Publish Date: Sat, 08 Sep 2007 (16:22 IST)
Updated Date: Sat, 08 Sep 2007 (16:20 IST)
ತಮ್ಮ ಅಮೋಘ ಅಭಿನಯದ ಮೂಲಕ ಬಾಲಿವುಡ್ ಜಗತ್ತಿನಲ್ಲಿ ಮೋಡಿ ಮಾಡಿದ ಬಿಗ್ ಬಿಗೆ ಈಗ 65 ವರ್ಷ ವಯಸ್ಸು. ಅವರಿಗೆ ವಯಸ್ಸಾಗಿದ್ದರೂ ಯೌವನೋತ್ಸಾಹ ತುಂಬಿತುಳುಕುತ್ತಿದೆ.
ರವಿ ಚೋಪ್ರಾ ಅವರ ಭೂತನಾಥ್ ಚಿತ್ರದಲ್ಲಿ ಬಿಗ್ ಬಿ ಮೈ ಝುಮ್ಮೆನ್ನಿಸುವ ಸಾಹಸ ಮಾಡುವ ಮೂಲಕ ನವಯುವಕರನ್ನು ನಾಚಿ ನೀರಾಗಿಸಿದ್ದು ಇದಕ್ಕೆ ನಿದರ್ಶನ.
ಅವರ ಅರ್ಧದಷ್ಟು ವಯಸ್ಸಿನ ನಟರಿಗೆ ಮೈಚಳಿ ಹುಟ್ಟಿಸುವ ಸ್ಟಂಟನ್ನು ಅಮಿತಾಬ್ ಮಾಡಿ ವಯಸ್ಸು ಯಾವುದಕ್ಕೂ ಅಡ್ಡಿ ಬರುವುದಿಲ್ಲ ಎಂದು ನಿರೂಪಿಸಿದ್ದಾರೆ.
ಆ ಸ್ಟಂಟ್ ಬಗ್ಗೆ ಅಮಿತಾಬ್‌ರನ್ನು ಕೇಳಿದಾಗ ಅವರು ನಿತ್ಯಕಸುಬಿನ ಭಾಗ ಎಂದು ತಳ್ಳಿಹಾಕಿದ್ದಾರೆ. ಪ್ರತಿಯೊಂದು ಸ್ಟಂಟ್-ಆಕ್ಷನ್ ಅಪಾಯವೇ. ಆಕ್ಷನ್ ನಿರ್ದೇಶಕರು ಸೂಕ್ತ ಮುನ್ನೆಚ್ಚರಿಕೆ ಕೈಗೊಂಡು ಸುರಕ್ಷಿತಾ ಕ್ರಮ ಅನುಸರಿಸುತ್ತಾರೆ.
ಸ್ಟಂಟ್ ಬಗ್ಗೆ ಅಮಿತಾಬ್ ಹೇಳುವ ಮಾತು ಕೇಳಿ-" ನೀವು ಸುಮ್ಮನೆ ನಡೆಯುವಾಗಲೇ ಜಾರಿ ಕೆಳಕ್ಕೆ ಬಿದ್ದು ಮೂಳೆ ಮುರಿದುಕೊಳ್ಳಬಹುದು. ಇದಕ್ಕೆ ವಿರುದ್ಧವಾಗಿ ಕಟ್ಟಡದಿಂದ ಜಂಪ್ ಮಾಡುವ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಮೈತರಚದೆಯೂ ಇರಬಹುದು. ಭೂತನಾಥ್‌ನಲ್ಲಿ ನನ್ನ ಸ್ಟಂಟ್ ಸುರಕ್ಷಿತವಾಗಿತ್ತು.
ಆದರೆ ಇತ್ತೀಚಿನ ಶಶ್ತ್ರಚಿಕಿತ್ಸೆ ಮತ್ತಿತರ ಕಾರಣಗಳಿಂದ ಆತಂಕವಿತ್ತು. ಆದರೆ ಎಲ್ಲವೂ ಸುಸೂತ್ರವಾಗಿ ನಡೆಯಿತು. ಥ್ಯಾಂಕ್ ಗಾಡ್!" ಎಂದು ಉದ್ಗರಿಸುತ್ತಾರೆ.