ರಜಪೂತ ಬೆಡಗಿ ಪ್ರೀತಿ ಝಿಂಟಾಗೆ 34 ಮಕ್ಕಳು!
ಸದ್ಯದ ಐಪಿಎಲ್ ಆಕರ್ಷಣೆಯ ಚೆಲುವೆ ಕೆನ್ನೆಕುಳಿಯ ಬಾಲಿವುಡ್ ಸುಂದರಿ ಪ್ರೀತಿ ಝಿಂಟಾ 34 ಮಕ್ಕಳ ತಾಯಿಯಂತೆ!ಆಶ್ಚರ್ಯವಾರೂ ಸತ್ಯ. ನಂಬಲೇಬೇಕು. ಆದರೆ ಈ 34 ಮಕ್ಕಳನ್ನೂ ಆಕೆ ಹೆತ್ತಿದ್ದಲ್ಲ ಬಿಡಿ. ಇದೀಗ ಹೃಷಿಕೇಶದ ಮದರ್ ಮಿರಾಕಲ್ ಎಂಬ ಶಾಲೆಯ 34 ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾಳಂತೆ. ಇದು ಆಕೆ ತನ್ನ ಹುಟ್ಟುಹಬ್ಬದ ಖುಷಿಗೆ ತನಗೆ ತಾನೇ ಕೊಟ್ಟ ಗಿಫ್ಟ್ ಅಂತೆ!ಅಂದಹಾಗೆ, ಪ್ರೀತಿ ದತ್ತು ತೆಗೆದುಕೊಂಡಿದ್ದು ಅನಾಥ ಹೆಣ್ಣುಮಕ್ಕಳನ್ನು. ಆ ಮಕ್ಕಳ ಊಟ, ವಸತಿ, ಶಿಕ್ಷಣ ಎಲ್ಲ ಖರ್ಚನ್ನು ಪ್ರೀತಿ ಝಿಂಟಾರೇ ಭರಿಸುತ್ತಾರಂತೆ. ಪ್ರೀತಿ ಝಿಂಟಾ ಹೇಳುವಂತೆ, ''ಆ 34 ಮಕ್ಕಳೂ ನನ್ನ ಮಕ್ಕಳಂತೆ. ಅವರಿಗೆ ಜೀವನದಲ್ಲಿ ಮೇಲೆ ಬರಲು ಎಲ್ಲ ಖರ್ಚನ್ನು ನಾನೇ ನೀಡುತ್ತೇನೆ. ನನ್ನ ಮಕ್ಕಳಂತೆ ನೋಡಿಕೊಳ್ಳುತ್ತೇನೆ. ಅವರ ಜತೆಗೆ ಖಾಸಗಿಯಾಗಿ ಉತ್ತಮ ಸಂಬಂಧ ಹೊಂದುವ ಜತೆಗೆ ಅವರ ಕಾಳಜಿ ವಹಿಸುತ್ತೇನೆ. ವರ್ಷಕ್ಕೆ ಎರಡು ಬಾರಿ ಹೃಷಿಕೇಶಕ್ಕೆ ನಾನೇ ಭೇಟಿ ನೋಡಿ ಅವರೊಂದಿಗೆ ಇದ್ದು ಬರುತ್ತೇನೆ'' ಎನ್ನುತ್ತಾಳೆ.''
ಕೇವಲ ಇವಿಷ್ಟೇ ಅಲ್ಲ. ನಾನು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದೂ ಪ್ರೀತಿ ಹೇಳುತ್ತಾಳೆ. ದೇಶದೆಲ್ಲೆಡೆ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹಲವರು ಶೋಷಣೆಗೆ ಒಳಗಾಗಿದ್ದಾರೆ. ಇನ್ನೂ ಕೆಲವರು ಸಣ್ಣ ವಯಸ್ಸಿಗೇ ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಇಂತಹ ಹಲವು ಹೆಣ್ಣುಮಕ್ಕಳ ಧ್ವನಿ ನನ್ನೊಳಗೆ ಚೀರುತ್ತವೆ. ನನಗೆ ತುಂಬ ವೇದನೆಯಾಗುತ್ತದೆ. ಆದರೆ ಎಲ್ಲರಿಗೂ ನನ್ನಿಂದ ತಲುಪಲು ಸಾಧ್ಯವಿಲ್ಲ. ನನಗೆ ಸಾಧ್ಯವಾದಷ್ಟು ಹೆಣ್ಣುಮಕ್ಕಳಿಗೆ ಉಚಿತವಾಗಿಯೇ ವಿದ್ಯೆ, ಊಟ, ವಸತಿ ನೀಡುತ್ತೇನೆ. ಅವರನ್ನು ಅವರ ಕಾಲ ಮೇಲೆ ನಿಲ್ಲಲು ಬೇಕಾಗುವ ಎಲ್ಲವನ್ನೂ ನೀಡಬೇಕೆಂದು ಬಯಸಿದ್ದೇನೆ'' ಎನ್ನುತ್ತಾರೆ.''
ಈ ಬಾರಿಯ ನನ್ನ ಹುಟ್ಟುಹಬ್ಬ ನನಗೆ ಅತ್ಯಂತ ಸಂತೋಷ ನೀಡಿದ ಹಬ್ಬ. ಇದು ನನ್ನ ಆರಂಭವಷ್ಟೆ. ಈಗ 34 ಮಕ್ಕಳನ್ನು ಪಡೆದಿದ್ದೇನೆ. ಮುಂದಿನ ಹುಟ್ಟುಹಬ್ಬಕ್ಕೆ ಇನ್ನೂ ಹೆಚ್ಚು ಅನಾಥ ಹೆಣ್ಣುಮಕ್ಕಳನ್ನು ದತ್ತು ಪಡೆಯುತ್ತೇನೆ'' ಎಂದೂ ಹೇಳುತ್ತಾಳೆ ಈ ರಜಪೂತೆ. ಹೀಗೆಲ್ಲಾ ಹೇಳುವ ಈ ಕುಳಿ ಬಿದ್ದ ಕೆನ್ನೆಯ ಸುಂದರಿ ತನ್ನ ಜೀವನದ ಅತಿ ಖುಷಿಯ ಗಳಿಗೆಯಲ್ಲಿದ್ದಾಳಂತೆ.