Publish Date: Tue, 23 Jun 2009 (13:33 IST)
Updated Date: Tue, 23 Jun 2009 (13:31 IST)
ಬಾಲಿವುಡ್ ನಟರ ಬದುಕಿನ ಕರಾಳ ಅಧ್ಯಾಯ ಒಂದೊಂದಾಗಿ ಬಿಚ್ಚಿಕೊಳ್ಳುತ್ತಲೇ ಇರುವುದು ಇಂದು ನಿನ್ನೆಯ ಸುದ್ದಿಯಲ್ಲ. ಈಗ ಸ್ಲಂಡಾಗ್ ಮಿಲಿಯನೇರ್ ಎಂಬ ಆಸ್ಕರ್ ವಿಜೇತ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಆಗಿ ಅಭಿನಯಿಸಿದ ಅಜಿತ್ ಪಾಂಡೆ (21 ವರ್ಷ) ಆ ಪಟ್ಟಿಯಲ್ಲಿ ಸೇರಿದ್ದಾರೆ.
ಮುಂಬೈ ಕ್ರೈಂ ಬ್ರ್ಯಾಂಚ್ ಅಜಿತ್ ಪಾಂಡೆಯವರನ್ನು ಸುಲಿಗೆ ಆರೋಪದ ಮೇಲೆ ಸೋಮವಾರ ಬಂಧಿಸಿದ್ದಾರೆ. ಸ್ಲಂಡಾಗ್ ಮಿಲಿಯನೇರ್ ಚಿತ್ರವಲ್ಲದೆ, ಸಾರಥಿ, ಹನುಮಾನ್ ದಾರಾವಾಹಿಗಳಲ್ಲೂ ಅಜಿತ್ ಪಾಂಡೆ ನಟಿಸಿದ್ದರು.
ಪಾಂಡೆ ಅವರು ಸಿನಿಮಾ ಪ್ರೊಡಕ್ಷನ್ ಸಂಸ್ಥೆಯ ಮಾಲಿಕರಾದ ಪ್ರಮೋದ್ ಕಪೂರ್ ಅವರಿಗೆ ತಾನು ಹಸ್ರೀ ಎಂಬವನಾಗಿದ್ದು, ಛೋಟಾ ಶಕೀಲ್‌ನ ಸಹವರ್ತಿ ಎಂದು ಹೇಳುವ ಮೂಲಕ, ಒಂದೋ ತನಗೆ ಸಿನಿಮಾದಲ್ಲಿ ಉತ್ಮ ಪಾತ್ರ ಕೊಡಿ, ಇಲ್ಲವಾದಲ್ಲಿ 20 ಲಕ್ಷ ಕೊಡಿ ಎಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ಪಾಂಡೆ ಅವರನ್ನು ಬಂಧಿಸಲಾಗಿದೆ.
ಪ್ರಮೋದ್ ಕಪೂರ್ ಈ ಹಿಂದೆ ತನಗೆ ಛೋಟಾ ಶಕೀಲ್ ಗ್ಯಾಂಗ್‌ನವರೆಂದು ಹೇಳಿಕೊಳ್ಳುವ ವ್ಯಕ್ತಿಯಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪ್ರಮೋದ್ ಕಪೂರ್ ಅವರು ಆಗಾಗ ಬರುತ್ತಿದ್ದ ಈ ಕರೆಗಳಿಗೆ ಸೊಪ್ಪು ಹಾಕಿರಲಿಲ್ಲ. ನಂತರವೂ ಬೆದರಿಕೆ ಕರೆಗಳು ಹೆಚ್ಚಾಗಿದ್ದು, ತನಗೆ ಉತ್ತಮ ಪಾತ್ರ ಕೊಡಿಸಲಿಲ್ಲವಾದರೆ, 20 ಲಕ್ಷ ತನಗೆ ನೀಡಬೇಕೆಂದೂ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಮೋದ್ ಕುಮಾರ್ ದೂರು ನೀಡಿದ್ದರು ಎಂದು ಕ್ರೈಂ ಬ್ರಾಂಚ್ ಮುಖ್ಯಸ್ಥ ರಾಕೇಶ್ ಮರಿಯಾ ತಿಳಿಸಿದರು.
ನಂತರ ಪೊಲೀಸರು ಈ ಕರೆಗಳ ಜಾಡು ಹಿಡಿದು ತನಿಖೆ ನಡೆಸಿದಾಗ ಪಾಂಡೆ ಈ ಕರೆಗಳನ್ನು ಮಾಡುತ್ತಿದ್ದಾರೆ ಎಂದು ತಿಳಿದು ಬಂತು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ದೇವನ್ ಭಾರ್ತಿ ತಿಳಿಸಿದರು.
ಪಾಂಡೆ ಈ ಕರೆಗಳಿಗಾಗಿ ಮಧ್ಯಪ್ರದೇಶದ ಸಿಮ್ ಕಾರ್ಡ್ ಬಳಸುತ್ತಿದ್ದು ಪೊಲೀಸರ ಹಾದಿ ತಪ್ಪಿಸಲು ಪ್ರಯತ್ನಿಸಿದ್ದರು. ಅಲ್ಲದೆ, ತಮ್ಮ ಮನೆಯಿರುವ ಭಯಾಂದರ್‌ನ ಬಳಿಯ ಕನಕಿಯಾ ಪೊಲೀಸ್ ಠಾಣೆಗೆ ತನ್ನ ಮೇಲೆ ಅನುಮಾನ ಬರದಿರುವ ಹಾಗೆ ದೂರನ್ನೂ ದಾಖಲಿಸಿದ್ದರು. ಪಾಂಡೆ ಅವರು, ತನಗೆ ಛೋಟಾ ಶಕೀಲ್ ಕಡೆಯಿಂದ ಬೆದರಿಕೆಯ ಕರೆ ಬರುತ್ತಿದ್ದು, ಕಪೂರ್ ಅವರ ಪ್ರೊಡಕ್ಷನ್‌ನಲ್ಲಿ ನಟಿಸಲು ಬೆದರಿಕೆ ಒಡ್ಡಲಾಗುತ್ತಿದೆ ಎಂದೂ ದೂರಿದ್ದರು.