ರಣ್ ಗೀತೆ ನಾನ್ಯಾಕೆ ಬರೆದೆ?: ಸರಿಮ್ ಅಂತರಂಗ
Publish Date: Wed, 20 May 2009 (22:34 IST)
Updated Date: Wed, 13 May 2009 (20:08 IST)
ವಿವಾದಗಳ ಸರದಾರ ರಾಮ್ ಗೋಪಾಲ್ ವರ್ಮಾ ತನ್ನ ರಣ್ ಚಿತ್ರದ ವಿವಾದಿತ ಹಾಡನ್ನು ಹಿಂತೆಗೆದು ಕ್ಷಮೆ ಕೇಳುವ ಗೋಜಿಗೆ ಹೋಗುತ್ತಿಲ್ಲ. ಬದಲಾಗಿ ಈ ವಿವಾದ ಇನ್ನಷ್ಟು ಜಟಿಲಗೊಳ್ಳುತ್ತಲೇ ಸಾಗುತ್ತಿದೆ. ರಣ್ ಚಿತ್ರದ ಹಾಡನ್ನು ತೆಗೆದು ಹಾಕಲು ಹೇಳಿದ ಸೆನ್ಸಾರ್ ಮಂಡಳಿ ವಿರುದ್ಧ, ವರ್ಮಾ ನೇರವಾಗಿ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ವರ್ಮಾ ಹೆಗಲಿಗೆ ಹೆಗಲು ಕೊಟ್ಟಿರುವ ಚಿತ್ರದ ಗೀತ ರಚನೆಕಾರ ಸರಿಮ್ ಮೊಮಿಮ್ ತಾನ್ಯಾಕೆ ಈ ಹಾಡು ಬರೆದೆ ಎಂದು ಮನ ಮಿಡಿಯುವಂತೆ ವಿವರಿಸಿದ್ದಾರೆ.ಸರ್ಕಾರ್, ರಾಮ್ ಗೋಪಾಲ್ ವರ್ಮಾ ಕೀ ಆಗ್, ಭಾಗಂ ಬಾಗ್ ಮತ್ತಿತರ ಹಲವು ಚಿತ್ರಗಳಿಗೆ ಗೀತರಚನೆಕಾರರಾಗಿದ್ದ ಸರಿಮ್ ಮೊಮಿಮ್ ಜನ ಗಣ ಮನ ವಿವಾದದಲ್ಲಿ ಸಿಲುಕಿದ್ದಾರೆ. ಅವರೇ ಜನ ಗಣ ಮನಕ್ಕೆ ರಣ್‌ನ್ನೂ ಸೇರಿಸಿ ರಾಷ್ಟ್ರಗೀತೆಯ ತಿರುಚಿದ, ಅವಮಾನ ಮಾಡಿದ ಕುಖ್ಯಾತಿ ಪಟ್ಟಿಯಲ್ಲಿ ಸೇರಿ ಹೋಗಿದ್ದಾರೆ. ಇದಕ್ಕೆ ಬೇಸರಿಸುವ ಅವರು ತಾನ್ಯಾಕೆ, ಹೇಗೆ ಈ ಹಾಡು ಬರೆದೆ ಎಂದು ಹೀಗೆ ಹೇಳುತ್ತಾರೆ.''
ಈ ಹಾಡುಗಳ ಸಾಲು ಬರೆಯುವಾಗ ನಾನು ತುಂಬ ಭಾವುಕನಾಗಿದ್ದೆ. ಜತೆಗೆ ಚಿತ್ರದ ಭಾವತೀವ್ರತೆಯನ್ನೂ ಪೆನ್ನಿಗಿಳಿಸುವ ಜವಾಬ್ದಾರಿ ನನ್ನಲ್ಲಿತ್ತು. ಈ ಹಾಡಿನ ಸಾಲುಗಳ ಮುಖಾಂತರ ನಾನು ರಾಷ್ಟ್ರಗೀತೆಗೆ ಅವಮಾನ ಮಾಡಿಲ್ಲ. ನಾವು ಯಾವುದಕ್ಕೋಸ್ಕರ ಸ್ವಾತಂತ್ರ್ಯ ಪಡೆದುಕೊಂಡಿದ್ದೇವೆಯೋ, ಆ ಸ್ವಾತಂತ್ರ್ಯ ಈಗ ನಮ್ಮಲ್ಲಿಲ್ಲ. ರಾಷ್ಟ್ರದ್ರೋಹಿ ಕೆಲಸಗಳಿಗೆ ಆಸ್ಪದ ನೀಡುತ್ತಾ ನಮ್ಮ ಖಾಸಗಿ ಜೀವನ ಉದ್ಧಾರ ಮಾಡುವತ್ತ ವಿಮುಖರಾಗುತ್ತಿದ್ದೇವೆ ಎಂಬ ವಿಷಾದವನ್ನು ಈ ಸಾಲುಗಳಲ್ಲಿ ಹೇಳಿದ್ದೇನೆ. ಅಲ್ಲದೆ, ಈ ಹಾಡಿನ ಮೂಲಕ ಭಾರತೀಯರನ್ನು ಬಡಿದೆಬ್ಬಿಸಲು ಪ್ರಯತ್ನ ಮಾಡುವುದು ನಮ್ಮ ಉದ್ದೇಶ. ಇದಕ್ಕೆ ಸಾಕ್ಷಿ ಹಾಡಿನಲ್ಲಿ ಬರುವ ಸಾಲುಗಳಾದ 'ಜಾಗ್ ಜೋ... ಭಾರತ್ ಕೋ ಬಚಾವೋ' ಅಥವಾ 'ಹಮಾರಿ ಜಾನ್ ಹಿಂದೂಸ್ತಾನ್'. ಈ ಸಾಲುಗಳ ಮುಖಾಂತರ ಪ್ರತಿಯೊಬ್ಬ ಪ್ರಜೆಯೂ ಒಂದು ಕ್ಷಣ ವಾಸ್ತವವನ್ನು ಕೂತು ಯೋಚಿಸಲಿ'' ಎಂಬುದು ನಮ್ಮ ಉದ್ದೇಶವಾಗಿತ್ತು ಎಂದು ಮಾರ್ಮಿಕವಾಗಿ ಹೇಳುತ್ತಾರೆ.''
