ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ಗೊತ್ತಾಗದೆ ಇರುತ್ತಾ ಹೇಳಿ? ಹಾಗೆಯೇ, ಎಷ್ಟೇ ಬಾರಿ ನಮ್ಮ ನಡುವೆ ಏನಿಲ್ಲ ಅನ್ನುತ್ತಲೇ ಬಿಂದಾಸ್ ಆಗಿದ್ದ ಆಸ್ಕರ್ ವಿಜೇತ ಸ್ಲಂಡಾಗ್ ಮಿಲಿಯನೇರ್ ಚಿತ್ರದಲ್ಲಿ ತೆರೆಯ ಮೇಲಿನ ಪ್ರೇಮಿಗಳಾದ ದೇವ್ ಪಟೇಲ್ ಹಾಗೂ ಫ್ರೀದಾ ಪಿಂಟೋ ತೆರೆಮರೆಯ ಪ್ರೇಮ ಇದೀಗ ಅಧಿಕೃತ ಮುದ್ರೆ ಸಿಕ್ಕಿಬಿಟ್ಟಿದೆ. ಅಧಿಕೃತ ವಾರ್ತೆ ಹೊರಬಂದಿದ್ದು, ಸ್ವತಃ ದೇವ್ ಅಮ್ಮನಿಂದ!ದೇವ್ ಹಾಗೂ ಫ್ರೀದಾ ಪಿಂಟೋ ನಡುವೆ ಏನೋ ನಡೀತಿದೆ ಎಂದು ಸುಳಿವು ಕೊಟ್ಟಿದ್ದು ನಟ ಅನಿಲ್ ಕಪೂರ್. ನಂತರ ಹೋದಲ್ಲಿ ಬಂದಲ್ಲಿ ದೇವ್- ಫ್ರೀದಾದೇ ಸುದ್ದಿ. ಇತ್ತ ಫ್ರೀದಾ ಹಳೆಯ ಪ್ರಿಯಕರ ಬೆಂಗಳೂರಿನ ಚಳಿಯಲ್ಲೂ ಮೈ ಬೆವರಲಾರಂಭಿಸಿದ್ದರಂತೆ. ಆದರೂ ಫ್ರೀದಾ ಪಿಂಟೋ ಮಾತ್ರ ನಾವು ಡೇಟಿಂಗ್ ನಡೆಸುತ್ತಿಲ್ಲ. ನನಗೆ ದೇವ್ ಒಬ್ಬ ಪುಟ್ಟ ಹುಡುಗನಂತೆ ಅಂದು ಬಿಟ್ಟು ಸುಮ್ಮನಾದಳು. ಒಂದು ತಿಂಗಳ ಹಿಂದೆ ದೇವ್- ನನ್ನ ಸಂಬಂಧದ ಬಗ್ಗೆ ಮಾತನಾಡಲಾರೆ ಅಂದಳು. ಅತ್ತ ದೇವ್ ಫ್ರೀದಾ ಹೇಳಿಕೆಯಿಂದ ಕನ್ಫ್ಯೂಸ್ ಆದಂತೆ ಕಂಡರೂ, ನಾವು ಭೇಟಿಯಾಗುವುದಿಲ್ಲ. ಅಂಥದ್ದೇನೂ ಇಲ್ಲ ನಮ್ಮ ನಡುವೆ ಅಂದುಬಿಟ್ಟ.ಎಲ್ಲೋ ಹೊಟೇಲೊಂದರಲ್ಲಿ ಜತೆಗೆ ಕೂತಿದ್ದಕ್ಕೆ, ನಾಲ್ಕು ಮಾತಾಡಿದ್ದಕ್ಕೆ, ಕೈಕೈ ಹಿಡಿದು ತಿರುಗಿದ್ದಕ್ಕೆಲ್ಲ, ಎಲ್ಲೋ ಅಪ್ಪಿತಪ್ಪಿ ಪ್ರೀತಿಯಿಂದ ಕಣ್ಣು ಕಲೆತದ್ದಕ್ಕೆ ಸಂಬಂಧದ ಹಣೆಪಟ್ಟಿ ಕಟ್ಟಿಬಿಡುವುದು ಬೇಡಪ್ಪಾ ಅಂತ ಸ್ವಲ್ಪ ದಿನ ಗಾಸಿಪ್ಪಿಗರೂ ಸುಮ್ಮನೆ ಕುಳಿತರು. ಅತ್ತ ಫ್ರೀದಾಳೂ ಸಿಕ್ಕಾಪಟ್ಟೆ ಬ್ಯುಸಿಯಾಗಿ ಹಾಲಿವುಡ್ಡಿನಿಂದ ಅವಕಾಶಗಳನ್ನು ಬಾಚುತ್ತಾ, ಮ್ಯಾಗಜಿನ್ಗಳಿಗೆ ಸೆಕ್ಸೀ ಪೋಸು ನೀಡುತ್ತಾ ಹಾಯಾಗಿ ಇದ್ದಳು. ವಿಶ್ವ 10 ಸೆಕ್ಸೀ ಮಹಿಳೆಯರಲ್ಲಿ ತಾನೂ ಸ್ಥಾನ ಪಡೆದಳು. ರಾತ್ರೋರಾತ್ರಿ ಪ್ರಸಿದ್ಧಿಯ ಉತ್ತುಂಗಕ್ಕೇರಿದ ಹುಡುಗಿಯನ್ನು ಎಲ್ಲರೂ ನೋಡುತ್ತಾ ನಿಂತರು. ಅಫ್ಕೋರ್ಸ್, ದೇವ್- ಫ್ರೀದಾರ ಗಾಸಿಪ್ಪನ್ನೂ ಸ್ವಲ್ಪ ಮಟ್ಟಿಗೆ ಮರೆತರು.
ಆದರೆ ಗಾಸಿಪ್ಪಿಗರ ಕಣ್ಣು, ಕಿವಿ, ಮೂಗು ಬಾಯಿ ಸುಮ್ಮನಿದ್ದೀತೇ? ಮೊನ್ನೆ ಮೊನ್ನೆ ಇಸ್ರೇಲಿನ ಹೊಟೇಲೊಂದರಲ್ಲಿ ಮೂಲೆಯಲ್ಲಿ ಕುಳಿತು ರೊಮ್ಯಾಂಟಿಕ್ ಆಗಿ ತುಟಿಗೆ ತುಟಿ ಬೆಸೆಯುತ್ತಿದ್ದಾಗ ಚಕ್ಕಂತ ಎಲ್ಲರ ಕಣ್ಣಿಗೆ ಬಿದ್ದಿದ್ದಾರೆ. ಇಸ್ರೇಲಿನ ಜೆರುಸಲೆಮ್ನಲ್ಲಿ ತನ್ನ ಚಿತ್ರ ಮಿರಾಲ್ ಶೂಟಿಂಗಿನಲ್ಲಿದ್ದಾಗ ಫ್ರೀದಾಳನ್ನು ನೋಡಲು ದೇವ್ ಓಡೋಡಿ ಬಂದಿದ್ದಾನಂತೆ. ಇಬ್ಬರು ಜೋಡಿಗಳೂ ಶೂಟಿಂಗ್ ಮುಗಿದ ಮೇಲೆ ರಾತ್ರಿ ಭೇಟಿಯಾಗಿ ಪ್ರತಿಷ್ಠಿತ ಬಾರೊಂದರಲ್ಲಿ ಕೂತು ಗಂಟೆಗಟ್ಟಲೆ ಹರಟಿದರು. ವೈಟ್ ವೈನ್ ಸ್ವೀಕರಿಸಿದ ಇಬ್ಬರ ಕಣ್ಣುಗಳೂ ಅವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳುತ್ತಿದ್ದವು. ಅಲ್ಲದೆ, ಫ್ರೀದಾ ದೇವ್ ಭುಜದ ಮೇಲೆ ಒರಗಿದ್ದಳು. ಅಲ್ಲದೆ ಇಬ್ಬರೂ ಆಗ ಮೈಮರೆತು ಕೊಟ್ಟ ಕಿಸ್ಸು ಎಲ್ಲರ ಕಣ್ಣಿಗೆ ಬಿದ್ದುಬಿಟ್ಟಿದೆ. ತುಟಿಗೆ ತುಟಿ ಬೆರೆಸಿ ರೊಮ್ಯಾಂಟಿಕ್ ಆದ ಏಕಾಂತವನ್ನು ಅನುಭವಿಸಿದ ಈ ಜೋಡಿ ಆಮೇಲೆ ಬಾರ್ನಿಂದ ಹೊರಬೀಳುವಾಗ ಒಬ್ಬರಿಗೊಬ್ಬರು ಪರಿಚಯವೇ ಇಲ್ಲವೆಂಬಂತೆ ಬೇರೆ ಬೇರೆಯಾಗಿ ಹೊರಟು ಹೋದರರಂತೆ.
