ಪ್ರಿಯಾಂಕಾ ಛೋಪ್ರಾಗೆ ಜನ್ಮದಿನದ ಸಂಭ್ರಮ
ಮಾಜಿ ವಿಶ್ವಸುಂದರಿ, ಭಾರತ ಸುಂದರಿ, ಬಾಲಿವುಡ್ ಫ್ಯಾಷನ್ ಬೆಡಗಿ ಪ್ರಿಯಾಂಕಾ ಛೋಪ್ರಾಗೆ ಈಗ ಕರೆಕ್ಟಾಗಿ 27 ತುಂಬಿದೆ. 1982ರಲ್ಲಿ ಜೆಮ್‌ಶೆಡ್‌ಪುರದಲ್ಲಿ ಜನಿಸಿದ ಪ್ರಿಯಾಂಕಾಗೆ ಈ ಬಾರಿ ತನ್ನ ಜನ್ಮದಿನದ ಸಂಭ್ರಮಕ್ಕೆ ಎಲ್ಲರನ್ನು ಪಾರ್ಟಿಗೆ ಕರೆದು ಸತ್ಕರಿಸೋದು ಇಷ್ಟವಿಲ್ಲವಂತೆ. ತನ್ನ ತುಂಬ ಆತ್ಮೀಯರು ಹಾಗೂ ಆಪ್ತರ ಜತೆಗೂಡಿ ಜನ್ಮದಿನವನ್ನು ಸಂಭ್ರಮ ಪಡುವಾಸೆ.ನಾನು ಪಾರ್ಟಿ ಹುಡುಗಿಯಲ್ಲ. ನನಗೆ ನಾನೇ ಪಾರ್ಟಿ ಮಾಡೋದು ಇಷ್ಟವಾಗೋದಿಲ್ಲ. ಬೇರೆಯವರ ಪಾರ್ಟಿಗೆ ಬೇಕಾದರೆ ಹೋಗಿ ಬರುತ್ತೇನೆ. ಆದರೆ ಈ ಬಾರಿ ನಾನು ನನ್ನ ಕುಟುಂಬದ ಜತೆಗೆ ಜನ್ಮದಿನದ ಸಂಭ್ರಮ ಆಚರಿಸಿಕೊಳ್ಳುತ್ತೇನೆ ಎನ್ನುತ್ತಾರೆ ಪ್ರಿಯಾಂಕಾ.ನನ್ನನ್ನು ತುಂಬ ಇಷ್ಟಪಡುವ, ಅತಿಯಾಗಿ ಪ್ರೀತಿಸುವ ಮಂದಿಯೊಂದಿಗೆ ನಾನು ಜನ್ಮದಿನದ ಸಂಭ್ರಮ ಹಂಚಿಕೊಳ್ಳುತ್ತೇನೆ. ಅದೇ ನನಗೆ ಜನ್ಮದಿನಕ್ಕೆ ದೊಡ್ಡ ಉಡುಗೊರೆ ಎನ್ನುತ್ತಾಳೆ ಪ್ರಿಯಾಂಕಾ. ಆದರೆ ತನ್ನನ್ನು ಅತಿಯಾಗಿ ಪ್ರೀತಿಸುವ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಎಂಬ ಲಿಸ್ಟನ್ನು ಪ್ರಿಯಾಂಕ ಬಿಟ್ಟುಕೊಟ್ಟಿಲ್ಲ. ಈಗಾಗಲೇ ಶಾಹಿದ್ ಕಪೂರ್ ಎಂಬ ಚಾಕೋಲೇಟ್ ಹೀರೋ ಪ್ರಿಯಾಂಕ ಬದುಕಿಗೆ ಎಂಟ್ರಿ ಕೊಟ್ಟಿದ್ದಾನೆ ಎಂಬ ಸುದ್ದಿಯೂ ಇದೆ. ಅದರ ಬೆನ್ನಿಗೇ, ಕಳೆದೆರಡು ದಿನಗಳಿಂದ ಶಾಹಿದ್ ಕಪೂರ್ ಯಾವುದೇ ಕಾರ್ಯಕ್ರಮಗಳಿಗೂ ಡೇಟ್ಸ್ ಕೊಟ್ಟಿಲ್ಲವಂತೆ. ಪ್ರಿಯಾಂಕಾ ಜತೆಗೆ ಎರಡು ದಿನಗಳನ್ನು ಜನ್ಮದಿನದ ಪ್ರಯುಕ್ತ ಕಳೆಯೋದು ಕೂಡಾ ಈ ಇಬ್ಬರು ಜೋಡಿಗಳ ಪ್ಲಾನ್ ಎಂದು ಅಂತೆಕಂತೆಗಳಿವೆ.