ಇದನ್ನು ವಿಧಿ ಬರಹ ಎನ್ನೋಣವೇ... ಅಥವಾ ಬದುಕಿನ ವಿಪರ್ಯಾಸ ಎನ್ನೋಣವೇ... ಗೊತ್ತಿಲ್ಲ. ಒಟ್ಟಾರೆ, ಅತ್ಯಾಚಾರದ ಆರೋಪದ ಮೇಲೆ ಬಂಧಿತರಾದ ಬಾಲಿವುಡ್ ನಟ ಶೈನಿ ಅಹುಜಾ ಈಗ ಮುಂಬೈನ ಅರ್ಥರ್ ರಸ್ತೆ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ ಅನ್ನೋದಂತೂ ದಿಟ. ಅಂದು ಮಳೆ ಬಂದರೆ ಮನೆಯಲ್ಲಿ ಬೆಚ್ಚಗೆ ಸುಪ್ಪತ್ತಿಗೆಯಲ್ಲಿ ಮಲಗುತ್ತಿದ್ದ ಶೈನಿಗೆ ಈಗ ಬದುಕಿನ ಕಷ್ಟಗಳು ನಿಧಾನವಾಗಿ ಅರಿವಿಗೆ ಬರುತ್ತಿವೆ. ಇದಕ್ಕೆ ಕಾರಣ ಜೈಲುವಾಸ!
ಹೌದು. ಮುಂಬೈಯ ಅರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿ ತನ್ನ ಪುಟ್ಟ ಕೋಣೆಯನ್ನೀಗ ಶೈನಿ ಹಂಚಿಕೊಳ್ಳುತ್ತಿರುವುದು ಕುಖ್ಯಾತ ಗ್ಯಾಂಗ್‌ಸ್ಟರ್ ಅಬು ಸಲೀಂ ಜತೆಗೆ! ಈಗ ಈ ಇಬ್ಬರಿಗೂ ಒಂದು ಹೊಸ ಸಮಸ್ಯೆ ಶುರುವಾಗಿದೆಯಂತೆ. ಮುಂಬೈನಲ್ಲಿ ಒಂದು ಮಳೆ ಬಂದರೆ ಶೈನಿಯಿರುವ ಬ್ಯಾರಕ್ ನಂ 1 ಕೋಣೆಗೆ ನೀರು ನುಗ್ಗುತ್ತದೆ. ಮೊಣಕಾಲುದ್ದ ನೀರು ತುಂಬುವ ಕೋಣೆಯಲ್ಲಿ ನಿಲ್ಲಲೂ ಆಗದೆ, ಮಲಗಲೂ ಆಗದೆ, ಕೂರಲೂ ಆಗದೆ ಒದ್ದಾಡುತ್ತಿದ್ದಾರಂತೆ ಶೈನಿ ಹಾಗೂ ಅಬು ಸಲೀಂ.
ಕಳೆದ ವಾರದ ಮಳೆಗೆ ಶೈನಿಯ ಕೋಣೆಗೆ ನೀರು ನುಗ್ಗಿತ್ತಂತೆ. ಆಗ ರೂಮ್ ಕ್ಲೀನ್ ಮಾಡಲು ಜೈಲಿನ ಅಧಿಕಾರಿಗಳು ಶೈನಿಗೆ ನೀಡಿದ್ದು ಕೆಲಸದಾಳನ್ನಂತೂ ಖಂಡಿತಾ ಅಲ್ಲ. ಅವರು ನೀಡಿದ್ದು ನಾಲ್ಕು ಬಕೆಟ್ಟು. ಬಕೆಟ್ಟಿನಲ್ಲಿ ಒಳಗಿದ್ದ ನೀರು ತುಂಬಿಸಿ ಹೊರಗೆಸೆಯುವುದು ಶೈನಿ ಹಾಗೂ ಅಬು ಕಾಯಕವಾಗಿತ್ತು. ಪ್ರತಿದಿನವೂ ಮಲಗಲು ಒಣಗಿದ ಜಾಗವನ್ನು ರೂಮಿನ ಮೂಲೆಯಲ್ಲಿ ಹುಡುಕಬೇಕಿದ್ದರೆ, ದಿನವಿಡೀ ಕಷ್ಟಪಡಬೇಕಿತ್ತು ಶೈನಿ. ಕೋಣೆಗೆ ನುಗ್ಗಿದ ನೀರನ್ನು ಮೈಬಗ್ಗಿಸಿ ಹೊರಗೆ ಚೆಲ್ಲುವ ಕಾಯಕ ಶೈನಿ ಹಾಗೂ ಅಬು ಸಲೀಂದು. ಇದರಿಂದ ಸುಸ್ತಾದ ಶೈನಿ ಜೈಲಿನ ಅಧಿಕಾರಿಗಳಲ್ಲಿ ನನಗೆ ಬೇರೆ ರೂಮು ಕೊಡಿ ಎಂದಿದ್ದನಂತೆ.
IFM
ಜೈಲಿನ ಅಧಿಕಾರಿಗಳು ಹೇಳುವಂತೆ, ಜೈಲಿನಲ್ಲಿ ಎಲ್ಲರೂ ಸಮಾನರು. ಜೈಲಿನ ನಿಯಮಗಳ ಪ್ರಕಾರ, ಕೋಣೆಗೆ ನೀರು ನುಗ್ಗಿದರೂ, ಅವರವರ ಕೋಣೆಯನ್ನು ಸ್ವಚ್ಛಗೊಳಿಸುವುದು ಅವರವರ ಜವಾಬ್ದಾರಿ ಎನ್ನುತ್ತಾರೆ.
