ಭಯದಿಂದ ನಡುಗುತ್ತಿರುವ ನಿಶಾ ಕೊಠಾರಿ!
ಪ್ರಿಯಾಂಕಾ ಕೊಠಾರಿ ಅರ್ಥಾತ್ ನಿಶಾ ಕೊಠಾರಿ ನಶೆಯೇರಿಸುವ ಹಾಗೆ ಐಟಂ ನಂಬರ್‌ಗಳಲ್ಲಿ ಕಾಣಿಸಿಕೊಂಡದ್ದೆಲ್ಲ ಹಳೇ ಸುದ್ದಿ. ಕನ್ನಡದ ನೆಲದಲ್ಲಿ ರಾಜ್ ಚಿತ್ರಕ್ಕಾಗಿ ಪುನೀತ್ ಜತೆಗೆ ನಟಿಸಿದ್ದೂ ಕೂಡಾ ಎಲ್ಲರಿಗೆ ಹಳೇ ಸುದ್ದಿ. ಆದರೆ ರಾಮ್ ಗೋಪಾಲ್ ವರ್ಮಾರ ಅಗ್ಯಾತ್‌ನಲ್ಲಿ ಶ್ರೀಲಂಕಾದ ದಟ್ಟಡವಿಯಲ್ಲಿ ನಟಿಸಿ ಬಂದ ಮೇಲೆ ನಿಶಾ ನಿಜಕ್ಕೂ ಥರ ಥರ ನಡುಗುತ್ತಿದ್ದಾರಂತೆ!ಹೌದು. ನಿಶಾಗೆ ಈಗಲೂ ಅಗ್ಯಾತ್ ಭಯದಿಂದ ಹೊರಬರಲು ಸಾಧ್ಯವಾಗುತ್ತಿಲ್ಲವಂತೆ. ಚಿತ್ರದಲ್ಲಿರುವಂತೆ, ಯಾವುದೋ ಅಗೋಚರವಾದುದು ಹಿಂಬಾಲಿಸಿದಂತೆ, ಅಟ್ಟಿಸಿಕೊಂಡು ಬಂದಂತೆ ಅನಿಸಿ ಭಯ ಬೀಳುತ್ತಾಳಂತೆ. ಹಾಗಂತ ಹೇಳಿದ್ದು ಸ್ವತಃ ಈ ನಶೆಯೇರಿಸುವ ಕನ್ಯೆ ನಿಶಾ ಕೊಠಾರಿ!ಶ್ರೀಲಂಕಾದ ಸಿಗಿರಿಯಾ ದಟ್ಟಡವಿಯಲ್ಲಿ ನಡೆದ ರಾಮ್ ಗೋಪಾಲ್ ವರ್ಮಾರ ಅಗ್ಯಾತ್ ಎಂಬ ಅಡ್ವೆಂಚರ್ ಥ್ರಿಲ್ಲರ್ ಹಾರರ್ ಕಥಾನಕದಲ್ಲಿ ಪ್ರಿಯಾಂಕಾ ಕೊಠಾರಿ ನಾಯಕಿ. ಚಿತ್ರದಲ್ಲಿ ಒಂದು ಸಿನಿಮಾ ತಂಡ ಶ್ರೀಲಂಕಾಕ್ಕೆ ಶೂಟಿಂಗ್‌ಗೆಂದು ತೆರಳುವ ಕಥೆ. ಆ ಶೂಟಿಂಗ್‌ನಲ್ಲಿ ಸದ್ದೇ ಇಲ್ಲದೆ ಒಬ್ಬರಾದ ಮೇಲೆ ಒಬ್ಬರು ಸಾಯುತ್ತಾ ಕೊನೆಗೆ ಸಾವಿನಿಂದ ತಪ್ಪಿಸಿಕೊಳ್ಳಲು ಚಿತ್ರತಂಡದ ಹೋರಾಟದ ಕಥೆಯಿದೆ. ಇದು ಹಾರರ್ ಕಥಾನಕವಾಗಿದ್ದರೂ, ಅಡ್ವೆಂಚರ್ ಕೂಡಾ ಇದೆ.