ಏಕ್..ದೋ..ತೀನ್...ಎಂದು ಹೆಜ್ಜೆ ಇಟ್ಟು ಪಡ್ಡೆಗಳ ನಿದ್ದೆಗೆಡಿಸಿದ್ದ 'ಧಕ್-ಧಕ್' ಹುಡುಗಿ ಮಾಧುರಿ ದೀಕ್ಷಿತ್, ಅಂದೊಮ್ಮೆ 'ಚೋಲಿ ಕೆ ಪೀಛೆ ಕ್ಯಾಹೆ' ಅಂತ ತುಂಟ ಪ್ರಶ್ನೆ ಕೇಳಿದ್ದರು. ಉತ್ತರಿಸಲು ಕನವರಿಸುತ್ತಾ ಹೋದ ರಸಿಕ ಅಭಿಮಾನಿ 'ದೇವದಾಸ' ನಂಥಾದಾಗ, ಮಾರ್‌ಡಾಲ... ಎಂದು ಯುಎಸ್‌ನ ಕಲರಡೊಗೆ ಹೋದವರು, ಈಗ ಥಟ್ಟನೆ ಮುಂಬೈಯಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಬಂದ ವಿಷ್ಯ ಮಾತ್ರ ಬೇರೆ!
ಅಕಾಲಿಕ ಮುಂಬೈ ಭೇಟಿಯಿಂದ ಉಲ್ಲಸಿತರಾದ ಮಾಧುರಿ, ಪ್ರಸಿದ್ಧ ಡ್ಯಾನ್ಸ್ ಶೊ 'ಝಲಕ್ ದಿಖ್‌ಲಾಜ' ದ ತೀರ್ಪುನೀಡಲು ಬಂದಿದ್ದಾರೆ. ಜತೆಗೆ ಯಾವುದಾದರೂ ಚಿತ್ರಕ್ಕೆ ಸಹಿಹಾಕುವ ಸಾಧ್ಯತೆ ಇದೆಯಾದರೂ, ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡದೆ ನುಣುಚಿಕೊಂಡಿದ್ದಾರೆ. ಎರಡು ಮಕ್ಕಳ ತಾಯಿಯಾಗಿರುವ ಈ ಮಾದಕ ನಾಟ್ಯಕನ್ಯೆಯ ಮುಂದೆ ಉತ್ತಮ ಆಫರ್‌ಗಳು ಬಂದಿವೆಯಾದರೂ, ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲವಂತೆ.
ಹಲವು ನೃತ್ಯವೈಶಿಷ್ಟ್ಯ ಚಿತ್ರಗಳಿಗೆ ಜೀವ ತುಂಬಿರುವ ಈ 'ಪದ್ಮ ಶ್ರೀ' ಪುರಸ್ಕೃತೆ, ಮಕ್ಕಳ ಪೋಷಣೆಗಾಗಿ ಕೆಲ ವರ್ಷ ನೃತ್ಯಕ್ಕೆ ಬ್ರೇಕ್ ಹಾಕಿದ್ದರು. ಈಗ ಮಕ್ಕಳು ಶಾಲೆಗೆ ಹೋಗುವುದರಿಂದ, ಬಿಡುವಿನ ವೇಳೆಯಲ್ಲಿ ನೃತ್ಯ ಶುರುಹಚ್ಚಿಕೊಂಡಿದ್ದೇನೆ ಎಂದಿದ್ದಾರೆ ಈ 'ಕಥಕ್' ಪ್ರವೀಣೆ.
'ನೃತ್ಯವೆಂಬುದು ಕೇವಲ ದೇಹದ ಚಲನೆಯಲ್ಲ, ಅದು ಆಧ್ಯಾತ್ಮದೆಡೆಗೆ ನನ್ನನ್ನು ಕೊಂಡೊಯ್ಯುವ ಸ್ಪೂರ್ತಿ' ಎಂದು ತನಗೂ, ನೃತ್ಯಕ್ಕೂ ಇರುವ ಅವಿನಾಭಾವ ಸಂಬಂಧವನ್ನು ವರ್ಣಿಸಿರುವ ಮಾಧುರಿ ದೀಕ್ಷಿತ್, ಎಂಥಹ ನೃತ್ಯವನ್ನೂ ಆಕರ್ಷಕವಾಗಿ ನಿಭಾಯಿಸಬಲ್ಲ ಕಲಾವಿದೆ.