ಕಳೆದ 15 ದಿನಗಳಿಂದ ಅಬು ಹಾಗೂ ಶೈನಿ ರೂಂಮೇಟ್‌ಗಳು. ಮೊದಮೊದಲು ತುಂಬ ಡಿಪ್ರೆಸ್ ಆಗಿದ್ದ ಶೈನಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಅಳುಮುಖದಿಂದಲೇ ದಿನದೂಡುತ್ತಿದ್ದ. ಆದರೆ, ಮೊದಲಿಗೆ ಹೋಲಿಸಿದರೆ ಈಗ ಸ್ವಲ್ಪ ಸುಧಾರಿಸಿದ್ದಾನೆ. ಜೈಲಿನಲ್ಲಿ ತಂಡದ ನೀತಿ ನಿಯಮಗಳಿಗೆ ಬದ್ಧನಾಗಿದ್ದಾನೆ ಎಂದೂ ಮೂಲಗಳು ತಿಳಿಸಿವೆ. ಜತೆಗೆ ಜೈಲಿನ ಊಟ, ತಿಂಡಿ ಸಮಯದಲ್ಲಿ ಅಬು ಸಲೀಂ ಜತೆಗೆ ಮಾತನಾಡುತ್ತಿರುತ್ತಾನೆ. ಹಿಂದೆ ಯಾರ ಜತೆಗೂ ಮಾತನಾಡದೆ ತನ್ನ ಪಾಡಿಗಿದ್ದ ಶೈನಿ ಈಗ ಜೈಲಿನಲ್ಲಿ ಅಬು ಸಲೀಂ ಒಡನಾಟ ಕಂಡುಬರುತ್ತಿದೆ. ಇಬ್ಬರೂ ತಮ್ಮ ಹಿಂದಿನ ದಿನಗಳ ಬಗ್ಗೆ ನೆನಪುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಜತೆಗೆ ಸಿನಿಮಾ ಜಗತ್ತಿನ ಬಗ್ಗೆ ಮಾತಾಡುತ್ತಿರುತ್ತಾರೆ. ಅಬು ಸಲೀಂಗೂ ಚಿತ್ರಗಳ ಬಗ್ಗೆ ಆಸಕ್ತಿಯಿದೆ ಎನ್ನುತ್ತವೆ ಜೈಲಿನ ಮೂಲಗಳು.
ವಿಚಿತ್ರವೆಂದರೆ, ಶೈನಿ ಈ ಹಿಂದೆ ಅಭಿನಯಿಸಿದ್ದ ಮಹೇಶ್ ಭಟ್ ಅವರ ಗ್ಯಾಂಗ್‌ಸ್ಟರ್ ಚಿತ್ರದ ಕಥೆ ಅಬು ಸಲೀಂ ಜೀವನ ಕುರಿತಾದುದು ಎಂಬ ಸುದ್ದಿ ಅಂದು ಚಾಲ್ತಿಯಲ್ಲಿತ್ತು. ಅಷ್ಟೇ ಅಲ್ಲ, ಚಿತ್ರದ ಕಥೆ ಹಾಗೆಯೇ ಇತ್ತು. ಚಿತ್ರದಲ್ಲಿ ಶೈನಿ ಗ್ಯಾಂಗ್‌ಸ್ಟರ್ ದಯಾಶಂಕರ್ ಎಂಬ ಪಾತ್ರದಲ್ಲಿ ಅಭಿನಯಿಸಿದ್ದರು. ಚಿತ್ರದಲ್ಲಿ ಶೈನಿ ಕಂಗನಾಳನ್ನು ಪ್ರೀತಿಸುವ ಪಾತ್ರ. ಅಬು ಸಲೀಂ ಕೂಡಾ ನಿಜ ಜೀವನದ್ಲಲಿ ಮೋನಿಕಾ ಬೇಡಿಯನ್ನು ಪ್ರೀತಿಸಿದ್ದರು. ಹಾಗಾಗಿ ಚಿತ್ರಕ್ಕೂ ಅಬು ಸಲೀಂ ಜೀವನಕ್ಕೂ ಸಾಮ್ಯತೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ಮಾಡಬಾರದು ಎಂದು ಅಬು ಹಿಂದೆ ಮೊಕದ್ದಮೆ ಹೂಡಿದ್ದರು. ಆದರೆ ಚಿತ್ರ ಹೊರಬಂದು ಭಾರೀ ಹಿಟ್ ಕೂಡಾ ಆಯಿತು. ಈಗ ಅದೇ ಅಬು ಸಲೀಂ ಜತೆಗೆ ಜೈಲಿನಲ್ಲಿ ಒಂದೇ ಕೋಣೆ ಹಂಚಿಕೊಳ್ಳುವ ದಿನವೂ ಶೈನಿಗೆ ಬಂದಿದೆ ಎಂದರೆ ಇದನ್ನು ವಿಪರ್ಯಾಸವೆನ್ನೋಣವೇ... ವಿಧಿಲೀಲೆಯೆನ್ನೋಣವೇ...!?