Publish Date: Sat, 31 Jan 2009 (19:56 IST)
Updated Date: Sat, 31 Jan 2009 (19:56 IST)
ಇತ್ತೀಚೆಗಷ್ಟೇ ಬಿಡುಗಡೆಯಾಗಿ ಎಲ್ಲೆಡೆ ಜಯಭೇರಿ ಬಾರಿಸಿದ ಬಾಲಿವುಡ್ ಚಿತ್ರ 'ಗಜನಿ' ನಾಯಕ ನಟ ಅಮೀರ್ ಖಾನ್ ಇತ್ತೀಚಿನ ದಿನಗಳಲ್ಲಿ ಮತ್ತೆ ಮನೆ ಮಾತಾದವರು. ಅದ್ಭುತ ಚಿತ್ರಗಳತ್ತ ತನ್ನನ್ನು ತಾನು ಅರ್ಪಿಸಿಕೊಳ್ಳುವ ಖಯಾಲಿಯನ್ನು ಬೆಳೆಸಿಕೊಂಡಿರುವ ಈ ನಟ ಕಂ ನಿರ್ದೇಶಕ ಮಾತಿನ ವರಸೆಗೆ ಸಿಕ್ಕಾಗ ಬಾಲಿವುಡ್ ಮತ್ತು ತನ್ನ ಹಲವು ಆಯಾಮಗಳ ಬಗ್ಗೆ ತೆರೆದುಕೊಂಡರು.
ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ತೂರಿ ಬಂದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು, "ಸ್ಲಮ್‌ಡಾಗ್ ಮಿಲಿಯನೇರ್ ಚಿತ್ರವನ್ನು ನಾನು ಭಾರತೀಯ ಚಿತ್ರವೆಂದು ನೋಡಿಯೇ ಇಲ್ಲ. ಅದೊಂದು ರೀತಿ 'ಗಾಂಧಿ' ಚಿತ್ರವಿದ್ದಂತೆ. (ಗಾಂಧಿ ಚಿತ್ರವನ್ನು ವಿದೇಶೀ ನಿರ್ದೇಶಕ ಸರ್ ರಿಚರ್ಡ್ ನಿರ್ದೇಶಿಸಿದ್ದರು) ಸ್ಲಮ್‌ಡಾಗ್ ಭಾರತದ ಕುರಿತ ಚಿತ್ರ ಹೌದು. ಆದರೆ ಭಾರತೀಯ ಚಿತ್ರವಲ್ಲ" ಎಂದಿದ್ದಾರೆ.
ನಂತರ ವಿವಾದಗಳಿಂದ ತಪ್ಪಿಸಿಕೊಳ್ಳುವ ಯತ್ನವನ್ನು ಅಮೀರ್ ಕೂಡ ಕೈಗೊಳ್ಳುವ ಯತ್ನದಲ್ಲಿ, "ನನ್ನ ಪ್ರಕಾರ ಆಸ್ಕರ್ ಪ್ರಶಸ್ತಿ ಸ್ಲಮ್‌ಡಾಗ್‌ಗೆ ಬರಬಹುದು. ಈ ಚಿತ್ರ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ ಅಥವಾ ಇದರಿಂದಾಗಿ ಆ ಸಿನಿಮಾಕ್ಕೆ ಬೇಡಿಕೆ ಹೆಚ್ಚಿದೆ ಎಂಬ ಮಾತಿನಲ್ಲಿ ನನಗೆ ನಂಬಿಕೆಯಿಲ್ಲ" ಎಂದು ಹೇಳಿದರು.
ಆಸ್ಕರ್ ಬಾಗಿಲವರೆಗೆ ಹೋಗಿದ್ದ 'ತಾರೇ ಝಮೀನ್ ಪರ್' ಚಿತ್ರ ವಿದೇಶೀ ನಾಮನಿರ್ದೇಶನದಡಿಯಲ್ಲಿ ಸ್ಥಾನ ಪಡೆಯಲು ವಿಫಲವಾದ ಬಗ್ಗೆ ಮಾತನಾಡುತ್ತಾ ಅಮೀರ್ ಖಾನ್, "ನಾನು ಪ್ರಶಸ್ತಿಗಳಿಗಾಗಿ ಸಿನಿಮಾ ಮಾಡುತ್ತಿಲ್ಲ. ನನ್ನ ಉದ್ದೇಶ ಜನರಿಗೆ ಸಿನಿಮಾ ತಲುಪುದು ಮಾತ್ರ. ಆ ಚಿತ್ರವನ್ನು ಭಾರತ ಸೇರಿದಂತೆ ವಿದೇಶದಲ್ಲೂ ಪ್ರೇಕ್ಷಕರು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಇದು ನನಗೆ ಅಗಾಧ ಸಂತೃಪ್ತಿ ನೀಡಿದೆ ಮತ್ತು ಅಧಿಕ ಮೌಲ್ಯಯುತವಾದುದು ಕೂಡ" ಎಂದು ತಿಳಿಸಿದರು.
ಅಂತಹ ಅದ್ಭುತ ಚಿತ್ರ ನೀಡಿದ ಅಮೀರ್ ಖಾನ್ ಇತ್ತೀಚೆಗೆ 'ಗಜನಿ'ಯಂತಹ ಹಿಂಸೆಯನ್ನು ಬಿಂಬಿಸುವ ಸಿನಿಮಾ ನೀಡಿದ್ದು ಸರಿಯೇ ಎಂಬ ಪ್ರಶ್ನೆಗುತ್ತರಿಸಿದ ನಟ, "ಈ ಚಿತ್ರ ಹಿಂಸೆಯನ್ನೊಳಗೊಂಡಿದೆ ಎಂಬುದಕ್ಕೆ ಯು/ಎ ಪ್ರಮಾಣ ಪತ್ರವನ್ನು ಸೆನ್ಸಾರ್ ನೀಡಿದೆ. ಅಂದರೆ ಹೆತ್ತವರ ಜತೆ ನೋಡಬೇಕೆಂದು ಅದರ ಅರ್ಥ. ಹಾಗೆಂದ ಮಾತ್ರಕ್ಕೆ ಥಿಯೇಟರ್‌ಗೆ ನುಗ್ಗಬೇಕೆಂದು ನಾನು ಹೇಳುತ್ತಿಲ್ಲ. ಅದಕ್ಕೂ ಮೊದಲು ಸಿನಿಮಾ ವಿಮರ್ಶೆಗಳನ್ನು ನೋಡಿಕೊಳ್ಳಿ. ನಾನು ಕೂಡ ಹಾಗೆ ಮಾಡಿದ್ದೇನೆ. ನನ್ನ ಮಗ 15ರ ಜುನೈದ್‌ಗೆ ಸಿನಿಮಾ ತೋರಿಸಿದ್ದೇನೆ. ಆದರೆ 10ರ ಆಯಿರಾಳಿಗೆ ತೋರಿಸಿಲ್ಲ" ಎಂದು ತಿಳಿಸಿದರು.