ಬೋನಿ ಕಪೂರ್-ಶ್ರೀದೇವಿಗೆ ಬೆದರಿಕೆ ಕರೆ?
Publish Date: Wed, 11 Sep 2013 (12:16 IST)
Updated Date: Wed, 11 Sep 2013 (12:16 IST)
ಬೋನಿ ಕಪೂರ್ ಹಾಗೂ ನಟಿ ಶ್ರೀದೇವಿ ಅವರಿಗೆ ಭೂಗತ ಪಾತಕಿ ರವಿ ಪೂಜಾರಿ ಜೀವ ಬೆದರಿಕೆ ಹಾಕಿದ್ದಾನೆ ಎಂಬ ಮಾತುಗಳು ಬಾಲಿವುಡ್ ತುಂಬೆಲ್ಲಾ ಹರಿದಾಡುತ್ತಿವೆ. ಬೆದರಿಕೆ ಕರೆ ಬಂದಿರುವುದು ರವಿ ಪೂಜಾರಿ ಅವರ ಗ್ಯಾಂಗ್ನಿಂದ ಎಂಬುದಂತೂ ದೃಢಪಟ್ಟಿದೆ. ಆದರೆ ಸ್ವತಃ ರವಿ ಪೂಜಾರಿ ಕರೆ ಮಾಡಿದ್ದಾನಾ, ಅಥವಾ ಅವರ ಗ್ಯಾಂಗ್ ಸದಸ್ಯರು ಕರೆ ಮಾಡಿದ್ದಾ ಎಂದು ಇನ್ನೂ ಸ್ಪಷ್ಟವಾಗಬೇಕಿದೆ. ನಿಮರ್ಾಪಕ ಬೋನಿ ಕಪೂರ್ ಅವರಿಗೆ ಅಂತರರಾಷ್ಟ್ರೀಯ ಕರೆ ಮಾಡಿರುವ ರವಿ ಪೂಜಾರಿ ತನಗೆ ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಇಲ್ಲವಾದಲ್ಲಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ ಎಂದು ಮೂಲಗಳು ತಿಳಿಸಿವೆ. ಹಣ ನೀಡಲು ಹಿಂದೆ ಮುಂದೆ ನೋಡಿದರೆ ಮಡದಿ ಹಾಗೂ ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬಾರದು ಎಂದೂ ಕರೆಯಲ್ಲಿ ಹೇಳಲಾಗಿದೆಯಂತೆ. ಮುಂಬೈನ ಸಹಚರರು ಯಾವುದೇ ವೇಳೆ ದಾಳಿ ನಡೆಸಬಹುದು ಎಂದು ಎಚ್ಚರಿಸಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭೂಗತಪಾತಕಿಗಳಿಂದ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಹೆಚ್ಚಿನ ಭದ್ರತೆ ಒದಗಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಅದಕ್ಕೂ ಮುನ್ನ ಕರೆಯ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಅವರ ಮನೆಯಲ್ಲಿ 6 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಕಳುವಾಗಿದ್ದು ನಿಮಗೆಲ್ಲಾ ನೆನಪಿರಬಹುದು. ಈ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸುವ ಮೂಲಕ ಪ್ರಕರಣ ಅಂತ್ಯಕಂಡಿತ್ತು.