ಪ್ರಸಿದ್ಧ ಬಂಗಾಳಿ ಚಿತ್ರನಟಿ ಸುಚಿತ್ರ ಸೇನ್ ವಿಧಿವಶ
, ಶುಕ್ರವಾರ, 17 ಜನವರಿ 2014 (16:17 IST)
ಕೊಲ್ಕತ್ತಾ: ಪ್ರಸಿದ್ದ ಬಂಗಾಳಿ ನಟಿ ಸುಚಿತ್ರಾ ಸೇನ್ ಕೋಲ್ಕತ್ತಾದಲ್ಲಿ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಸೇನ್ ಚಿಕಿತ್ಸೆ ಪಡೆಯುತ್ತಿದ್ದರು.ಅವರಿಗೆ 82 ವರ್ಷಗಳಾಗಿದ್ದು, ಪುತ್ರಿ ಮೂನ್ ಮೂನ್ ಸೇನ್ ಮತ್ತು ಮೊಮ್ಮಕ್ಕಳಾದ ರೈಮಾ ಮತ್ತು ರಿಯಾ ಸೇನ್ ಅವರನ್ನು ಅಗಲಿದ್ದಾರೆ.ತೀವ್ರ ಹೃದಯಾಘಾತದಿಂದ ಬೆಳಿಗ್ಗೆ 8.25ಕ್ಕೆ ಅವರು ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದರು.ಎದೆ ನೋವಿನಿಂದಾಗಿ ಸೇನ್ ಅವರನ್ನು ಡಿ. 23ರಂದು ಬೆಲ್ಲೆ ವು ಕ್ಲಿನಿಕ್‌ಗೆ ಸೇರಿಸಲಾಗಿತ್ತು. ವೈದ್ಯರ ಜತೆ ನಿಯಮಿತ ಸಂಪರ್ಕ ಹೊಂದಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಚಿತ್ರಾ ಸಾವಿನ ಸುದ್ದಿ ಕೇಳಿದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದರು.ಸುಚಿತ್ರಾ ಸೇನ್ 1952ರಿಂದ 1978ರ ನಡುವೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಅವುಗಳಲ್ಲಿ 6 ಹಿಂದಿ ಚಿತ್ರಗಳೂ ಸೇರಿವೆ. ಕಳೆದ ಮೂವತ್ತುವರ್ಷಗಳಿಂದ ಸಾರ್ವಜನಿಕ ಜೀವನದಿಂದ ದೂರವುಳಿದ ಸುಚಿತ್ರ ಕುಟುಂಬದವರನ್ನು ಬಿಟ್ಟರೆ ಬೇರೆಯಾರನ್ನೂ ಭೇಟಿಯಾಗುತ್ತಿರಲಿಲ್ಲ.ಖ್ಯಾತ ನಟ ಮತ್ತು ನಿರ್ದೇಶಕ ಅಪರ್ಣ ಸೇನ್ ಸುಚಿತ್ರ ಅವರನ್ನು ಪ್ರಸಿದ್ಧ ನಟಿ ಎಂದು ವರ್ಣಿಸಿ ಅವರ ಸಾವಿನಿಂದ ಬಂಗಾಳಿ ಸಿನಿಮಾದಲ್ಲಿ ಒಂದು ಯುಗ ಅಂತ್ಯಗೊಂಡಿದೆ ಎಂದು ಹೇಳಿದ್ದಾರೆ.