ಪ್ರೀತಿ, ರಾಣಿಯರ ನಿದ್ದೆಗೆಡಿಸಿದ ಜೇನ್ಕನ್ಯೆ!
ಒಂದು ಕಾಲದಲ್ಲಿ ಯುವಕರ ನಿದ್ದೆಗೆಡಿಸಿದ್ದ ಬಾಲಿವುಡ್ಡಿಗೆ ಬಾಲಿವುಡ್ಡನ್ನೇ ಆಳಿದ 'ಖಂಡಾಲಾ' ಹುಡುಗಿ ರಾಣಿ ಮುಖರ್ಜಿ ಹಾಗೂ ಗುಳಿಕೆನ್ನೆಯ ರಜಪೂತ ಬೆಡಗಿ ಪ್ರೀತಿ ಝಿಂಟಾ ಇಬ್ಬರನ್ನೂ ಇನ್ಯಾರೋ 'ಸುಂದರಿ' ಇದೀಗ ನಿದ್ದೆಗೆಡಿಸಿದ್ದಾಳಂತೆ! ಇಬ್ಬರು ಸುಂದರಿಯರನ್ನು ಮತ್ತೊಬ್ಬ ಸುಂದರಿ ನಿದ್ದೆಗೆಡಿಸಿದ್ದಾಳೆ ಎಂದರೆ ಕುತೂಹಲ ಹುಟ್ಟದೆ ಇರದು. ಹಾಗಾದರೆ, ಕಥೆ ಕೇಳಿ.ಮೊನ್ನೆ ಮೊನ್ನೆಯಷ್ಟೆ, 'ನನಗಿನ್ನು ಮರಸುತ್ತುವ ಕಾಲೇಜು ಹುಡುಗಿಯ ಪಾತ್ರ ಆಗಲಿಕ್ಕಿಲ್ಲ' ಹೇಳಿದ್ದ ಪ್ರೀತಿ ಝಿಂಟಾ ಕಡೇ ಪಕ್ಷ ಐಪಿಎಲ್‌ನಲ್ಲಾದರೂ ತೊಡಗಿಸಿಕೊಂಡು ಬ್ಯುಸಿಯಾಗಿದ್ದಾಳೆ. ಆದರೆ, 'ಆತೀ ಕ್ಯಾ ಖಂಡಾಲಾ..' ಎಂದಿದ್ದ, 'ಬ್ಲ್ಯಾಕ್'ನಲ್ಲಿ ಮನೋಜ್ಞ ಅಭಿನಯ ನೀಡಿದ್ದ, ತನ್ನ ಗರಗಸದಂತಹ ದ್ವನಿಯಿಂದಲೇ ಮತ್ತು ಬರಿಸಿದ್ದ, ಬಾಲಿವುಡ್ ನಂಬರ್ ವನ್ ನಟಿ ಎಂಬ ಸಿಂಹಾಸನಕ್ಕೇ ಕಣ್ಣು ಹಾಕಿದ್ದ ಸುಂದರಿ ರಾಣಿ ಮುಖರ್ಜಿ ಮಾತ್ರ ಸದ್ಯಕ್ಕೆ ಕಾಣೆಯೇ ಆದಂತಿದೆ. ಏನೇ ಇರಲಿ, ಅವರಿಬ್ಬರಿಗೂ ಈಗ ತಮಗೆ ಪ್ರಾಯವಾಗುತ್ತಿದೆ ಎಂದು ತಲೆಬಿಸಿಯಾಗುತ್ತಿದೆಯಂತೆ.ಈ ಇಬ್ಬರ ನಿದ್ದೆಯನ್ನೂ ಹಾಳು ಮಾಡುತ್ತಿರುವ ಇನ್ನೊಬ್ಬ ಸುಂದರಿ ಈಗ ಬಾಲಿವುಡ್ಡಿಗೆ ಲಗ್ಗೆಯಿಟ್ಟಿದ್ದೇ ಇಷ್ಟಕ್ಕೆಲ್ಲ ಮೂಲ ಕಾರಣ. ಅದು ಇನ್ಯಾರೆಂದು ಹೇಳಲೇಬೇಕಿಲ್ಲ. 'ಜಾನೇ ತು..' ಬೆಡಗಿ ಜೇನಕೆನ್ನೆಯ ಜಿನಿಲಿಯಾ ಡಿಸೋಜಾ!
