ಸೈಫ್ ಬಯಸುವ ಏಕೈಕ ಮಹಿಳೆ ನಾನು- ಕರೀನಾ
ಬಾಲಿವುಡ್ಡಿನ ಈ ಝೀರೋ ಫಿಗರ್ ಕಪೂರ್ ಕುಡಿ ಕರೀನಾ ಒಂದಿಲ್ಲೊಂದು ಸುದ್ದಿ ಮಾಡುವುದರಲ್ಲಿ ನಿಸ್ಸಿಮೆ. ಒಟ್ಟಿನಲ್ಲಿ ಸದಾ ಸುದ್ದಿಯಲ್ಲಂತೂ ಇರುತ್ತಾಳೆ. ಹಿಂದೆ, ಶಾಹಿದ್, ಈಗ ಸೈಫ್. ಸುದ್ದಿಗಂತೂ ಕೊರತೆಯಿಲ್ಲ. ಇಂತಿಪ್ಪ ಕರೀನಾ ಈಗ ಹೀಗೆ (ಅಂತರಂಗವನ್ನು) ಬಿಚ್ಚಿಟ್ಟಿದ್ದಾಳೆ.''
ಸೈಫ್ ಆಲಿಖಾನ್ ಜೀವನದಲ್ಲಿ ಬಯಸುವ ಏಕೈಕ ಮಹಿಳೆ ಎಂದರೆ ಅದು ನಾನೊಬ್ಬಳೇ'' ಅಂತ ಈ ಕರೀನೆ ಎದೆಯುಬ್ಬಿಸಿ ಹೇಳುತ್ತಾಳೆ. ಸೈಫ್ ಹಳೇ ಸಂಬಂಧ ಮುರಿದು ಬಿದ್ದ ನಂತರ, ಆತ ಜೀವನದಲ್ಲಿ ಏಕಾಂಗಿಯಾಗಿ ಬದುಕಲು ಬಯಸಿದ್ದನಂತೆ. ಎಲ್ಲ ಸಂಬಂಧಗಳನ್ನೂ ಕಳೆದುಕೊಂಡು ಯಾರ ಜತೆಗೂ ಯಾವ ಕಮಿಟ್‌ಮೆಂಟ್‌ಗಳನ್ನೂ ಇಡದೆ ಜೀವಿಸಬೇಕೆಂದು ಸೈಫ್ ಬಯಸಿದ್ದನಂತೆ. (ಆದರೆ ಬಯಸಿದ್ದು ಒಂದು ಆಗಿದ್ದು ಮ್ತತೊಂದು ಅಂತ ಹೇಳಬೇಕಿಲ್ಲ.) ''ಹಾಗಾಗಿ ಆತ ನನ್ನ ಬಳಿ ಯಾವಾಗಲೂ ಹೇಳುತ್ತಿರುತ್ತಾನೆ ನಾನು ನಿಜವಾಗಿಯೂ ಒಬ್ಬ ಮಹಿಳೆಗೆ ಕಮಿಟ್ ಆಗಿರುವುದಾದರೆ ಅದು ನೀನೊಬ್ಬಳೇ'' ಅಂತ. ಹೀಗಾಗಿ ಕರೀನೆಗೆ ಹೆಮ್ಮೆಯೋ ಹೆಮ್ಮೆ.''
ಸೈಫ್ ತುಂಬ ಒಳ್ಳೆಯವನು. ಆತ ತುಂಬ ನನ್ನ ಬಗ್ಗೆ ಕಾಳಜಿ ವಹಿಸುತ್ತಾನೆ, ಜತೆಗೆ ನನ್ನ ಕೆಲಸಗಳಿಗೂ ಸಪೋರ್ಟ್ ಮಾಡುತ್ತಾನೆ. ಪ್ರತಿಯೊಬ್ಬ ಮಹಿಳೆಗೂ ಆಕೆಯ ಕೆರಿಯರ್ ಬಗ್ಗೆ ಕಾಳಜಿಯಿದೆ ಎಂದು ಅರಿತಿರುವ ಪುರುಷ ಎಂದರೆ ಅದು ನನ್ನ ಪಾಲಿಗೆ ಸೈಫ್ ಒಬ್ಬನೇ'' ಎನ್ನುತ್ತಾಳೆ ಈ ಬಿಂಕದ ಸುಂದರಿ ಕರೀನಾ.ಆಕೆಗೆ ನಟಿಯಾಗಬೇಕೆಂಬ ಬಯಕೆಗಿಂತಲೂ ಗಗನಸಖಿಯಾಗುವ ಬಯಕೆಯಿತ್ತಂತೆ. ಆದರೆ ಮನೆಯಲ್ಲಿ ಅಪ್ಪ ಸುತಾರಾಂ ಒಪ್ಪಲಿಲ್ಲ. ಕೊನೆಗೆ ಅಪ್ಪನ ಬೆದರಿಕೆ ಮಣಿದು ಸರ್ಕಾರಿ ಕಾನೂನು ಕಾಲೇಜಿಗೆ ಸೇರಿದಳು. ಕಾನೂನಿನ ದಪ್ಪ ದಪ್ಪ ಪುಸ್ತಕ ಕಂಡು ಹೆದರಿಬಿಟ್ಟ ಈ ಜಿಂಕೆ ಅಲ್ಲಿಂದ ಆರೇ ತಿಂಗಳಿಗೆ ತಪ್ಪಿಸಿಕೊಂಡು ವಾಪಸ್ ಮನೆಗೆ ಓಡಿ ಬಂದಳಂತೆ.ಗಗನಸಖಿಯಾಗಿ ವಿಶ್ವದೆಲ್ಲೆಡೆ ಹಾರಬೇಕು ಎಂದು ಬಯಸಿದ ಕರೀನಾ ಈಗಲೂ ನಟಿಯಾಗಿ ವಿಶ್ವದೆಲ್ಲೆಡೆ ಸುತ್ತುತ್ತಿದ್ದಾಳೆ. ಎಲ್ಲದಕ್ಕೂ ಪಡೆದುಕೊಂಡು ಬಂದಿರಬೇಕು ಅಂತೀರಾ!?