ಇಂತಿಪ್ಪ ಚಿತ್ರದಲ್ಲಿ ನಟಿಸಲು ಪ್ರಿಯಾಂಕಾ ಕೊಠಾರಿ ಶ್ರೀಲಂಕಾಕ್ಕೆ ತೆರಳಿದ್ದಾಗ, ಆಕೆಗೆ ನಿಜಕ್ಕೂ ಸಿನಿಮಾದ ಕಥೆಯಂತಹುದೇ ಅನುಭವವಾಯಿತಂತೆ. ಆಕೆ ಹೇಳುವಂತೆ, ನಿಜಕ್ಕೂ ಅಲ್ಲಿ ನಾವು ಹೋಟೇಲಿನಲ್ಲಿ ಉಳಕೊಂಡಿದ್ದಾದರೂ, ಸುತ್ತಲೂ ಎಲ್ಲೆಲ್ಲೂ ದಟ್ಟ ಕಾಡು. ರೂಮಿನೊಳಗೆ ಹಲ್ಲಿಗಳಿದ್ದವು. ಸಿಕ್ಕಾಪಟ್ಟೆ ಸೊಳ್ಳೆ ಕಡಿಯುತ್ತಿದ್ದವು. ನಾನು ನಿಜಕ್ಕೂ ಭಯಬೀಳುತ್ತಿದ್ದೆ. ಅಲ್ಲದೆ, ಚಿತ್ರದುದ್ದಕ್ಕೂ ನನಗೆ ತುಂಬಾ ಗಾಯಗಳಾಗಿವೆ. ದೇಹದ ಹಲವೆಡೆ ತರಚು ಗಾಯಗಳು, ಭುಜ ಹಾಗೂ ಕಾಲಿಗೆ ಸಿಕ್ಕಾಪಟ್ಟೆ ಗಾಯಗಳಾಗಿವೆ. ಕಾಡಿನಲ್ಲಿ ವಿಷಪೂರಿತ ಹಾವುಗಳೂ ಇದ್ದವು. ರೂಮಿಗೆ ಹಾವು ಬಂದುಬಿಟ್ಟರೆ ಎಂದು ದಿನವೂ ಭಯ ಪಡುತ್ತಿದ್ದೆ. ಅಗ್ಯಾತ್ ನಿಜಕ್ಕೂ ನನ್ನ ಸಿನಿಮಾ ಜೀವನದ ಅದ್ಭುತ ಭಯಂಕರ ಅನುಭವ ಎನ್ನುತ್ತಾಳೆ.
ಜತೆಗೆ ಚಿತ್ರದ ಶೂಟಿಂಗ್ ಸಂದರ್ಭ ನಮ್ಮ ತಂಡಕ್ಕಿದ್ದ ಇನ್ನೊಂದು ಭಯ ಆನೆಗಳದ್ದು. ನಾವಿದ್ದ ಕಾಡಿನಲ್ಲಿ ಕಾಡುಪ್ರಾಣಿಗಳು ತುಂಬ ಇದ್ದವು. ಕಾಡಾನೆಗಳು ಕೂಡಾ. ಎಷ್ಟೋ ಬಾರಿ ಕಾಡಾನೆಗಳಿಂದ ತಪ್ಪಿಸಲಿಕ್ಕಾಗಿ ನಾವು ಶೂಟಿಂಗ್ ಜಾಗಗಳನ್ನು ಆಗಾಗ ಬದಲಾಯಿಸುತ್ತಿದ್ದೆವು ಎನ್ನುತ್ತಾಳೆ.ಗಾಯ, ಭಯ ಹೊರತುಪಡಿಸಿದರೆ ಬೇರೇನೂ ತೊಂದರೆಯೇ ಇರಲಿಲ್ಲ. ಶೂಟಿಂಗ್ ಅದ್ಭುತವಾಗಿತ್ತು ಅಂತಾಳೆ ಈ ನಶೆಯೇರಿಸುವ ಬೆಡಗಿ ನಿಶಾ. ಇಂತಹ ಹಾರರ್, ಅಡ್ವೆಂಚರಸ್ ಸಿನಿಮಾ ಅಗ್ಯಾತ್‌ಗೆ ಯಾಕಪ್ಪಾ ಸಹಿ ಮಾಡಿದೆ ಅಂತೇನೂ ನಿಶಾಗೆ ಅನಿಸಿಲ್ಲವಂತೆ. ಈ ಚಿತ್ರ ನನಗೆ ದೊರೆತುದಕ್ಕೆ ತುಂಬ ಖುಷಿಯಿದೆ ಅಂತಾಳೆ.