ವಿಷಯವೇನೆಂದರೆ, ರಾಣಿ, ಪ್ರೀತಿ ಹಿಂದೆ ಬಾಚುತ್ತಿದ್ದ ಅವಕಾಶಗಳೆಲ್ಲ ಜೆನಿಲಿಯಾ ಪಾಲಾಗುತ್ತಿದೆ. ಬಾಲಿವುಡ್ಡಿನಲ್ಲಿ 'ಜಾನೇ ತೂ' ಎಂದಿದ್ದೇ ಎಂದಿದ್ದು, ಜೆನಿಲಿಯಾ ಎಂಬ ಸುಂದರಿಗೆ ಈಗ ಅವಕಾಶಗಳ ಸುರಿಮಳೆ. ಈ ಮೊದಲೇ 'ಮಸ್ತಿ', 'ತುಜೆ ಮೇರಿ ಕಸಮ್' ಚಿತ್ರಗಳಲ್ಲಿ ನಟಿಸಿದ್ದರೂ, ಅವಕಾಶ ಜೆನಿಲಿಯಾಗೆ ಗಿಟ್ಟಿರಲಿಲ್ಲ. ಕೊನೆಗೆ ದಕ್ಷಿಣದತ್ತ ಮುಖ ಮಾಡಿದ ಜೆನಿಲಿಯಾ ಅಲ್ಲಿ ತಳವೂರಿದಳು. ಈಗ ಮತ್ತೆ ಬಾಲಿವುಡ್ಡಿಗೆ ನಂಟು ಗಿಟ್ಟಿದೆ. ಒಳ್ಳೊಳ್ಳೆ ನಿರ್ದೇಶಕ, ನಿರ್ಮಾಪಕರಿಂದ ಉತ್ತಮ ಅವಕಾಶಗಳೂ ಸಿಗುತ್ತಿವೆ. ಅಷ್ಟೇ ಅಲ್ಲ, ಬಾಲಿವುಡ್‌ನ ಹಾಟ್ ಬೆಡಗಿಯಾಗಿ ವಿಶ್ವದ ಗಮನವನ್ನೇ ತನ್ನೆಡೆ ಸೆಳೆದಿದ್ದಾಳೆ. ಈಗ ಜೆನಿಲಿಯಾ 'ವಾಟಿಕಾ ಹೇರ್ ಆಯಿಲ್', 'ಫೇರ್ ಅಂಡ್ ಲವ್ಲಿ' ಮುಂತಾದ ಜಾಹಿರಾತುಗಳ ಬೆಡಗಿ. ಇವುಗಳಲ್ಲೆಲ್ಲ ಮೊದಲು ರಾಣಿ ರಾಣಿಯಾಗಿದ್ದಳು. ಇಷ್ಟೇ ಅಲ್ಲದೆ, ಪ್ರೀತಿ ಝಿಂಟಾಳೇ ಆಳಿದ್ದ 'ಕ್ಯಾಡ್‌ಬರಿ ಪರ್ಕ್' ಚಾಕೋಲೇಟ್ ಜಾಹಿರಾತು ಕೂಡಾ ಈಗ ಪ್ರೀತಿ ಕೈತಪ್ಪಿದೆ. ಅದಕ್ಕೂ ಈಗ ಜೆನಿಲಿಯಾ ಒಡತಿ.ಮೊದಲೇ ಈಗ ಚಿತ್ರಗಳಲ್ಲಿ ಅವಕಾಶಗಳೂ ಕಡಿಮೆ. ಅಳಿದುಳಿದಿದ್ದ ಜಾಹಿರಾತುಗಳೂ ಈಗ ಕೈತಪ್ಪಿದರೆ ಹೇಗೆ ಅಂತ ಅವರ ಚಿಂತೆ. ಒಟ್ಟಾರೆ ಜೆನಿ ಈಗ ಬಾಲಿವುಡ್ಡಿನ ಯಂಗ್ ಅಂಡ್ ಹಾಟ್ ಮುಖ ಎಂದರೆ ತಪ್ಪಲ್ಲ. ಇದಕ್ಕೇ ರಾಣಿ ಹಾಗೂ ಪ್ರೀತಿಗೆ ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟಿದ ಹಾಗೆ ಆಗುತ್ತದಂತೆ. ಎಲ್ಲವೂ ಕಾಲನ ಮಹಿಮೆ, ಅತ್ತೆಗೊಂದು ಕಾಲ.. ಸೊಸೆಗೊಂದು ಕಾಲ.. ಎನ್ನುತ್ತೀರಾ?!