ಸ್ಲಂ ಸುಂದರಿ ಫ್ರೀದಾ ಪಿಂಟೋ ಹಾಗೂ ಸಹನಟ ದೇವ್ ಪಟೇಲ್ ನಡುವೆ ಏನೋ ನಡೀತಿದೆ ಎಂದು ಅವರ ಸಂಬಂಧಕ್ಕೆ ಬೆಣ್ಣೆ ಹಚ್ಚಲು ಹೊರಟವರ ಮೂಗಿಗೆ ಸ್ವತಃ ಫ್ರೀದಾ ಬೆಣ್ಣೆ ಸವರಿದ್ದಾಳೆ. ಕೆಲವೇ ದಿನಗಳ ಹಿಂದಷ್ಟೆ `ನಾವು ಡೇಟಿಂಗ್ ನಡೆಸುತ್ತಿಲ್ಲ' ಎಂದಷ್ಟೆ ಹೇಳಿ ನುಣುಚಿಕೊಂಡ ಫ್ರೀದಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, `ದೇವ್ ಒಬ್ಬ ಮಗುವಿನಂತೆ. ಆತ ಇನ್ನೂ ಪುಟ್ಟ ಹುಡುಗ' ಎನ್ನುವ ಮೂಲಕ ಬೆಣ್ಣೆ ಹಚ್ಚುವವರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾಳೆ.24
ರ ಹರೆಯದ ಈ ಸ್ಲಂ ಸುಂದರಿ 18ರ ಹರೆಯದ ದೇವ್‌ನನ್ನು ಆತ ನಮ್ಮ ಸ್ಲಂ ತಂಡದ ಒಬ್ಬ ಪುಟ್ಟ ಹುಡುಗನಿದ್ದಂತೆ ಎಂದದ್ದರಲ್ಲಿ ಏನೂ ತಪ್ಪಿಲ್ಲ ಬಿಡಿ ಎಂದರೆ, ಇತ್ತ ದೇವ್ ಮಾತ್ರ ನಮ್ಮ ನಡುವೆ ಏನೂ ಇಲ್ಲ ಎನ್ನಲು ತಡವರಿಸುತ್ತಲೇ ಇದ್ದಾನೆ. `ಬಹುಶಃ ಫ್ರೀದಾ ಬೇರೇನೋ ಹೇಳಲು ಹೋಗಿರಬೇಕು. ಇರಲಿ ಬಿಡಿ. ನಾವು ಹಾಗೇನೂ ಆಗಾಗ ಭೇಟಿಯಾಗುತ್ತಿಲ್ಲ' ಎಂದು ಹೇಳಿ ಜಾರಿಕೊಂಡಿದ್ದ. ಇತ್ತ ಸ್ಲಂ ತಂಡದ ಅನಿಲ್ ಕಪೂರ್ ಈ ಇಬ್ಬರು ಸ್ಲಂ ಜೋಡಿಗಳ ನಡುವೆ ಏನೋ ಬೇಯುತ್ತಿದೆ ಅಂತ ಹಿಂದೆ ಹಿಂಟ್ ಕೊಟ್ಟಿದ್ದರು. ಇಷ್ಟು ಸಿಕ್ಕಿದರೆ ಸಾಕು ಗಾಸಿಪ್ಪಿಗರು ಈ ಜೋಡಿಯ ಹಿಂದಿಂದಲೇ ಸುತ್ತುತ್ತಿದ್ದಾರೆ. ಜತೆಗೆ, ತಮ್ಮ ಗಾಸಿಪ್ಪಿಗೆ ಸಾಕ್ಷಿಯನ್ನೂ ಒದಗಿಸಿದ್ದಾರೆ. ವ್ಯಾಲೆಂಟೈನ್ ದಿನದಂದು ಲಂಡನ್‌ನ ಹೈಸ್ಟ್ರೀಟ್ ಜುವೆಲ್ಲರಿ ಸ್ಟೋರ್ ಒಂದರಲ್ಲಿ ಈ ಸ್ಲಂ ಜೋಡಿ ಉಂಗುರ ಹುಡುಕುತ್ತಿದ್ದುದು ಹಲವರ ಕಣ್ಣಿಗೆ ಬಿದ್ದಿದೆಯಂತೆ!