Publish Date: Fri, 16 Jan 2009 (19:45 IST)
Updated Date: Fri, 16 Jan 2009 (19:44 IST)
ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನ ನೋಕಿಯಾ 15ನೇ ಸ್ಟಾರ್ ಸ್ಕ್ರೀನ್ ಅವಾರ್ಡ್ ಪ್ರಶಸ್ತಿಯ ಬಹುಪಾಲನ್ನು ಐತಿಹಾಸಿಕ ಚಿತ್ರವಾದ ಅಶುತೋಶ್ ಗೌರೀಕರ್‌ರ 'ಜೋಧಾ ಅಕ್ಬರ್' ಪಡೆದುಕೊಂಡಿದೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಹಿನ್ನಲೆ ಸಂಗೀತ ಮತ್ತು ಅತ್ಯುತ್ತಮ ಜನಪ್ರಿಯ ನಟಿ ಪ್ರಶಸ್ತಿಗಳನ್ನು ಈ ಚಿತ್ರ ಬಾಚಿಕೊಂಡಿದ್ದು, ಉಳಿದಂತೆ ರಾಕ್ ಆನ್ ಅತಿ ಹೆಚ್ಚು ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಎರಡನೇ ಸ್ಥಾನದಲ್ಲಿದೆ.
ಅತ್ತ 'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರಕ್ಕಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಪಡೆದುಕೊಂಡಿರುವ ಖುಷಿಯಲ್ಲಿರುವಾಗಲೇ ಎ.ಆರ್. ರೆಹಮಾನ್ ಎರಡೆರಡು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 'ಜೋಧಾ ಅಕ್ಬರ್' ಚಿತ್ರದಲ್ಲಿನ ಅದ್ಭುತ ಹಿನ್ನಲೆ ಸಂಗೀತಕ್ಕಾಗಿ ಹಾಗೂ 'ಜಾನೇ ತೂ ಯಾ ಜಾನೇ ನಾ' ಸಂಗೀತ ನಿರ್ದೇಶನಕ್ಕಾಗಿ ಎರಡು ಪ್ರಶಸ್ತಿಗಳು ಅವರ ಪಾಲಿಗೊಲಿದಿವೆ.
ಮಧುರ್ ಭಂಡಾರ್ಕರ್‌ರವರ 'ಫ್ಯಾಶನ್' ಚಿತ್ರದ ಕ್ಲಿಷ್ಟಕರ ನಟನೆಗಾಗಿ ನಟಿ ಪ್ರಿಯಾಂಕಾ ಛೋಪ್ರಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡಿದ್ದಾರೆ. 'ಸಿಂಗ್ ಈಸ್ ಕಿಂಗ್' ಚಿತ್ರದಲ್ಲಿ ಪಡೆದ ಜನಪ್ರಿಯತೆಗಾಗಿ ನಟ ಅಕ್ಷಯ್ ಕುಮಾರ್ ಜನಪ್ರಿಯ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶಾರೂಖ್ ಖಾನ್ ಯಾವುದೇ ಪ್ರಶಸ್ತಿಯನ್ನು ಪಡೆದುಕೊಳ್ಳದಿರುವುದು ವಿಶೇಷ.
ದಕ್ಷಿಣದಿಂದ ವಲಸೆ ಹೋದ ಆಸಿನ್ ತಟ್ಟುಮ್ಕಲ್ 'ಗಜನಿ' ಚಿತ್ರಕ್ಕಾಗಿ ನವನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅತಿ ನಿರೀಕ್ಷೆಯ ಗಜನಿ ಇನ್ನ್ಯಾವುದೇ ವಿಭಾಗದಲ್ಲಿ ಪ್ರಶಸ್ತಿ ಗಳಿಸಲು ವಿಫಲವಾಗಿರುವುದು ಕೂಡ ಗಮನಾರ್ಹ. ಯುವ ಪ್ರತಿಭಾವಂತರ ಗಮನ ಸೆಳೆದಿದ್ದ ಚಿತ್ರ 'ರಾಕ್ ಆನ್' ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಕೊಳ್ಳೆ ಹೊಡೆದಿದೆ.