ಅಷ್ಟೆಲ್ಲಾ ಕಷ್ಟ ಪಟ್ಟಿದ್ದಕ್ಕೆ ಸಾರ್ಥಕವಾಗಿದೆ. ಅದೊಂದು ಅದ್ಭುತ ಕಥೆಯಿರುವ ಚಿತ್ರ. ನನಗೆ ನನ್ನ ಭವಿಷ್ಯದಲ್ಲಿ ಬೇಕಾದಷ್ಟು ರೊಮ್ಯಾಂಟಿಕ್, ಅಥವಾ ಕಾಮಿಡಿ ಚಿತ್ರಗಳು ದಕ್ಕಬಹುದು. ಆದರೆ ಅಗ್ಯಾತ್‌ನಂತಹ ಚಿತ್ರ ಸಿಗಲು ಖಂಡಿತಾ ಸಾಧ್ಯವಿಲ್ಲ. ರೊಮ್ಯಾಂಟಿಕ್, ಕಾಮಿಡಿ ಚಿತ್ರಗಳು ಬೇಕಾದಷ್ಟು ತಯಾರಾಗುತ್ತಿರುತ್ತವೆ. ಆದರೆ ಇಂತಹ ಚಿತ್ರಗಳು ತಯಾರಾಗೋದೇ ಕಡಿಮೆ. ಒಳ್ಳೆ ಸಮಯದಲ್ಲಿ ಒಳ್ಳೆ ಪಾತ್ರ ಸಿಕ್ಕಿದೆ ಅಂತ ಖುಷಿ ಪಡುತ್ತಾಳೆ ನಿಶಾ.ರಾಮ್ ಗೋಪಾಲ್ ವರ್ಮಾ ಕೀ ಆಗ್ ಚಿತ್ರದಲ್ಲಿ ಗುಂಗುರು ಪಾತ್ರದಿಂದ ಖ್ಯಾತಿ ಪಡೆದ ನಿಶಾ, ವರ್ಮಾರ ಸರ್ಕಾರ್‌ನಲ್ಲೂ ಅಭಿನಯಿಸಿದ್ದರು. ಸದ್ಯ ಅಗ್ಯಾತ್‌ನಲ್ಲಿ ಬಹಳ ಸಮಯದ ನಂತರ ತೆಲುಗು ನಟ ನಿತಿನ್ ಜತೆಗೆ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.ಅಂದಹಾಗೆ ಇಷ್ಟೆಲ್ಲ ಹೇಳಿದ ಮೇಲೂ ನಿಶಾ ಮಾತ್ರ ಭಯಭೀತರಾದಂತೇ ಇದ್ದರು. ಕಾರಣ ಕೇಳಿದರೆ ಆಕೆ ಹೇಳೋದು ಹೀಗೆ. ಅಗ್ಯಾತ್ ಒಂದು ಭಯಂಕರ ಚಿತ್ರ ಅದರಲ್ಲಿ ಅಭಿನಯಿಸಿ ಬಂದ ಮೇಲೆ ಅದರಿಂದ ಹೊರಬರಲೇ ಸಾಧ್ಯವಾಗುತ್ತಿಲ್ಲ. ಈಗಲೂ ನನ್ನನ್ನು ಯಾವುದೋ ಅಗೋಚರವಾದುದು ಹಿಂಬಾಲಿಸುತ್ತಿದೆ ಅನಿಸುತ್ತದೆ. ಹಾಗಾಗಿ ಒಮ್ಮೊಮ್ಮೆ ಭಯವಾಗಿಬಿಡುತ್ತದೆ. ಇನ್ನು ಜೀವಮಾನದಲ್ಲಿ ನಾನು ಆ ಥೇಮ್ಸ್ ಟೆಂಪಲ್ ಜಾಗಕ್ಕೆ ಹೋಗಲು ಸಾಧ್ಯವಾಗಲಿಕ್ಕಿಲ್ಲ ಅನಿಸುತ್ತದೆ. ಅದನ್ನು ನೆನೆಸಿದರೇ ಭಯ ಕಾಡುತ್ತದೆ ಎನ್ನುತ್ತಾರೆ.ಅಂದಹಾಗೆ, ನಿಶಾರಂತೆ ನೀವೂ ಭಯಬೀಳಬೇಕಾದರೆ, ಆಗಸ್ಟ್ 7ರವರೆಗೂ ಕಾಯಬೇಕು. ಅಗ್ಯಾತ್ ಆ.7ರಂದು ಬಿಡುಗಡೆಗೊಳ್ಳಲಿದೆ.