ಬಾಲಿವುಡ್ ನಟ ಶೈನಿ ಅಹುಜಾ ನಡೆಸಿದ್ದರೆನ್ನಲಾದ ಅತ್ಯಾಚಾರ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲಕರ ತಿರುವು ಪಡೆಯುತ್ತಲೇ ಸಾಗಿದೆ. ಗುರುವಾರ ಶೈನಿ ಅವರನ್ನು ನ್ಯಾಯಾಂಗ ವಶಕ್ಕೆ ಪೋಲೀಸರು ಒಪ್ಪಿಸಿದ್ದು, ಮುಂಬೈ ಕೋರ್ಟ್ ಶೈನಿ ಅವರ ನ್ಯಾಯಾಂಗ ಬಂಧನವನ್ನು ಜು.2ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಕೋರ್ಟಿನ ಈ ಆದೇಶವನ್ನು ಪ್ರಶ್ನಿಸಿ ಶೈನಿ ಪರ ವಕೀಲ ಶ್ರೀಕಾಂತ್ ಶಿವಾಡೆ ಶೈನಿ ಅಹುಜಾರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೋರಿ ಮೇಲ್ಮನವಿ ಸಲ್ಲಿಸಿದ್ದಾರೆ.
ಇದೇ ವೇಳೆ ಪೊಲೀಸರು ಶೈನಿ ಅವರ ಡಿಎನ್ಎ ಪರೀಕ್ಷೆಯನ್ನೂ ನಡೆಸಬೇಕೆಂದು ಕೋರಿಕೊಂಡಿದ್ದು, ಇದರಿಂದ ಈ ಪ್ರಕರಣಕ್ಕೆ ಸಾಕಷ್ಟು ಮಹತ್ವದ ವೈದ್ಯಕೀಯ ಸಾಕ್ಷಿ ದೊರೆಯಲಿದೆ ಎನ್ನಲಾಗಿದೆ. ಅಲ್ಲದೆ, ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎನ್ನಲಾದ ಕೆಲಸದಾಕೆಯ ಶಾಲಾ ಸರ್ಟಿಫಿಕೆಟ್‌ಗಳು ದೊರೆತಿದ್ದು, ಆ ದಾಖಲೆಗಳ ಪ್ರಕಾರ ಆಕೆಯ ವಯಸ್ಸು 20 ಎಂದೂ ತಿಳಿದುಬಂದಿದೆ. ಆದರೂ, ಆಕೆಯ ಎಲುಬು ಪರೀಕ್ಷೆಗಳ ಮೂಲಕ ವಯಸ್ಸನ್ನು ತಿಳಿಯುವ ವೈದ್ಯ ಪರೀಕ್ಷೆಗಳನ್ನು ಕೈಬಿಡಲಾಗುವುದಿಲ್ಲ ಎಂದೂ ಪೊಲೀಸ್ ವರದಿಗಳು ತಿಳಿಸಿವೆ.
ಇದೇ ವೇಳೆ ಶೈನಿ ಅವರ ಮನೆಯಿಂದ ತನಿಖೆ ವೇಳೆ ಪತ್ತೆ ಹಚ್ಚಿದ ಕೆಲವು ವಸ್ತುಗಳು ಹಾಗೂ ಬಟ್ಟೆಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಬಟ್ಟೆಯಲ್ಲಿದ್ದ ರಕ್ತದ ಕಲೆಗಳು ಹಾಗೂ ಶೈನಿಯ ಅವರಿಂದ ಪಡೆದ ರಕ್ತಕ್ಕೆ ಅದು ಹೊಂದಿಕೆಯಾಗುತ್ತದೆಯೋ ಎಂಬ ಪರೀಕ್ಷೆಗಳೂ ನಡೆಯಲಿವೆ. ವಿಭಾಗೀಯ ಪೊಲೀಸ್ ಉಪ ಆಯುಕ್ತ ನಿಕೇತ್ ಕೌಶಿಕ್ ಹೇಳುವಂತೆ, ಶೈನಿ ಮನೆಯಿಂದ ಕೆಲವು ವಸ್ತುಗಳನ್ನು ಪತ್ತೆಹಚ್ಚಲಾಗಿದೆ. ಬಟ್ಟೆಗಳಲ್ಲಿದ್ದ ವೀರ್ಯದ ಕಲೆಗಳನ್ನು ಪರೀಕ್ಷೆ ನಡೆಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲದೆ ಡಿಎನ್‌ಎ ಪರೀಕ್ಷೆಯನ್ನೂ ನಡೆಸುವುದು ಸೂಕ್ತ ಎಂದು ಹೇಳಲಾಗಿದ್ದು, ಇನ್ನು ಒಂದು ವಾರದಲ್ಲಿ ಈ ಎಲ್ಲಾ ವರದಿಗಳು ಸಿಗಲಿವೆ ಎಂದು ತಿಳಿಸಿದ್ದಾರೆ.