ಪ್ರಶಸ್ತಿಯ ವಿವರಗಳು ಇಂತಿವೆ: ಅತ್ಯುತ್ತಮ ಚಿತ್ರ 'ಜೋಧಾ ಅಕ್ಬರ್', ಅತ್ಯುತ್ತಮ ನಿರ್ದೇಶಕ ಅಶುತೋಷ್ ಗೌರೀಕರ್ (ಜೋಧಾ ಅಕ್ಬರ್), ಅತ್ಯುತ್ತಮ ನಟ ಹೃತಿಕ್ ರೋಷನ್ (ಜೋಧಾ ಅಕ್ಬರ್), ಅತ್ಯುತ್ತಮ ನಟಿ ಪ್ರಿಯಾಂಕಾ ಛೋಪ್ರಾ (ಫ್ಯಾಶನ್), ಉತ್ತಮ ಪೋಷಕ ನಟ ಅರ್ಜುನ್ ರಾಮ್‌ಪಾಲ್ (ರಾಕ್ ಆನ್), ಪೋಷಕ ನಟಿ ಸಹಾನ ಗೋಸ್ವಾಮಿ (ರಾಕ್ ಆನ್), ಅತ್ಯುತ್ತಮ ಖಳನಟ ತುಷಾರ್ ಕಪೂರ್ (ಗೋಲ್‌ಮಾಲ್ ರಿಟರ್ನ್ಸ್), ಅತ್ಯುತ್ತಮ ಹಿನ್ನಲೆ ಸಂಗೀತ ಎ.ಆರ್. ರೆಹಮಾನ್ (ಜೋಧಾ ಅಕ್ಬರ್), ಅತ್ಯುತ್ತಮ ಸಂಗೀತ ಎ.ಆರ್. ರೆಹಮಾನ್ (ಜಾನೇ ತೂ ಯಾ ಜಾನೇ ನಾ), ಅತ್ಯುತ್ತಮ ಹಿನ್ನಲೆ ಗಾಯಕ ಕೃಷ್ಣಕುಮಾರ್ ಕುನ್ನಾತ್ (ಖುದಾ ಜಾನೆ - ಬಚ್ನಾ ಏ ಹಸೀನೋ), ಅತ್ಯುತ್ತಮ ಹಿನ್ನಲೆ ಗಾಯಕಿ ಶಿಲ್ಪಾ ರಾವ್ (ಖುದಾ ಜಾನೆ - ಬಚ್ನಾ ಏ ಹಸೀನೋ), ಅತ್ಯುತ್ತಮ ಸಾಹಿತ್ಯ ಅನ್ವಿತಾ ದತ್ ಗುಪ್ತನ್ (ಖುದಾ ಜಾನೆ - ಬಚ್ನಾ ಏ ಹಸೀನೋ), ಭರವಸೆಯ ನವನಟ ಫರ್ಹಾನ್ ಅಖ್ತರ್ (ರಾಕ್ ಆನ್), ಭರವಸೆಯ ನವನಟಿ ಆಸಿನ್ (ಗಜನಿ), ಉತ್ತಮ ಕಥೆ ನೀರಜ್ ಪಾಂಡೆ (ಎ ವೆನ್ಸ್‌ಡೇ), ಉತ್ತಮ ಚಿತ್ರಕಥೆ ಶಿರಾಜ್ ಅಹ್ಮದ್ (ರೇಸ್), ಅತ್ಯುತ್ತಮ ಸಂಕಲನ - ರಾಕ್ ಆನ್, ಅತ್ಯುತ್ತಮ ಕಲಾ ನಿರ್ದೇಶನ - ರಾಕ್ ಆನ್, ಅತ್ಯುತ್ತಮ ಛಾಯಾಗ್ರಹಣ - ರಾಕ್ ಆನ್, ಅತ್ಯುತ್ತಮ ಖ್ಯಾತ ನಟ - ಅಕ್ಷಯ್ ಕುಮಾರ್ (ಸಿಂಗ್ ಈಸ್ ಕಿಂಗ್), ಅತ್ಯುತ್ತಮ ಖ್ಯಾತ ನಟಿ - ಐಶ್ವರ್ಯಾ ರೈ (ಜೋಧಾ ಅಕ್ಬರ್), ಅತ್ಯುತ್ತಮ ಆನಿಮೇಶನ್ ಚಿತ್ರ - ರೋಡ್‌ಸೈಡ್ ರೋಮಿಯೋ, ಉತ್ತಮ ಜೋಡಿ ಜಾನ್ ಅಬ್ರಹಾಂ- ಅಭಿಷೇಕ್ ಬಚ್ಚನ್ (ದೋಸ್ತಾನ), ಜೀವಮಾನ ಶ್ರೇಷ್ಠ ಪ್ರಶಸ್ತಿ - ಸಂಜಯ್ ಖಾನ್, ರಾಮನಾಥ ಗೊಯೆಂಕಾ ಪ್ರಶಸ್ತಿ - ಎ ವೆನ್ಸ್‌ಡೇ ಚಿತ್ರದ ಪಾಲಾಗಿದೆ.