ಚುನಾವಣೆ ಪ್ರಚಾರಕ್ಕಾಗಿ ಹಾಡುಗಳನ್ನು ತಿರುಚಿ ಪ್ರಚಾರಕ್ಕೆ ಬಳಸಿದಂತೆ ಇಲ್ಲಿ ನಾವು ರಾಷ್ಟ್ರಗೀತೆಯನ್ನು ಬಳಸಿಲ್ಲ. ಸತ್ತಂತೆ ಮಲಗಿರುವ ಭಾರತೀಯ ಇನ್ನಾದರೂ ಎದ್ದೇಳಲಿ ಎಂಬ ಒಳ್ಳೆಯ ಚಿಂತನೆಯಿಂದ ರಾಷ್ಟ್ರಗೀತೆಯ ಧಾಟಿಯಲ್ಲಿ ಈ ಹಾಡನ್ನು ಹೆಣೆದಿದ್ದೇವೆ. ಅಷ್ಟೇ ಅಲ್ಲ. ಚಿತ್ರದ ಕಥೆಗೂ ಇದು ಸರಿಯಾಗಿ ಹೊಂದತ್ತದೆ. ಭಾರತಕ್ಕೆ ಗಾಯವಾಗಿದೆ, ನಾಗರಿಕರಾಗಿ, ಉತ್ತಮ ಪ್ರಜೆಯಾಗಿ ಆ ಗಾಯವನ್ನು ವಾಸಿ ಮಾಡುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಈ ಹಾಡು ಕಣ್ಣುತೆರೆಸುವ ಹಾಡು''.
''
ಹಾಡು ಹುಟ್ಟಿದ್ದು ಒಂದು ಇಂಗ್ಲೀಷ್ ವಾಕ್ಯದಿಂದ. 'ದೇರ್ ಈಸ್ ಎ ಬ್ಯಾಟಲ್ ಇನ್ ದಿ ಮೈಂಡ್ಸ್ ಆಫ್ ಆಲ್ ಪೀಪಲ್' ಅರ್ಥಾತ್ 'ಪ್ರತಿಯೊಬ್ಬನ ಮನಸ್ಸಿನೊಳಗೇ ಯುದ್ಧವಿದೆ'. ಇದೇ ವಾಕ್ಯ ಹಿಂದಿಯಲ್ಲಿ 'ಜನ ಗಣ ಮನ ರಣ್ ಹೈ' ಆಯಿತು'' ಎಂದು ವಿವರಿಸುತ್ತಾರೆ ಈ ಹಾಡಿನ ಸೃಷ್ಟಿಕರ್ತ.''
