ಬರಲಿದೆ 'ರಾಹುಲ್ ಮಹಾಜನ್ ಕಾ ಸ್ವಯಂವರ್'...?
ಇದು ಸ್ಪಷ್ಟವಲ್ಲ, ಆದರೆ ತೀರಾ ಅಸ್ಪಷ್ಟವೂ ಅಲ್ಲ. ಇತ್ತೀಚಿನ 'ರಾಖಿ ಕಾ ಸ್ವಯಂವರ್'ಗೆ ಬಂದ ಭಾರೀ ಬೇಡಿಕೆಗಳಿಂದ ಉಬ್ಬಿ ಹೋಗಿರುವ ಎನ್‌ಡಿಟೀವಿ ಇಮ್ಯಾಜಿನ್ ಬ್ಯಾಡ್ ಬಾಯ್ ಎಂದೇ ಹೆಸರು ಗಿಟ್ಟಿಸಿಕೊಂಡಿರುವ ರಾಹುಲ್ ಮಹಾಜನ್‌ನನ್ನು ಬುಟ್ಟಿಗೆ ಹಾಕಿಕೊಂಡು ಮದುವೆ ಮಾಡಲು ಹೊರಟಿದೆ ಎಂಬ ಸುದ್ದಿಗಳು ಹಬ್ಬುತ್ತಿರುವುದಂತೂ ಸತ್ಯ.ಮೊನ್ನೆ ಭಾನುವಾರವಷ್ಟೇ ಅಂತ್ಯಗೊಂಡ 'ರಾಖಿ ಕಾ ಸ್ವಯಂವರ್'ನಲ್ಲಿ ಐಟಂ ಗರ್ಲ್ ರಾಖಿ ಸಾವಂತ್ ಕೆನಡಾ ನಿವಾಸಿ ಭಾರತ ಮೂಲದ ಇಲೇಶ್ ಪರುಜನ್‌ವಾಲನನ್ನು ತನ್ನ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡ ಹೊತ್ತಿಗೆ ಎನ್‌ಡಿಟೀವಿ ಇಮ್ಯಾಜಿನ್ ಟಿಆರ್‌ಪಿ ರೇಟ್ ಕೂಡ ಗಗನಕ್ಕೇರಿತ್ತು. ಕಾರ್ಯಕ್ರಮ ಮುಗಿದ ಕಾರಣ ಈ ಸಮಯ ಮತ್ತು ಟಿಆರ್‌ಪಿ ಬೇರೆ ಚಾನೆಲ್‌ಗಳಿಗೆ ಹಂಚಿ ಹರಿದು ಹೋಗುತ್ತಿದೆ.ಅದನ್ನು ಮತ್ತೆ ತನ್ನತ್ತ ಸೆಳೆದುಕೊಳ್ಳುವ ಯತ್ನವಾಗಿ ರಾಹುಲ್‌ಗೆ ಮದುವೆ ಮಾಡಿಸುವ ಯೋಚನೆ ಎನ್‌ಡಿಟೀವಿಯದ್ದು ಎನ್ನಲಾಗಿದೆ. ಈಗಾಗಲೇ 'ಬಿಗ್ ಬಾಸ್ -2' ರಿಯಾಲಿಟಿ ಶೋದಲ್ಲಿ ಹೇಗೂ ಭಾಗವಹಿಸಿದ ಅನುಭವ ರಾಹುಲ್‌ಗಿದೆ. ಅಲ್ಲಿ ಸಾಕಷ್ಟು ವಿವಾದ, ರೊಮ್ಯಾನ್ಸ್‌ಗಳಿಂದಲೂ ಆತ ಸುದ್ದಿಯಾಗಿದ್ದ - ಸುಂದರ ಪುರುಷ ಬೇರೆ. ಹಾಟ್ ಐಟಂ ಗರ್ಲ್ ಪಾಯಲ್ ರೋಹಟ್ಗಿ ಮತ್ತು ಭೂಗತ ಪಾತಕಿ ಅಬು ಸಲೇಂ ಪ್ರಿಯತಮೆ ಮೋನಿಕಾ ಬೇಡಿ ಜತೆ ಆತನ ಹೆಸರು ಬಿಗ್ ಬಾಸ್ ಸಂದರ್ಭದಲ್ಲಿ ತೀರಾ ಹತ್ತಿರದಿಂದ ಅಚ್ಚಾಗಿದ್ದವು. ಆತನಿಗಿರುವ ಚಾರ್ಮ್ ಕೂಡ ಯಾವ ರೀತಿಯದ್ದು ಎಂಬುದನ್ನು ಟೀವಿ ವಾಹಿನಿಗಳು ತಿಳಿದುಕೊಂಡಿವೆ.
ಎನ್‌ಡಿಟೀವಿ ಕಚೇರಿಗೆ ರಾಹುಲ್ ಭೇಟಿ ನೀಡಿರುವುದರಿಂದ ಈ ಸುದ್ದಿಗಳಿಗೀಗ ಹೆಚ್ಚಿನ ರೆಕ್ಕೆ-ಪುಕ್ಕಗಳು ಹುಟ್ಟಿಕೊಂಡಿವೆ. ಆದರೆ ವಾಹಿನಿ ಮೂಲಗಳು ಇದನ್ನು ಸ್ಪಷ್ಟವಾಗಿ ತಳ್ಳಿ ಹಾಕಿವೆ. ರಾಹುಲ್ ಕೆಲಸದ ಮೇಲೆ ಕಚೇರಿಗೆ ಬಂದಿದ್ದಾರೆ ಎನ್ನವುದು ಎನ್‌ಡಿಟೀವಿ ಸ್ಪಷ್ಟನೆ. ರಾಹುಲ್ ಕೂಡ ಯಾವುದೇ ಮಾಹಿತಿಯನ್ನು ಹೊರಗೆಡವಿಲ್ಲ. ಬಾಲ್ಯದ ಗೆಳತಿ ಶ್ವೇತಾ ಸಿಂಗ್‌ಳನ್ನು ಮದುವೆಯಾಗಿದ್ದ ಪ್ರಮೋದ್ ಮಹಾಜನ್ ಪುತ್ರ ರಾಹುಲ್ ಕೆಲವೇ ತಿಂಗಳುಗಳಲ್ಲಿ ಆಕೆಗೆ ಡೈವೋರ್ಸ್ ಕೊಟ್ಟಿದ್ದ. ಆ ನಂತರ ಮತ್ತೆ ಬ್ಯಾಚುಲರ್ ಆಗಿ ಹಿಂಭಡ್ತಿ ಪಡೆದುಕೊಂಡಿರುವ ಕಾರಣ ಸ್ವಯಂವರ ಭಾಗ ಎರಡರಲ್ಲಿ ರಾಹುಲ್ ಕಾಣಿಸಿಕೊಂಡರೂ ಅಚ್ಚರಿಯಿಲ್ಲ ಬಿಡಿ.