ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಅವರ ದಾಂಪತ್ಯ ಮುರಿದುಬಿದ್ದಿರುವುದಕ್ಕೆ ಕಪೂರ್ ಪತ್ನಿ ಸುಚಿತ್ರ ಕೃಷ್ಣಮೂರ್ತಿ ಈ ಸಂಬಂಧ ತನ್ನನ್ನು ದೂರಿರುವುದಕ್ಕೆ ಬಾಲಿವುಡ್ ನಟಿ ಪ್ರೀತಿ ಜಿಂಟಾ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರೀತಿ ಮತ್ತು ಆಕೆಯ ಗೆಳೆಯ ನೆಸ್ ವಾಡಿಯಾಗೆ ಸುಚಿತ್ರ ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.ಕಪೂರ್‌ರೊಂದಿಗೆ ತನಗೆ ಯಾವ ಸಂಬಂಧ ಇಲ್ಲ ಎಂದು ಹೇಳಿರವ ಪ್ರೀತಿ, ತನ್ನನ್ನು ಆದಷ್ಟು ಬೇಗ ಈ ವಿವಾದದಿಂದ ಮುಕ್ತಗೊಳಿಸುವಂತೆ, ಕಪೂರ್‌ಗೆ ಗಡುವು ನೀಡಿದ್ದಾರೆ.
ತಾನು ವಿವಾದಗಳಲ್ಲಿ ಹೇಗೆ ಸಿಕ್ಕಿಹಾಕಿಕೊಳ್ಳುತ್ತೇನೆ ಎಂದು ತಿಳಿಯುವುದಿಲ್ಲ ಎನ್ನುವ ಪ್ರೀತಿ, ತಾನು ಎಲ್ಲಿ ಈ ವಿಚಾರದಲ್ಲಿ ಬರುತ್ತೇನೆ? ಶೇಖರ್‌ರನ್ನು ಹತ್ತು ವರ್ಷಗಳಲ್ಲಿ ಐದು ಬಾರಿ ಭೇಟಿಯಾಗಿರಬಹುದಷ್ಟೆ. ಅವರು ತನ್ನ ಮೊತ್ತ ಮೊದಲ ಚಿತ್ರ ಮಾಡಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಅವರು ಭಾರತದಲ್ಲಿದ್ದಾಗ ಅವರನ್ನು ಭೇಟಿಯಾಗಿದ್ದೇನೆ ಎಂದು ಪ್ರೀತಿ ಹೇಳುತ್ತಾರೆ.
ವಿಶಾಲ್ ಭಾರದ್ವಾಜ್ ನಿರ್ಮಾಣದ ಮಂತ್ರ ಚಿತ್ರವನ್ನು ಶೇಖರ್ ನಿರ್ದೇಶಿಸಬೇಕಿತ್ತು. ಆ ಸಂದರ್ಭದಲ್ಲಿ ತಾನು ಅವರನ್ನು ಕಡೆಯದಾಗಿ ಭೇಟಿಯಾಗಿದ್ದೆ ಎಂದು ಪ್ರೀತಿ ನುಡಿದಿದ್ದಾರೆ.
ಕಳೆದ ವಾರ ತನ್ನ ಮಗಳನ್ನು ಭೇಟಿಯಾಗಲು ಮುಂಬೈಗೆ ಬಂದಿದ್ದ ಶೇಖರ್ ಕಪೂರ್‌ರವರಿಗೆ, ಪ್ರೀತಿ ಕರೆ ಮಾಡಿ ಈ ವಿವಾದದಿಂದ ತನ್ನ ಹೆಸರನ್ನು ತೆಗೆಯುವಂತೆ ಕೇಳಿಕೊಂಡಿದ್ದಾರೆ. ಶೇಖರ್ ಕೂಡ ಈ ವಿವಾದದಿಂದ ಮುಜುಗರಕ್ಕೊಳಗಾಗಿದ್ದು, ತಾನು ಆದಷ್ಟು ಬೇಗ ಈ ವಿವಾದ ಬಗೆಹರಿಸುವುದಾಗಿ ಪ್ರೀತಿಗೆ ಮಾತು ಕೊಟ್ಟಿದ್ದಾರಂತೆ.