Publish Date: Thu, 20 Sep 2007 (13:57 IST)
Updated Date: Thu, 20 Sep 2007 (13:57 IST)
ವಿವಾದಗಳ ರಾಜನೆಂದು ಹೆಸರುವಾಸಿಯಾದ ಬಾಲಿವುಡ್ ನಟ ಸಲ್ಮಾನ್ ಖಾನ್ ಗಣೇಶ ಪೂಜೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಅವರ ವಿರುದ್ದ ಮುಸ್ಲಿಂ ಸಂಘಟನೆ ಫತ್ವಾ ಹೊರಡಿಸಿದೆ.
ನವದೆಹಲಿಯ ದಾರೂಲ್- ಇಫ್ತಾ- ಮಂಜರ್-ಎ- ಇಸ್ಲಾಮ್ ಎನ್ನುವ ಸಂಘಟನೆ ನಟ ಸಲ್ಮಾನ್ ಖಾನ್ ಗಣೇಶ ಪೂಜೆಯಲ್ಲಿ ಭಾಗವಹಿಸಿರುವುದರಿಂದ ಇಸ್ಲಾಮ್ ಧರ್ಮದ ನಿಯಮಗಳನ್ನು ಉಲ್ಲಂಘಿಸಿದಂತಾಗಿದ್ದು, ಅವರ ವಿರುದ್ದ ಫತ್ವಾ ಹೊರಡಿಸಲಾಗಿದೆ ಎಂದು ಪ್ರಕಟಿಸಿದೆ.
ಇಸ್ಲಾಮ್ ಧರ್ಮದಲ್ಲಿ ಮೂರ್ತಿ ಪೂಜೆಯನ್ನು ಮಾಡಬಾರದೆನ್ನುವ ನಿಯಮಗಳಿದ್ದರೂ ಅವುಗಳನ್ನು ಗಾಳಿಗೆ ತೂರಿದ್ದಲ್ಲದೇ ತಾನು ಪೂಜೆಯಲ್ಲಿ ಭಾಗವಹಿಸಿ ತಮ್ಮ ಕುಟುಂಬದವರನ್ನು ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿರುವುದು ಇಸ್ಲಾಮ್ ಧರ್ಮಕ್ಕೆ ಅಪಮಾನ ಮಾಡಿದಂತಾಗಿದೆ ಎಂದು ತಿಳಿಸಿದೆ.
ಜಿಂಕೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ವಾರಗಳ ಹಿಂದೆ ಕಾರಾಗ್ರಹದಿಂದ ಹೊರಬಂದ ಸಲ್ಮಾನ್ ತಮ್ಮ ಕುಟುಂಬದವರೊಂದಿಗೆ ಗಣೇಶ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಸಂಗೀತಕ್ಕೆ ತಕ್ಕಂತೆ ಅವರ ತಾಯಿ ಹೆಲೆನ್ ಅವರೊಂದಿಗೆ ತಾಳ ಹಾಕುತ್ತಿದ್ದರು ಎನ್ನಲಾಗಿದೆ.
ಇದನ್ನು ದಾರೂಲ್- ಇಫ್ತಾ- ಮಂಜರ್-ಎ- ಇಸ್ಲಾಮ್ ಎನ್ನುವ ಸಂಘಟನೆ ತೀವ್ರವಾಗಿ ಖಂಡಿಸಿದ್ದು ಇದು ಇಸ್ಲಾಮ್ ಧರ್ಮಕ್ಕೆ ಅಪಮಾನವಾಗಿದ್ದರಿಂದ ಬಾಲಿವುಡ್ ಸಲ್ಮಾನ್ ವಿರುದ್ದ ಫತ್ವಾ ಹೊರಡಿಸಲಾಗಿದೆ ಎಂದು ತಿಳಿಸಿದೆ.