿ ಅಬ್ದುಲ್ ಕಲಾಂ ಆಗಿಯೇ ವಿಶೇಷವಾಗಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಕಥೆ ರಾಜಸ್ತಾನದ ಕಥಾಹಂದರವನ್ನು ಒಳಗೊಂಡಿದೆ. ಸ್ವಲ್ಪ ಸ್ಲಂ ಡಾಗ್ ಮಿಲಿಯನೇರ್ ಕಥೆಯ ಮಾದರಿಯಲ್ಲೇ ಈ ಚಿತ್ರ ಪ್ರೇರಿತಗೊಂಡಂತಿದೆ. ಗುಲ್ಶನ್ ಹೇಳುವಂತೆ, ರಾಜಸ್ತಾನಿ ಸ್ಲಂ ಒಂದರ ಪುಟ್ಟ ಬಾಲಕ ದೊಡ್ಡ ಕನಸು ಕಾಣುವ ಕಥೆ. ಇದರಲ್ಲಿ ಫ್ರೆಂಚ್ ನಟಿ ಸೋಫಿಗೆ ಸುಲಭದ ಪಾತ್ರ. ಶಾಂತಿ, ಸಂತೋಷವನ್ನು ಅರಸಿ ಭಾರತಕ್ಕೆ ಬರುವ ವಿದೇಶಿ ಪ್ರವಾಸಿಯ ಪಾತ್ರ. ಆಕೆ ಗುಲ್ಶನ್ ಜತೆಗೆ ಪ್ರೇಮದಲ್ಲಿ ಬೀಳುತ್ತಾಳೆ. ಕಥೆಯ ಬಗ್ಗು ಪುಟ್ಟ ಹಿಂಟ್ ನೀಡುವ ಗುಲ್ಶನ್ ಚಿತ್ರದಲ್ಲಿ ಕಲಾಂ ಪಾತ್ರದ ಬಗ್ಗೆ ಹೆಚ್ಚು ವಿವರಿಸಿಲ್ಲ. ಚಿತ್ರ ಕ್ಯಾನೆ ಚಿತ್ರೋತ್ಸವ ಸೇರಿದಂತೆ ವಿಶ್ವದ ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣಲಿದೆಯಂತೆ!