ಬಾಬಾ ರಾಮದೇವ್ ಆಗಲಿರುವ ಸಂಜಯ್ ದತ್
ಕಳೆದ ವರ್ಷದಲ್ಲಿ ಫಸ್ ಗಯಾ ರೇ ಒಬಾಮಾ ಚಿತ್ರವನ್ನು ನಿರ್ಮಿಸಿದ್ದ ಚಿತ್ರದ ನಿರ್ದೇಶಕ ಸುಭಾಷ್ ಕಪೂರ್, ಇದೀಗ, ಭ್ರಷ್ಟಾಚಾರದ ವಿರುದ್ಧ ಬಾಬಾ ರಾಮದೇವ್ ಆಮರಣಾಂತ ಉಪವಾಸ ಸತ್ಯಾಗ್ರಹದಿಂದ ಸ್ಪೂರ್ತಿಗೊಂಡು ಚಿತ್ರವೊಂದನ್ನು ನಿರ್ಮಿಸಲಿದ್ದಾರೆ.ದೇವಮಾನವನ ಹೋರಾಟ ಮತ್ತು ಆತನ ಉದ್ದೇಶಗಳನ್ನು ಬಿಂಬಿಸುವ ಕಥಾಹಂದರ ಹಾಗೂ ಇಬ್ಬರು ರಾಜಕಾರಣಿಗಳ ವೈಮನಸ್ಸು ಸೇರಿದಂತೆ ಹಲವು ಘಟನೆಗಳನ್ನು ಹೊಂದಿದೆ. ಬಾಬಾ ರಾಮದೇವ್ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸಲಿದ್ದಾರೆ. ಪ್ರಸಕ್ತ ವರ್ಷದ ಆರಂಭದಲ್ಲಿ ಕೇಂದ್ರ ಸರಕಾರ ಭ್ರಷ್ಟಾಚಾರ ಮತ್ತು ಕಪ್ಪುಹಣ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಿರಾಕರಿಸಿದ್ದರಿಂದ, ಯೋಗ ಗುರು ಬಾಬಾ ರಾಮದೇವ್ ಒಂಬತ್ತು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ನಂತರ ಧಾರ್ಮಿಕ ಗುರುಗಳಾದ ಶ್ರೀ ರವಿಶಂಕರ ಮತ್ತು ಮೊರಾರಿ ಬಾಪು ಮಧ್ಯೆ ಪ್ರವೇಶಿಸಿ ಬಾಬಾ ರಾಮದೇವ್ ಉಪವಾಸ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಬಾಬಾ ರಾಮದೇವ್ ಅವರಿಗೆ ವಿಮಾನನಿಲ್ದಾಣದಲ್ಲಿ ರತ್ನಗಂಬಳಿ ಹಾಸಲು ಬಂದ ರಾಜಕಾರಣಿಗಳೇ, ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರಾಮಲೀಲಾ ಮೈದಾನದಲ್ಲಿ ಲಾಠಿ ಚಾರ್ಜ್‌ಗೆ ಆದೇಶ ನೀಡಿದ್ದರು ಎನ್ನುವುದು ಅಚ್ಚರಿ ಮೂಡಿಸಿತ್ತು. ಮತ್ತೊಂದು ವಿಷಯವೆಂದರೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಾಬಾ ರಾಮದೇವ್, ಸ್ವತಃ 1000 ಕೋಟಿ ರೂಪಾಯಿಗಳ ಸಂಪತ್ತಿನ ಒಡೆಯನಾಗಿರುವುದು ಮತ್ತಷ್ಟು ಅಚ್ಚರಿ ಮೂಡಿಸಿತು ಎಂದರು.ಮುಂದಿನ ವರ್ಷದ ಆರಂಭದಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ನಾಯಕನ ಪಾತ್ರಕ್ಕೆ ಸಂಜಯ್ ದತ್ ಆಯ್ಕೆಯಾಗಿದ್ದು, ಇತರ ತಾರಾಗಣದ ಆಯ್ಕೆ ನಡೆಯಬೇಕಾಗಿದೆ ಎಂದು ಸುಭಾಷ್ ಕಪೂರ್ ತಿಳಿಸಿದ್ದಾರೆ.