ಶೈನಿ ಮನೆಯಲ್ಲಿ ಕೆಲಸಮಾಡುವ ರೇಖಾ ಮೌಸಿ ಎಂಬ ಕೆಲಸದಾಕೆ, ಅತ್ಯಾಚಾರಕ್ಕೊಳಗಾಗಿದ್ದಾಳೆ ಎನ್ನಲಾದ ಕೆಲಸದಾಕೆಯಲ್ಲಿ ಭಾನುವಾರ ಕೆಲಸಕ್ಕೆ ಬರಬೇಡ ಎಂದಿದ್ದರು. ಯಾಕೆಂದರೆ, ಆ ಕೆಲಸದ ಹುಡುಗಿಗೆ ಆರೋಗ್ಯ ಅಷ್ಟು ಸರಿಯಾಗಿರಲಿಲ್ಲ. ಹೀಗಾಗಿ ಕೆಲಸಕ್ಕೆ ಬರಬೇಡ. ರೆಸ್ಟ್ ತೆಗೊ ಎಂದಿದ್ದೆ ಎಂದು ರೇಖಾ ಹೇಳಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಶೈನಿ ಮನೆಯ ಪಕ್ಕದ ಸುಮಾರು 20 ಮನೆಯವರೂ ಕೂಡಾ ಶೈನಿ ಉತ್ತಮ ಮನುಷ್ಯ ಎಂದು ಹೇಳಿದ್ದಾರೆ. ಅಲ್ಲದೆ, ಶೈನಿ ಮನೆಯ ಪಕ್ಕದ ಒಬ್ಬ ಮನೆಯವರು ಶೈನಿ ಮನೆಯಿಂದ ಭಾನುವಾ ಮಧ್ಯಾಹ್ನ ನರಳುವಿಕೆಯ ಶಬ್ದ ಬಂದಿದೆ ಎಂದು ಹೇಳಿಕೆ ಕೊಟ್ಟಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈಗ ಆ ಮನೆಯಾಕೆ, ನಾನು ಈವರೆಗೆ ಯಾವ ಮಾಧ್ಯಮಗಳಿಗೂ ಶೈನಿ ಮನೆಯಿಂದ ಅಂತಹ ಶಬ್ದ ಕೇಳಿದೆ ಎಂದು ಹೇಳಿಲ್ಲ. ಇದು ಸುಳ್ಳು ಎಂದೂ ಹೇಳಿದ್ದಾರೆ.
ಶೈನಿ ಇರುವ ಅಪಾರ್ಟ್‌ಮೆಂಟ್‌ನ ಖಜಾಂಚಿ ಸತೀಶ್ ಕಪೂರ್, ಶೈನಿ ಅವರನ್ನು ನನಗೆ ಚೆನ್ನಾಗಿ ನೋಡಿ ಪರಿಚಯವಿದೆ. ಅವರೊಬ್ಬ ಸಾಧ್ವಿ. ಅವರು ಎಷ್ಟೋ ಬಾರಿ ಸಂಜೆಯ ವೇಳೆ ತನ್ನ ಮಗುವಿನೊಂದಿಗೆ ಅಪಾರ್ಟ್‌ಮೆಂಟಿನ ಪಾರ್ಕಿನಲ್ಲಿ ಅಡ್ಡಾಡುತ್ತಿದ್ದರು ಎಂದು ಹೇಳಿದ್ದಾರೆ.
ಇದಲ್ಲದೆ, ಶೈನಿ ಪತ್ನಿ ಅನುಪಮ್ ಅಹುಜಾ, ಮಾಧ್ಯಮಗಳಲ್ಲಿ ಬರುತ್ತಿರುವುದೆಲ್ಲ ಸುಳ್ಳು. ಶೈನಿ ತಾನು ಲೈಂಗಿಕ ಸಂಪರ್ಕ ನಡೆಸಿದ್ದೇನೆ ಎಂದು ತಪ್ಪೊಪ್ಪಿಕೊಂಡಿರುವುದು ಸುಳ್ಳು. ಆತ ಅಂತಹ ಕೆಲಸ ಮಾಡಿಯೇ ಇಲ್ಲವಾದ್ದರಿಂದ ಹೇಗೆ ತಾನೇ ಆತ ಅಂತಹ ಹೇಳಿಕೆ ನೀಡುತ್ತಾನೆ? ನಾವು ನ್ಯಾಯಾಲಯದಲ್ಲಿ ನ್ಯಾಯ ಪಡೆದೇ ತೀರುತ್ತೇವೆ. ಶೈನಿಗೆ ಬಾಲಿವುಡ್ಡಿನಿಂದಲೂ ಸಂಪೂರ್ಣ ಸಹಮತವಿದೆ ಎಂದು ಹೇಳಿದ್ದಾರೆ.