ಅದೆಲ್ಲಾ ಹೋಗಲಿ ಬಿಡಿ. ನಾವು ಉದಾರಿಗಳು. ಅವರು ಸ್ಟಾರ್ಗಳಾದರೂ ಹುಲು ಮಾನವರಷ್ಟೇ. ಏನೋ ಪಾಪ ಎಡವಟ್ಟಾಯಿತು ಅಂತ ಬಿಡೋಣ. ಆದರೆ, ಅಷ್ಟರಲ್ಲಿ ಬಾಂಬ್ ದಾಳಿಯಂತೆ ದೇವ್ ಪಟೇಲ್ ಅಮ್ಮ ಇದ್ದಕ್ಕಿದ್ದಂತೆ ನನ್ನ ಮಗ ಹಾಗೂ ಫ್ರೀದಾ ಪಿಂಟೋ ಜೋಡಿಗಳು. ಅವರ ನಡುವೆ ಉತ್ತಮ ಸಂಬಂಧ ಇದೆ ಅಂದಿದ್ದಾಳೆ.
ದೇವ್ ತಾಯಿ ಅನಿತಾ, ಫ್ರೀದಾ ಚೆಂದದ ಹುಡುಗಿ. ಆಕೆಯೆಂದರೆ ನನಗೆ ತುಂಬ ಪ್ರೀತಿ. ಫ್ರೀದಾ ಹಾಗೂ ನನ್ನ ಮಗ ದೇವ್ ನಡುವೆ ಒಂದು ಚೆಂದನೆಯ ರೊಮ್ಯಾಂಟಿಕ್ ಅಫೇರ್ ಇದೆ ಅಂತ ನನಗೆ ಗೊತ್ತು. ಅವರಿಬ್ಬರನ್ನೂ ಜತೆಯಾಗಿ ನೋಡುವುದೇ ನನಗೊಂದು ಸಂತೋಷ. ಅವರಿಬ್ಬರೂ ಜತೆಗೆ ಖುಷಿಯಾಗಿ ಇರುತ್ತಾರೆ. ದೇವ್ ಕೂಡಾ ಆಗಾಗ ಫ್ರೀದಾಳನ್ನು ನೋಡಲು ಇಸ್ರೇಲಿಗೆ ಹೋಗಿ ಬರುತ್ತಿರುತ್ತಾನೆ ಅಂದಿದ್ದಾರೆ.
ಇಷ್ಟೇ ಅಲ್ಲ. ನನ್ನ ಮಗ ದೇವ್ಗೆ ಫ್ರೀದಾಗಿಂತ ಉತ್ತಮ ಹುಡುಗಿ ಸಿಗಲಿಕ್ಕಿಲ್ಲ. ಅವನಿಗೆ ಅವಳೇ ತಕ್ಕ ಸಂಗಾತಿ ಅಂತ ಅಂದುಬಿಟ್ಟಿದ್ದಾರೆ ದೇವ್ ಪಟೇಲ್ನ ಅಮ್ಮ!