ಕಮೀನೇ ಚಿತ್ರದ ಶೂಟಿಂಗ್ ಸಂದರ್ಭ ಬೈಕಿನಿಂದ ಶಾಹಿದ್ ಹಾಗೂ ಪ್ರಿಯಾಂಕ ಇಬ್ಬರೂ ಬಿದ್ದಾಗ, ಶಾಹಿದ್ ಕಪೂರ್ ಪ್ರಿಯಾಂಕಾ ಮುಖಕ್ಕೆ ಪೆಟ್ಟಾಗದಂತೆ ರಕ್ಷಿಸಿದನಂತೆ. ಸಿನಿಮೀಯ ಮಾದರಿಯಲ್ಲಿ ರಕ್ಷಿಸಿದ ದಿನದ ನಂತರ ಸಿನಿಮೀಯ ರೀತಿಯಲ್ಲೇ ಈ ಇಬ್ಬರ ಮಧ್ಯೆ ಇದ್ದ ಗೆಳೆತನ ತನ್ನ ಮೇರೆಯನ್ನೂ ಮೀರಿ ಬೆಳೆದಿದೆ ಎಂಬ ಸುದ್ದಿಯೂ ಇದೆ. ಪ್ರಿಯಾಂಕಾ ಹಾಗೂ ಶಾಹಿದ್ ಇಬ್ಬರ ಮನೆಯೂ ಅಕ್ಕಪಕ್ಕ. ಹಾಗಾಗಿ ಈ ಅಪೂರ್ವ ಗೆಳೆತನ ಇನ್ನೂ ಗಟ್ಟಿಯಾಗುತ್ತಿದೆ ಎನ್ನಲಾಗಿದೆ. ಅದೇ ಸಂದರ್ಭ ಪ್ರಿಯಾಂಕಾ ತನ್ನ ಮಾಜಿ ಪ್ರೇಮಿ ಹರ್ಮಾನ್ ಜತೆಗೆ ಮತ್ತೆ ಒಂದಾಗಿದ್ದಾಳೆ ಎಂಬ ಸುದ್ದಿಯೂ ಬಾಲಿವುಡ್ಡಿನಲ್ಲಿ ಕೇಳಿ ಬಂದಿತ್ತು.
ಇಷ್ಟೆಲ್ಲ ಕತೆಯ ನಂತರ, ಮೊನ್ನೆ ಮೊನ್ನೆಯಷ್ಟೆ ಕಮೀನೇ ಚಿತ್ರದ ಕುರಿತು ರೇಡಿಯೋ ಕಾರ್ಯಕ್ರಮವೊಂದರಲ್ಲಿ ಆರ್‌ಜೆ ಒಬ್ಬರು ಪ್ರಿಯಾಂಕ ಬಗ್ಗೆ ಅಶ್ಲೀಲವಾಗಿ ಮಾತಾಡಿದ್ದರ ಬಗ್ಗೆ ಶಾಹಿದ್ ಸಿಕ್ಕಾಪಟ್ಟೆ ಕೋಪಗೊಂಡಿದ್ದು ಕೂಡಾ ಭಾರೀ ಸುದ್ದಿಯಾಗಿತ್ತು. ಪ್ರಿಯಾಂಕಾಗೆ ನಿಮ್ಮನ್ನೂ ಸೇರಿದಂತೆ ಸೆಟ್‌ನಲ್ಲಿರುವ ಎಲ್ಲರನ್ನು 'ತೃಪ್ತಿ' ಪಡಿಸುವುದು ಸ್ವಲ್ಪ ಕಷ್ಟವಾದೀತು ಎಂದು ಆರ್‌ಜೆ ಹೇಳಿದ್ದರು. ಇದಕ್ಕೆ ಶಾಹಿದ್ ಕಾರ್ಯಕ್ರಮದಿಂದಲೇ ಎದ್ದು ಹೊರನಡೆದಿದ್ದರಂತೆ. ಆಮೇಲೆ ಕ್ಷಮೆಯಾಚನೆಯ ನಂತರ ಕಾರ್ಯಕ್ರಮ ಮುಂದುವರಿಸಲಾಗಿತ್ತು.ಈ ಇಬ್ಬರೂ ತಾವು ಪ್ರೀತಿಸುತ್ತಿರುವ ಬಗ್ಗೆ ಮಾತ್ರ ಇನ್ನೂ ಸಾರ್ವಜನಿಕವಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದರೆ ಈಗಾಗಲೇ ಶಾಹಿದ್- ಪ್ರಿಯಾಂಕಾ ಜೋಡಿ ಬಾಲಿವುಡ್‌ನ ಹಾಟ್ ಜೋಡಿ ಎಂದು ಚುನಾಯಿತರಾಗಿದ್ದಾರೆ. ಆ ಮೂಲಕ ಜಾನ್- ಬಿಪಾಶಾ ಜೋಡಿಯನ್ನೂ ಹಿಂದಿಕ್ಕಿದ್ದಾರೆ.ಈ ವರ್ಷ ಪ್ರಿಯಾಂಕಾ ಜೀವನದಲ್ಲಿ ಮಹತ್ವದ್ದು. ಫ್ಯಾಷನ್ ಹಾಗೂ ದೋಸ್ತಾನಾ ಚಿತ್ರಗಳೆರಡೂ ಸೂಪರ್ ಹಿಟ್ ಆಗಿವೆ. ಇಂತಿಪ್ಪ ಪ್ರಿಯಾಂಕಾಗೆ ಮುಂದಿನ ಗುರಿಗಳೇನು ಎಂದು ಕೇಳಿದರೆ, ನಾನೇನೂ ಗುರುಗಳನ್ನು ಹಾಕಿಕೊಳ್ಳುವುದೇ ಇಲ್ಲ. ನಾನು ವಿಧಿಯನ್ನು ನಂಬುವವಳು. ನನ್ನ ಹಣೆಯಲ್ಲಿ ಏನು ಬರೆದಿದೆಯೋ ಅದು ಆಗುತ್ತೆ. ಆದರೆ ನಾನು ಪ್ರಯತ್ನ ಮಾತ್ರ ಸದಾ ಮಾಡುತ್ತೇನೆ. ಪ್ರಯತ್ನಕ್ಕೆ ಫಲ ನೀಡುವುದು ಆ ದೇವರಿಗೆ ಬಿಟ್ಟಿದ್ದು ಎಂದು ದಿಟ್ಟಳಾಗಿಯೇ ಉತ್ತರಿಸುತ್ತಾಳೆ ಪ್ರಿಯಾಂಕಾ.ಸದ್ಯಕ್ಕೆ ಪ್ರಿಯಾಂಕಾ ವಿಶಾಲ್ ಭಾರದ್ವಾಜ್ ಅವರ ಶಾಹಿದ್ ಕಪೂರ್ ಜತೆಗಿನ ಕಮೀನೇ ಹಾಗೂ ಅಶುತೋಷ್ ಗೌರೀಕರ್ ಅವರ ವಾಟ್ಸ್ ಯುವರ್ ರಾಶಿ? ಚಿತ್ರದ ಮೇಲೆ ನಿರೀಕ್ಷೆಯಲ್ಲಿದ್ದಾಳೆ. ವಾಟ್ಸ್ ಯುವರ್ ರಾಶಿ ಚಿತ್ರದಲ್ಲಿ ಪ್ರಿಯಾಂಕ 12 ಪಾತ್ರಗಳಲ್ಲಿ ಅಭಿನಯಿಸಿದ್ದಾಳೆ. ನಾಲ್ಕೈದು ತಿಂಗಳೊಳಗೆ 10 ಪ್ರಶಸ್ತಿಗಳನ್ನು ಬಾಚಿದ ಪ್ರಿಯಾಂಕಾ ಈಗ ಬಾಲಿವುಡ್‌ನ ಬೇಡಿಕೆಯ ನಟಿ. ಪ್ರಿಯಾಂಕಾಗೆ ಜನ್ಮದಿನದ ಶುಭಾಶಯ.