Publish Date: Fri, 02 Nov 2007 (14:05 IST)
Updated Date: Fri, 02 Nov 2007 (14:04 IST)
ಟೆಲಿವಿಷನ್ ಇತಿಹಾಸದಲ್ಲೇ ಮೊದಲ ಪ್ರಯತ್ನವಿದು. ತಮಿಳು ಉಪಗ್ರಹ ವಾಹಿನಿ "ವಿಜಯ್ ಟಿವಿ"ಯಲ್ಲಿ ಖೋಜಾ ಒಬ್ಬರು ಚಾಟ್ ಶೋ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮ ಡಿಸೆಂಬರ್ ತಿಂಗಳಲ್ಲಿ ಆರಂಭವಾಗಲಿದೆ.
ಅಮೆರಿಕದಿಂದ ಎರಡು ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿಗಳನ್ನು ಪಡೆದಿರುವ 28 ವರ್ಷದ ರೋಸ್ ಎಂಬ ಖೋಜಾ ಈ ಶೋ ನಡೆಸಿಕೊಡಲಿದ್ದಾರೆ.
'ಇಪ್ಪಡಿಕ್ಕು ರೋಸ್' ಎಂಬ ಕಾರ್ಯಕ್ರಮವು ಮಕ್ಕಳ ಮೇಲಿನ ದೌರ್ಜನ್ಯ, ಖೋಜಾಗಳ ಬಗೆಗಿನ ತಾರತಮ್ಯ, ಬಹಿಷ್ಕಾರ ವಿಷಯಗಳು ಮತ್ತು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ.
ಸಾವಿರಾರು ಸಾಮಾಜಿಕ ಸಮಸ್ಯೆಗಳಿವೆ. ಅದರಲ್ಲಿ ಖೋಜಾಗಳ ಸ್ಥಿತಿಯೂ ಒಂದು. ಈ ಶೋದಲ್ಲಿ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲಾಗುತ್ತದೆ ಎಂದು ರೋಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಖೋಜಾಗಳ ಬಗೆಗೆ ಸಮಾಜಕ್ಕಿರುವ ದೃಷ್ಟಿಕೋನವನ್ನು ಈ ಕಾರ್ಯಕ್ರಮ ಬದಲಾಯಿಸಬಹುದೆಂಬ ಆಶಾವಾದದಲ್ಲಿರುವ ರೋಸ್, ಸಮಾಜದಲ್ಲಿ ಖೋಜಾಗಳ ಬಗ್ಗೆ ಸಾಕಷ್ಟು ತಪ್ಪು ಅಭಿಪ್ರಾಯಗಳಿವೆ. ಅವರಿಗೂ ಕನಸುಗಳಿವೆ, ಆಕಾಂಕ್ಷೆಗಳಿವೆ ಎಂದು ಹೇಳಿದ್ದಾರೆ.
ವಿದೇಶದಲ್ಲಿನ ನನ್ನ ಶಿಕ್ಷಣ ಮತ್ತು ನನ್ನ ಅನುಭವ ಮತ್ತಿತರ ಸಂಗತಿಗಳು ಈ ಶೋದ ಯಶಸ್ವಿ ಪ್ರದರ್ಶನಕ್ಕೆ ಪೂರಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರೋಸ್, ತನ್ನ ಕುಟುಂಬದ ವಿರೋಧವಿದ್ದರೂ, ಟಿವಿ ಕಾರ್ಯಕ್ರಮ ನಡೆಸುವ ಮೊದಲ ಹಿಜಡಾ ಎಂಬ ದಾಖಲೆ ಸೃಷ್ಟಿಸಲಿದ್ದಾರೆ.