ಸರಿ. ಇದು ರಾಷ್ಟ್ರಗೀತೆಯನ್ನು ತಿರುಚಿದಂತಿದೆ ಎಂಬುದನ್ನು ಒಪ್ಪುತ್ತೇನೆ. ಆದರ ಇದು ರಾಷ್ಟ್ರಗೀತೆ ಅಲ್ಲ ಎಂಬುದನ್ನೂ ಇಲ್ಲಿ ನಾನು ಸ್ಪಷ್ಟಪಡಿಸುತ್ತೇನೆ. ರಾಷ್ಟ್ರಗೀತೆ ಭಾರತ ಮತ್ತು ವಿಜಯದ ಸಂಕೇತವಾದರೆ, ನಾವಿಲ್ಲಿ ಈ ಹಾಡಿನ ಮೂಲಕ ಭಾರತ ಹೇಗೆ ವಿಜಯ ಸಾಧಿಸಬೇಕು ಎಂದೂ ಹೇಳಿದ್ದೇವೆ'' ಎನ್ನುತ್ತಾರೆ.ಆದರೂ ಇದನ್ನು ರಾಷ್ಟ್ರಗೀತೆಗೆ ಅವಮಾನ ಎಂಬಂತಹ ಮಾದರಿಯಲ್ಲಿ ಬಿಂಬಿಸಿದ್ದಕ್ಕೆ ಬೇಸರದಿಂದ ಹೇಳುವ ಸರಿಮ್, ''ಈ ಹಾಡು ರಾಷ್ಟ್ರಗೀತೆಯಾಗಿರಲು ಸಾಧ್ಯವೇ ಇಲ್ಲ. 100 ವಿವಿಧ ಇತರ ಪದಗಳನ್ನು ಇದರಲ್ಲಿ ಜೋಡಿಸಲಾಗಿದೆ. ಹಾಗಾಗಿ ಇದು ರಾಷ್ಟ್ರಗೀತೆ ಹೇಗಾಗುತ್ತದೆ?'' ಎಂದೂ ಪ್ರಶ್ನಿಸುತ್ತಾರೆ.ಸರಿಮ್ ಪ್ರತಿಯೊಬ್ಬ ಭಾರತೀಯನ್ನನು ವಿನಂತಿಸುವು ಇಷ್ಟು.. ''ದಯವಿಟ್ಟು ಈ ಗೀತೆಯ ಮೂಲಕ ರಾಷ್ಟ್ರಗೀತೆಗೆ ಅವಮಾನವಾಗಿದೆಯೇ ಎಂದು ಒಮ್ಮೆ ವ್ಯವಧಾನದಿಂದ ಓದಿಕೊಳ್ಳಿ. ಮನನ ಮಾಡಿ. ಭ್ರಷ್ಟಾಚಾರ, ರಕ್ತಪಾತ, ಮತೀಯ ಗಲಭೆ ಮತ್ತಿತರ ನೂರಾರು ಸಮಸ್ಯೆಗಳಿಂದ ಭಾರತ ಮುಕ್ತವಾಗಬೇಕೇ, ಬೇಡವೇ ಎಂಬ ಪ್ರಶ್ನೆಗೆ ನೀವೇ ಆತ್ಮಾವಲೋಕನ ಮಾಡಿಕೊಳ್ಳಿ. ಭಾರತವನ್ನು ಗೌರವಿಸಿ, 'ಭಾರತದ ರಕ್ಷಣೆಗೆ ಎದ್ದೇಳಿ' ಎಂದು ಹೇಳುವುದೂ ತಪ್ಪು ಎಂದಾದರೆ ಇದ್ಕಕಿಂತ ದೊಡ್ಡ ದುರಂತ ಇನ್ನೊಂದಿಲ್ಲ. ಇಷ್ಟೆಲ್ಲ ಈ ಗೀತೆಯ ಬಗ್ಗೆ ಆತ್ಮಸಾಕ್ಷಿಯಾಗಿ ಹೇಳಿದ್ದೇನೆ. ಆಮೇಲೂ ಈ ಹಾಡು ನಿಮಗೆ ರಾಷ್ಟ್ರಗೀತೆಗೆ ಅವಮಾನ ಎಂದೆನಿಸಿದರೆ 'ಭಾರತ್ ಕೋ ಬಚಾಲೇ ವಿಧಾತಾ' ಎಂದು ನಾನು ಹೇಳದೆ ವಿಧಿಯಿಲ್ಲ''.ಚಿತ್ರದ ಗೀತರಚನೆಕಾರನ ಅಂತರಂಗದ ಮಾತುಗಳು ಇವಾದರೆ, ಇದಕ್ಕೆ ಪುಷ್ಟಿ ನೀಡುವಂತೆ, ಅಕ್ಟೋಬರ್ ತಿಂಗಳಲ್ಲಿ ರಣ್ ಬಿಡುಗಡೆ ಮಾಡುತ್ತೇವೆ ಎಂದು ಹೇಳಿರುವ ಚಿತ್ರ ನಿರ್ಮಾಣ ತಂಡ, ''ನಮ್ಮ ಚಿತ್ರದ ಹಾಡಿಗೆ ಕಾನೂನು ಅಡ್ಡಿ ಬರಲು ಸಾಧ್ಯವಿಲ್ಲ. ಯಾಕೆಂದರೆ ರಾಷ್ಟ್ರ ಚಿಹ್ನೆ, ರಾಷ್ಟ್ರ ಲಾಂಛನವನ್ನು ಮಾತ್ರ ಬಳಸಿಕೊಳ್ಳುವಂತಿಲ್ಲ ಎಂಬ ಕಾನೂನಿದೆಯೇ ಹೊರತು ರಾಷ್ಟ್ರಗೀತೆಯ ಬಗ್ಗೆ ಅಂತಹ ಕಾನೂನು ಇಲ್ಲ. ಹಾಗಾಗಿ ಕಾನೂನು ನಮ್ಮ ಚಿತ್ರದ ಗೀತೆಗೆ ಸಂಬಂಧಿಸಿದ್ದಲ್ಲ ಎಂದು ದಿಟ್ಟವಾಗಿ ಹೇಳಿಕೊಂಡಿದೆ. ಇನ್ನೂ ವಿವಾದ ಯಾವ ಸ್ವರೂಪ ಪಡೆಯಲಿದೆಯೋ..!