ಬಂಧನ ವಾರಂಟ್ : ಉತ್ತರ ನಿರಾಕರಿಸಿದ ಶಿಲ್ಪಾ
ಚುಂಬನ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಜೈಪುರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಟಿ ಶಿಲ್ಪಾ ಶೆಟ್ಟಿಗೆ ಸಮನ್ಸ್ ಹೊರಡಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಶಿಲ್ಪಾಶೆಟ್ಟಿ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.ಶುಕ್ರವಾರ ಮುಂಜಾನೆ ಮಂಗಳೂರಿನಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿದ ಶಿಲ್ಪಾ, ಧಾರ್ಮಿಕ ಕ್ಷೇತ್ರದ ದರ್ಶನಕ್ಕೆ ಬಂದಿದ್ದೇವೆ, ಆದ್ದರಿಂದ ದಯವಿಟ್ಟು ಚುಂಬನ ಪ್ರಕರಣದ ಬಗ್ಗೆ ಕೇಳಬೇಡಿ ಎಂದು ಹೇಳಿ ಬಂಧನ ವಾರಂಟ್ ಕುರಿತು ಉತ್ತರ ನೀಡದೆ ಜಾರಿಕೊಂಡರು.ಮಾಧ್ಯಮದವರು ಪದೇಪದೇ ಇದೇ ವಿಚಾರವನ್ನು ಕೆದಕುವುದು ಸರಿಯಲ್ಲ ಎಂದು ಶಿಲ್ಪಾ ತಾಯಿ ಹೇಳಿಕೆ ನೀಡಿದ್ದಾರೆ.ಗುರುವಾರ ಸಂಜೆ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇಗುಲಕ್ಕೆ ಭೇಟಿ ನೀಡಿದ ಶಿಲ್ಪಾ ಹೂವಿನ ಪೂಜೆ ನೆರವೇರಿಸಿದರು. ಮುಖ್ಯ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಆಕೆಗೆ ಶೀಘ್ರ ವಿವಾಹಯೋಗ ಬರಲಿ ಎಂದು ದೇವರಲ್ಲಿ ಬೇಡಿಕೊಂಡರು ಎನ್ನಲಾಗಿದೆ.ಶುಕ್ರವಾರ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶಿಲ್ಪಾ ಭೇಟಿ ನೀಡಲಿದ್ದಾರೆ.