ಐಶ್ವರ್ಯ ರೈ ಅಭಿನಯದ ಬಹುಚರ್ಚಿತ 'ಪ್ರೊವೋಕ್ಡ್' ಹಿಂದಿ ಚಿತ್ರವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಲು ರಾಜ್ಯ ಮಹಿಳಾ ಆಯೋಗ ನಿರ್ಧರಿಸಿರುವುದು ಇದೀಗ ವಾದಕ್ಕೆ ಎಡೆಮಾಡಿದೆ.
ಯಾವುದೇ ಕಾರಣಕ್ಕೂ ಹಿಂದಿ ಚಿತ್ರವನ್ನು ಡಬ್ಬಿಂಗ್ ಮಾಡಲು ಬಿಡೆವು ಎಂದು ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದ್ದಾರೆ. ಒಮ್ಮೆ ಡಬ್ಬಿಂಗ್ ಗೆ ಅವಕಾಶ ನೀಡಿದರೆ ಮುಂದೆ ಎಲ್ಲರೂ ಇದೇ ಹಾದಿ ಹಿಡಿಯುತ್ತಾರೆ. 'ಗಾಂಧಿ'ಯಂತಹ ಚಿತ್ರವನ್ನೇ ಡಬ್ ಮಾಡಲು ಒಪ್ಪಲಿಲ್ಲ ಎಂಬುದು ಸಾ.ರಾ.ಗೋವಿಂದು ಸ್ಪಷ್ಟನುಡಿ.
ಇದಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನೇಸರ್ಗಿ ಹೇಳುವುದು ಹೀಗೆ :
ಕನ್ನಡ ಭಾಷೆ ಸಂಸ್ಕೃತಿ, ಹಾಗೂ ನಾಡಿನ ಬಗ್ಗೆ ಅಪಾರ ಗೌರವವಿದೆ. ಪರಭಾಷಾ ಚಿತ್ರಗಳನ್ನು ಡಬ್ಬಿಂಗ್ ಮಾಡುವ ಸಂಸ್ಕೃತಿಯನ್ನು ವಿರೋಧಿಸುತ್ತೇನೆ. ಆದರೆ ಮಹಿಳೆಯರ ಮೇಲೆ ನಡೆಯುವ ಶೋಷಣೆಯನ್ನು ಚಿತ್ರದಲ್ಲಿ ಸಮರ್ಥವಾಗಿ ಮೂಡಿಬಂದಿದೆ. ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಈ ಚಿತ್ರವನ್ನು ಮಹಿಳೆಯರಿಗೆ ತೋರಿಸಬೇಕು. ಅದಕ್ಕಾಗಿ ಇದನ್ನು ಕನ್ನಡಕ್ಕೆ ತರಬೇಕು. ಈ ಮೂಲಕ ಕೌಟುಂಬಿಕ ದೌರ್ಜನ್ಯದ ಬಗೆಗೆ ಅರಿವು ಮೂಡಿಸಲಾಗುವುದು ಎನ್ನುತ್ತಾರೆ ನೇಸರ್ಗಿ.