Publish Date: Wed, 25 Jul 2007 (17:36 IST)
Updated Date: Wed, 25 Jul 2007 (17:35 IST)
ಜಾಗತಿಕವಾಗಿ ಇದು ಬಾಲಿವುಡ್ ತಾರೆ ಶಿಲ್ಪಾಶೆಟ್ಟಿಯ ವರ್ಷ ಎನ್ನಬಹುದೇನೊ... ಈ ವರ್ಷಾರಂಭದಿಂದಲೂ ಶಿಲ್ಪಾ ವಿದೇಶಿ ನೆಲದಲ್ಲಿ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಲ್ಲಿದ್ದಾರೆ.
ಶಿಲ್ಪಾ ಶೆಟ್ಟಿಯ ಪ್ರಚಾರ ಹೆಚ್ಚಿಸಲಿರುವ ಹೊಸತೊಂದು ಆರೋಪ ಎಂದರೆ ಆಕೆ ಲಂಡನ್‌ನಲ್ಲಿ ನೆಮ್ಮದಿಯಲ್ಲಿದ್ದ ಕುಟುಂಬವೊಂದರಲ್ಲಿ ಮನೆಮುರುಕು ಕೆಲಸ ಮಾಡಿದ್ದಾಳೆ, ದಂಪತಿಗಳಲ್ಲಿ ವಿರಸಕ್ಕೆ ಕಾರಣವಾಗಿ , ಗಂಡನನ್ನು ತನ್ನ ತೆಕ್ಕೆಗೆಳೆದುಕೊಂಡಿದ್ದಾಳೆ... ಎಂಬುದು.
ದಿನಗಳ ಹಿಂದೆ ಲಂಡನ್‌ನ ಟ್ಯಾಬ್ಲೊಯ್ಡ್ ಪತ್ರಿಕೆಗೆ ಲಭಿಸಿದ ಇಮೇಲ್‌ಲ್ಲಿ ಲಂಡನಲ್ಲಿ ನೆಲೆಸಿರುವ ಭಾರತೀಯ ಮೂಲದ ಕವಿತಾ ಕುಂದರ ಎಂಬವರು ಶಿಲ್ಪಾ ವಿರುದ್ಧ ಆರೋಪ ಹೊರಿಸಿದ್ದರು.
ಆರೋಪದಂತೆ ಶಿಲ್ಪಾಗೆ ಕವಿತಾ ಅವರ ಪತಿ ರಾಜ್ ಕುಂದರ ಜೊತೆ ಅಕ್ರಮ ಸಂಬಂಧವಿದೆ. ಇದರಿಂದಾಗಿ ತಮ್ಮ ದಾಂಪತ್ಯ ಒಡೆದಿದೆ. ವಿಚ್ಛೇದನವೂ ಆಗುತ್ತಿದೆ. ಶಿಲ್ಪಾಗೆ ಇತ್ತೀಚಿನ ಡಾಕ್ಟರೇಟ್ ಪ್ರಶಸ್ತಿ , ಉದ್ಯಮ ಸಂಬಂಧಿತ ಲಂಡನ್ ಪ್ರವಾಸದ ವೇಳೆ ರಾಜ್ ಕುಂದರ ಜೊತೆ ಒಡನಾಟದಿಂದ ಆತ ಮನೆ-ಪತ್ನಿ ಮರೆಯುವಂತೆ ಮಾಡಿದೆ, ಇದಕ್ಕೆ ಶಿಲ್ಪಾ ಬೀಸಿದ ಮೋಹದಬಲೆ ಕಾರಣ ಎಂಬುದು ಕವಿತಾರ ಹೇಳಿಕೆಗಳು.
ರಾಜ್‌ಕುಂದರ ಅವರು ಶಿಲ್ಪಾ ರಾಯಭಾರಿಯಾಗಿರುವ ಸುಗಂಧದ್ರವ್ಯದ ಮಾರಾಟಗಾರರೂ ಆಗಿರುವುದು ಗಮನಾರ್ಹ. ಈ ಮಧ್ಯೆ ಶಿಲ್ಪಾ ಕೂಡ ಹೇಳಿಕೆ ನೀಡಿ, ಆರೋಪಗಳಲ್ಲಿ ಹುರುಳಿಲ್ಲ. ಭಾರತೀಯ ಸಂಸ್ಕೃತಿ ಪರಂಪರೆಗಳನ್ನು ಲಂಡನ್‌ನಲ್ಲಿ ಹರಡಲು ಸಾಂಸ್ಕೃತಿಕ ರಾಯಭಾರಿಯಾಗಿ, ಉದ್ಯಮಗಳ ಪ್ರತಿನಿಧಿಯಾಗಿ ಹಾಗೂ ಲಂಡನಲ್ಲಿ ಸ್ವತಃ ಪ್ರಶಸ್ತಿ ಪಡೆಯಲಷ್ಟೇ ಪ್ರವಾಸದ ವೇಳೆ ಸಮಯ ವ್ಯಯಿಸಿದ್ದೆ ಎಂದಿದ್ದಾರೆ.
ಪತಿ ರಾಜ್ ಕುಂದರ ಅವರೂ ತಮ್ಮ ಪತ್ನಿ (ಈಗ ಮಾಜಿ) ಕವಿತಾ ಅವರ ಆರೋಪವನ್ನು ಹೇಳಿಕೆಯೊಂದರಲ್ಲಿ ನಿರಾಕರಿಸಿದ್ದಾರೆ, ತಮ್ಮ ಮಾಜಿಪತ್ನಿ ಕವಿತಾ ಅವರಿಂದ ಶಿಲ್ಪಾ ಹಾಗೂ ಕುಟುಂಬಕ್ಕಾಗಿರುವ ಅವಮಾನಕ್ಕಾಗಿ ಕ್ಷಮೆಯನ್ನೂ ಕೋರಿದ್ದಾರೆ. ಆದಾಗ್ಯೂ ವಿವಾದ ಇನ್ನೂ ಹಸಿ-ಬಿಸಿಯಾಗಿಯೇ ಉಳಿದಿದೆ.