ಭಾರತದ ಮನರಂಜನಾ ಉದ್ಯಮ ಸುಮಾರು ರೂ.50,000 ಕೋಟಿಯದ್ದಾಗಿದೆ. ಆದರೆ ಚಲನಚಿತ್ರ ಕ್ಷೇತ್ರ ಇಲ್ಲಿ ಪ್ರತಿ ವರ್ಷ ರೂ.16,000 ಕೋಟಿ ಮೊತ್ತವನ್ನು ನಕಲು ಹಾವಳಿಯಿಂದಾಗಿ ಕಳೆದುಕೊಳ್ಳುತ್ತದೆ.
ಇತ್ತೀಚೆಗೆ ಮುಂಬೈನಲ್ಲಿ ಫಿಕ್ಕಿ ಆಯೋಜಿಸಿದ್ದ, ಮಾಧ್ಯಮ ಮತ್ತು ಮನರಂಜನೆ ಕುರಿತ ಜಾಗತಿಕ ಸಮಾವೇಶದಲ್ಲಿ, ಭಾರತ - ಅಮೇರಿಕಾ ವ್ಯವಹಾರ ಒಕ್ಕೂಟದ (ಯುಎಸ್ಐಬಿಸಿ), ಅಧ್ಯಕ್ಷ ರಾನ್ ಸಮ್ಮರ್ಸ್ ಈ ವಿಷಯವನ್ನು ಹೊರಗೆಡವಿದರು.
ನಕಲಿನ ವಿರುದ್ಧ ಅಗತ್ಯವಿರುವ ಕಾನೂನು ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಮನರಂಜನೆ ನಕಲನ್ನು ಬಲವಂತದಿಂದಾದರೂ ತೊಲಗಿಸಬೇಕಾದ ಅನಿವಾರ್ಯತೆ ಇದೆ. ಪ್ರಾಪಂಚಿಕವಾಗಿ ಎಲ್ಲವೂ ಎಲೆಕ್ಟ್ರಾನಿಕ್ಮಯವಾಗುತ್ತಿರುವಾಗ, ತಂತ್ರಜ್ಞಾನವನ್ನನುಸರಿಸುವುದೇ ಸೂಕ್ತ ವಿಧಾನ ಎಂದು ಅವರು ತಿಳಿಸಿದರು.
ಬಾಲಿವುಡ್ ನಿರ್ಮಾಪಕ, ಯಶ್ ಚೋಪ್ರಾ ಈ ಕುರಿತು, ನಕಲುಗೊಳಿಸುವಿಕೆ ಅನೇಕ ವರ್ಷಗಳಿಂದ ಅತ್ಯಂತ ಆಳವಾಗಿ ಬೇರೂರಿದೆ. ಅದನ್ನು ಬುಡ ಸಮೇತ ಕಿತ್ತು ಹಾಕುವುದು ಬಹಳ ಕಷ್ಟವಾಗುತ್ತದೆ ಎಂದು ತಿಳಿಸುತ್ತಾ, ನಾವು ಇದನ್ನು ಸಂಪೂರ್ಣವಾಗಿ ತೊಡೆದುಹಾಕುವುದು ಅಸಾಧ್ಯವಾದರೂ, ನಕಲುಗೊಳಿಸುವಿಕೆಯನ್ನು ಕನಿಷ್ಟಗೊಳಿಸುವ ಸಾಧ್ಯತೆ ಬಹಳಷ್ಟಿದೆ ಎಂದರು.
ನಾವು ನಕಲುದಾರರನ್ನು ಅವರ ಹಾದಿಯಲ್ಲಿಯೇ ಬಡಿಯಬೇಕಾಗುತ್ತದೆ. ಆದರೆ ಇದಕ್ಕೆ ಕಾನೂನು ಪಾಲಕರ ಸಹಾಯವೂ ಅಗತ್ಯವಿದೆ ಎಂದು ಅವರು ನುಡಿದರು.
ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ಕಾರ್ಯದರ್ಶಿ, ಆಶಾ ಸ್ವರೂಪ್ ಹೇಳುವಂತೆ, ಒಂದೇ ಅವಧಿಯಲ್ಲಿ ಅಥವಾ ಅತ್ಯಲ್ಪ ಅವಧಿಯ ಅಂತರದಲ್ಲಿ ಚಿತ್ರವನ್ನು ಬಿಡುಗಡೆಗೊಳಿಸುವುದು ನಕಲನ್ನು ತಡೆಗಟ್ಟಲಿಕ್ಕೆ ಇರುವ ಒಂದು ಮಾರ್ಗವಾಗಿದೆ. ಜಬ್ ವಿ ಮೆಟ್ ಚಿತ್ರವನ್ನು ಇದೇ ವಿಧಾನ ಅನುಸರಿಸಿ ಬಿಡುಗಡೆಗೊಳಿಸಲಾಯಿತು. ಇದು ಉತ್ತಮ ಲಾಭವನ್ನೇ ಗಳಿಸಿತು ಎಂದು ಅವರು ತಿಳಿಸಿದರು.
ಈ ಬಗ್ಗೆ ಮಾತನಾಡಿದ ಸೋನಿ ಎಂಟರ್ಟೈನ್ಮೆಂಟ್ನ ಕುನಾಲ್ ದಾಸ್ ಗುಪ್ತಾ, ಇತ್ತೀಚೆಗೆ ಜಬ್ ವಿ ಮೆಟ್ ಚಿತ್ರವನ್ನು ಮೋಸರ್ ಬೇರ್ ಸಮೂಹ ಬಿಡುಗಡೆಗೊಳಿಸಿತು. ಅದರ ಅತ್ಯಲ್ಪ ಕಾಲದಲ್ಲಯೇ ಹೋಮ್ ವಿಡಿಯೋವನ್ನು ಸಹ ಬಿಡುಗಡೆಗೊಳಿಸಿತು. ಇದರಿಂದ ಹೆಚ್ಚಿನ ಆದಾಯ ಕೂಡ ಗಳಿಸಿತು ಎಂದು ತಿಳಿಸಿದರು.