ಶಿಲ್ಪಾ ಶೆಟ್ಟಿ- ಬಾಲ್ಡ್ ಎಂಡ್ ಬ್ಯೂಟಿಫುಲ್ !
Publish Date: Tue, 20 Jan 2009 (18:02 IST)
Updated Date: Tue, 20 Jan 2009 (18:00 IST)
ಎಲ್ಲರನ್ನೂ ಬೋಳಿಸಿದ ಮೇಲೆ ಶಿಲ್ಪಾ ಶೆಟ್ಟಿ ಕೊನೆಗೆ ತನ್ನ ತಲೆಯನ್ನು ಬೋಳಿಸಿಕೊಳ್ಳಲಿದ್ದಾಳೆ. ಅಂದ ಕೂಡಲೇ ಪಾಪ ತೊಳೆದುಕೊಳ್ಳಲು ಅವಳು ಆಕೆ ತಿರುಪತಿಗೂ ಅಥವಾ ಧರ್ಮಸ್ಥಳಕ್ಕೋ ಹೋಗಲಿದ್ದಾಳೆ ಎಂದು ಅರ್ಥ ಕಲ್ಪಿಸಬೇಕಾಗಿಲ್ಲ. ದೇವರ ಬಗ್ಗೆ ಅವಳಂಥವರೆಲ್ಲ ನಮ್ಮ-ನಿಮ್ಮಷ್ಟು ತಲೆಕೆಡಿಸಿಕೊಂಡವರಲ್ಲ ಬಿಡಿ. ಒಪ್ಪಿಕೊಂಡಿರುವ ಸಿನಿಮಾವೊಂದಕ್ಕೆ ತಲೆ ಬೋಳಿಸಬೇಕು ಅಂತ ನಿರ್ದೇಶಕರು ಹೇಳಿದ್ದಾರಂತೆ.. ಅಷ್ಟೇ !ಆದರೆ ತಲೆ ಬೋಳಿಸುತ್ತಿರುವುದು ಮಾತ್ರ ನಿಜ ಎಂದು ಮೂಲಗಳ ಮಾತು. ಇಂಗ್ಲೀಷ್ ಸಿನಿಮಾ 'ಡಿಸೈರ್'ನಲ್ಲಿ ನಾಯಕಿಯಾಗಿ ನಟಿಸುತ್ತಿರುವ ಶಿಲ್ಪಾ ಪಾತ್ರ ಪೋಷಣೆಗೆ ತಕ್ಕಂತೆ ಬದಲಾಗಬೇಕಂತೆ. ಈ ಹಿಂದೆ ಸಲ್ಮಾನ್ ಖಾನ್, ಸಂಜಯ್ ದತ್, ಅಮೀರ್ ಖಾನ್ ಅದಕ್ಕೂ ಮೊದಲು 'ವಾಟರ್' ಚಿತ್ರಕ್ಕಾಗಿ ಶಬನಾ ಅಜ್ಮಿ, ನಂದಿತಾ ದಾಸ್ ತಲೆ ಬೋಳಿಸಿದ್ದು ಗೊತ್ತು ತಾನೇ. ಈಗ ಅದೇ ಸಾಲಿಗೆ ಮತ್ತೊಂದು ಸೇರ್ಪಡೆ ನಮ್ಮ ತೌಳವ ಸುಂದರಿ ಶಿಲ್ಪಾ ಶೆಟ್ಟಿ.'
ಡಿಸೈರ್' ಚಿತ್ರದ ನಿರ್ದೇಶಕ ಮಲಯಾಳಂ ಮಾಂತ್ರಿಕ ಆರ್. ಶರತ್. ಚಿತ್ರದಲ್ಲಿ ಚೀನಾ ಇಂಪೋರ್ಟೆಡ್ ನಟ ಕ್ಸಿಯಾ ಯೂ ಎಂಬಾತನೂ ಇರುತ್ತಾನೆ. ಉಳಿದಂತೆ ಅನುಪಮ್ ಖೇರ್, ಜಯಪ್ರದಾ, ಶೀತಲ್ ಮೆನನ್, ನಕುಲ್ ವೈದ್, ಸಚಿನ್ ಖೇದಕರ್ ಮುಂತಾದವರಿದ್ದಾರೆ. ಸಂಗೀತ ಎ.ಆರ್. ರೆಹಮಾನ್‌ರದ್ದು.ಹೌದಾ.. ನೀವು ತಲೆ ಬೋಳಿಸಿಕೊಳ್ಳುತ್ತಿದ್ದೀರಂತೆ ಎಂದು ಶಿಲ್ಪಾಳನ್ನೇ ನೇರವಾಗಿ ಕೇಳಿದಾಗ, "ನನ್ನ ಪಾತ್ರದ ಬಗ್ಗೆ ಎಲ್ಲವನ್ನೂ ಹೇಳಲಾಗದು. ನಾನೊಂದು ವೇಳೆ ಹೇಳಿಬಿಟ್ಟರೆ ನೀವು ಚಿತ್ರವನ್ನು ನೋಡುವ ಅಗತ್ಯವೇನಿದೆ ನೀವೇ ಹೇಳಿ.. ಡಿಸೈರ್ ಚಿತ್ರದ ಪಾತ್ರ ನನಗೆ ಸವಾಲಿನದ್ದು ಎಂದು ಹೇಳಬಲ್ಲೆ. ಈ ಪಾತ್ರ 10 ವರ್ಷಗಳ ವಿಚಾರವನ್ನು ಬಿಂಬಿಸುತ್ತದೆ. ಇದು ನನ್ನ ಮತ್ತು ಚೈನೀಸ್ ಸಹನಟ ಕ್ಸಿಯಾ ಯೂ ನಡುವಿನ ಪ್ರೇಮ ಕಥೆಯನ್ನು ಹೊಂದಿರುವ ಚಿತ್ರ" ಎಂದು ಆಕೆ ಪ್ರತಿಕ್ರಿಯೆ ನೀಡಿದ್ದಾಳೆ.ಇದುವರೆಗೆ ಚೀನಾದ ಆ ನಟನನ್ನು ಭೇಟಿಯಾಗಿಲ್ಲವೆಂದ ಆಕೆ, "ಇನ್ನೇನು ಕೇರಳದಲ್ಲಿ ಶೂಟಿಂಗ್ ಆರಂಭವಾಗಲಿದೆ. ಅದರ ನಂತರ ಮುಂದಿನ ಹಂತದ ಚಿತ್ರೀಕರಣ ಮಲೇಷಿಯಾದಲ್ಲಿ ನಡೆಯಲಿದೆ" ಎಂದಿದ್ದಾಳೆ ಶೆಟ್ಟಿ.ಚೀನಾದಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲು ಅನುಮತಿ ನಿರಾಕರಿಸಿದ ಹಿನ್ನಲೆಯಲ್ಲಿ ಬೇರೆಡೆ ಚಿತ್ರೀಕರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಭರತನಾಟ್ಯ ಕಲಾವಿದೆಯಾಗಿರುವ ಶಿಲ್ಪಾ ಚಿತ್ರದಲ್ಲಿ ಒಡಿಸ್ಸಿ ನೃತ್ಯಗಾತಿಯ ಪಾತ್ರ ಮಾಡಲಿದ್ದು, ಸಾಕಷ್ಟು ತಯಾರಿ ನಡೆಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.