ತವರೂರಿಗೆ ಮರಳಿದ ಆಸ್ಕರ್ ವಿಜೇತರು
ಭಾರತದ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲಿ ಎತ್ತಿ ಹಿಡಿದ ಸ್ಲಂಡಾಗ್ ತಂಡ ಭಾರತಕ್ಕೆ ಮರಳಿದೆ. ಮುಂಬೈಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಮುಂಜಾವಿನಲ್ಲಿ ಬಂದಿಳಿದ ಸ್ಲಂ ತಂಡಕ್ಕೆ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು, ಗೆಳೆಯರು ಹಾಗೂ ಬಂಧುಗಳು ಹರ್ಷೋದ್ಗಾರದಿಂದ ಸ್ವಾಗತಿಸಿದರು.ಸೌಂಡ್ ಟೆಕ್ನೀಶಿಯನ್ ರೆಸಲ್ ಪೋಕುಟ್ಟಿ, ನಟ ಇರ್ಫಾನ್ ಖಾನ್ ಅವರನ್ನು ಜನರು ಸುತ್ತುಗಟ್ಟಿ ಹರ್ಷೋದ್ಗಾರದಿಂದ ಸಂಭ್ರಮಿಸಿದರೆ, ಬಾಲನಟರಾದ ಅಜರುದ್ದೀನ್ ಹಾಗೂ ರುಬೀನಾ ಎಲ್ಲರ ಕೇಂದ್ರಬಿಂದುವಾಗಿದ್ದರು. ಗರೀಬ್ ನಗರದ ನೂರಾರು ಕೊಳೆಗೇರಿವಾಸಿಗಳು ವಿಮಾನ ನಿಲ್ದಾಣಕ್ಕೆ ಒಂದು ಬಸ್‌ನಲ್ಲಿ ಬಂದು ತಂಡವನ್ನು ಅಭಿನಂದಿಸಿದರು. ನಂತರ ಪೋಕುಟ್ಟಿ ಅವರನ್ನು ತೆರೆದ ಕಾರಿನಲ್ಲಿ ಮುಂಬೈಯ ಅವರ ಮನೆಯವರೆಗೂ ಕರೆದೊಯ್ಯಲಾಯಿತು. ಸ್ಲಂ ತಂಡದ ಆಗಮನಕ್ಕಾಗಿ ಭಾರೀ ಪೋಲೀಸ್ ರಕ್ಷಣೆ ಒದಗಿಸಲಾಗಿತ್ತು. ಬೆಳಿಗ್ಗೆ ಐದರ ವೇಳೆಗೆ ತಮ್ಮ ಸ್ಲಂ ಮನೆಗೆ ತಲುಪಿದ ಅಜರುದ್ದೀನ್ ಹಾಗೂ ರುಬೀನಾರನ್ನು ಗರೀಬ್ ನಗರ ಸ್ಲಂವಾಸಿಗಳು ಕಣ್ಬುಂಬಿಕೊಂಡು ಮಕ್ಕಳ ಸಾಧನೆಯನ್ನು ಕೊಂಡಾಡಿ ಸಂಭ್ರಮಪಟ್ಟರು.ಹುಟ್ಟೂರು ಚೆನ್ನೈಗೆ ರೆಹಮಾನ್ಇದೇ ವೇಳೆ ಎರಡು ಆಸ್ಕರ್ ಪಡೆದ ಮೊದಲ ಭಾರತೀಯ ಸಂಗೀತ ಮಾಂತ್ರಿಕ ರೆಹಮಾನ್ ತಮ್ಮ ಹುಟ್ಟೂರು ಚೆನ್ನೈಗೆ ಕಾಲಿಡುತ್ತಿದ್ದಂತೆಯೇ ಭಾರೀ ಸಂಖ್ಯೆಯಲ್ಲಿ ನೆರೆದ ಜನಸ್ತೋಮದ ಹರ್ಷೋದ್ಗಾರದ ಕೂಗು ಮುಗಿಲು ಮುಟ್ಟಿತ್ತು. 43ರ ಹರೆಯದ ಈ ಸಂಗೀತ ಮಾಂತ್ರಿಕ ಇಂದು ಮುಂಜಾನೆ ಸುಮಾರು 2.30ರ ಸುಮಾರಿಗೆ ಎಮಿರೇಟ್ಸ್ ಏರ್‌ವೇಸ್ ಮೂಲಕ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಸಾವಿರಾರು ಸಂಖ್ಯೆಯಲ್ಲಿ ನೆರೆದ ಅವರ ಗೆಳೆಯರು ಹಾಗೂ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಕೋರಲಾಯಿತು. ಶಿವಮಣಿ ಮತ್ತು ತಂಡದವರಿಂದ ಡ್ರಮ್ಸ್ ಬೀಟ್ ಮೂಲಕ ಸ್ವಾಗತ ನೀಡಿದರೆ, ಇಂಡಿಯನ್ ಏರ್‌ಲೈನ್ಸ್ ವತಿಯಿಂದ ಕೇರಳದ ಕೊಟ್ಟು ಮೇಳಂ ತಾಳವಾದ್ಯಗಳ ಮೂಲಕ ಅಮೋಘವಾಗಿ ಬರಮಾಡಿಕೊಳ್ಳಲಾಯಿತು.ತಮಿಳುನಾಡು ರಾಜ್ಯ ಸರ್ಕಾರದ ವತಿಯಿಂದ ಮಾಹಿತಿ ಸಚಿವರಾದ ಪಾರಿತಿ ಇಲಾಂವಸುತಿ ಅವರು ಹೂಬುಕ್ಕೆ ನೀಡುವ ಮುಖಾಂತರ ಅಭಿನಂದನೆಯ ಸ್ವಾಗತ ನೀಡಿದರು.ಸಂತಸದ ಕಳೆ ತುಂಬಿದ್ದ ರೆಹಮಾನ್ ತಮ್ಮ ಅಭಿಮಾನಿಗಳತ್ತ ಕೈಬೀಸಿದರು. ಈ ಸಂದರ್ಭ ಖಾಸಗಿ ಚಾನಲ್‌ಗೆ ನೀಡಿದ ಸಂದರ್ಭದಲ್ಲಿ ತಮ್ಮೆಲ್ಲಾ ಅಭಿಮಾನಿಗಳು, ಗೆಳೆಯರ ಸಹಕಾರವನ್ನು ಸ್ಮರಿಸಿದ್ದಾರೆ. ಜತೆಗೆ ಇದು ತನ್ನ ಆರಂಭ ಅಷ್ಟೆ. ತಾನು ಇನ್ನೂ ಹಲವು ಸಾಧನೆಗಳನ್ನು ಮಾಡಬೇಕಿದೆ ಎಂದು ಹೇಳಿದರು.