ಆದರೆ ಇಂತಿಪ್ಪ ಸ್ಲಂ ಜೋಡಿ ಕಥೆಗೆ ಇತ್ತ ಬೆಂಗಳೂರಿನ ಫ್ರೀದಾಳ ಹಳೆಯ ಪ್ರಿಯಕರ 24ರ ಹರೆಯದ ರೋಹನ್ ಮಾತ್ರ ಅಕ್ಷರಶಃ ದೇವದಾಸನಾಗಿದ್ದಾನಂತೆ. ಅವನಿಗೆ ಇನ್ನೂ ಫ್ರೀದಾ ತನ್ನನ್ನು ಬಿಟ್ಟಿದ್ದು ಅರಗಿಸಿಕೊಳ್ಳಲಾಗುತ್ತಿಲ್ಲವಂತೆ. `ಬಹುಶಃ ಫ್ರೀದಾ ದೇವ್‌ನನ್ನು ಲವ್ ಮಾಡುತ್ತಿಲ್ಲ. ಆಕೆಗೆ ಆತನೆಡೆಗೆ ಆಕರ್ಷಣೆಯಾಗಿದೆ ಅಷ್ಟೆ. ಆದರೆ ಅವರಿಬ್ಬರ ನಡುವೆ ಲೈಂಗಿಕ ಸಂಬಂಧವೂ ಇದೆಯೇ ಅಂತ ಗೊತ್ತಿಲ್ಲ. ದೇವ್‌ನನ್ನು ಒಂದು ಬಾರಿ ಮುಖತಃ ಮಾತನಾಡಿದರೆ ನನಗೆ ಅವರಿಬ್ಬರ ಸಂಬಂಧದ ಬಗ್ಗೆ ಸರಿಯಾಗಿ ತಿಳಿಯಬಹುದು' ಅಂತ ತಡಬಡಾಯಿಸುತ್ತಾ ತನಗೆ ತಾನೇ ಸಮಾಧಾನಪಡುತ್ತಿದ್ದಾನಂತೆ ರೋಹನ್.
`ದೇವ್ ಜತೆಗೆ ಗೆಳೆತನ ಶುರುವಾದಾಗಿಂದಲೇ ನನ್ನ ಜತೆಗಿನ ಸಂಬಂಧವನ್ನು ಫ್ರೀದಾ ಬಿಟ್ಟುಬಿಟ್ಟಿದ್ದಾಳೆ. ಈಗ ಎಲ್ಲೇ ಹೋದರೂ ನನಗೆ ದೇವ್- ಫ್ರೀದಾ ಪೋಸ್ಟರ್ ಕಾಣಿಸುತ್ತದೆ. ನನಗೆ ಇದನ್ನು ನೋಡಿಯೇ ಹುಚ್ಚು ಹಿಡಿದಂತಾಗಿಬಿಟ್ಟಿದೆ. ಆದರೆ, ಜನವರಿ ತಿಂಗಳಲ್ಲೇ ಲಾಸ್ ಏಂಜಲಿಸ್‌ನಿಂದ ಫೋನ್ ಮಾಡಿ ಫ್ರೀದಾ ನನ್ನ ಜತೆಗಿನ 16 ತಿಂಗಳ ಲವ್‌ಗೆ ಎಳ್ಳುನೀರು ಬಿಟ್ಟಿದ್ದಾಳೆ' ಅಂತ ರೋಹನ್ ಗೋಳಿಡುತ್ತಾನೆ. ಅಂದ ಹಾಗೆ, ದೇವ್ ಫ್ರೀದಾಗೆ ಮಗುವಿದ್ದಂತೆ ಅಂದರೆ ನಂಬಿಬಿಡುವಷ್ಟು ರೋಹನ್ ಮುಗ್ಧನಲ್ಲವಂತೆ!
ಆದರೆ ಇತ್ತ, `ದೇವ್ ಮಗುವಿನಂತೆ' ಎಂದ ಫ್ರೀದಾ ಉಗುರು ಕಚ್ಚುತ್ತಾ, ಗಾಸಿಪ್ಪಿಗರ ಮೂಗಿಗೆ ಮತ್ತೆ ಬೆಣ್ಣೆ ಸವರುತ್ತಾಳೋ, ಸಿಹಿ ತಿನಿಸುತ್ತಾಳೋ.. ಕಾದು ನೋಡಬೇಕಷ್ಟೆ.