ಸೋಲನ್ನೇ ಗೆಲುವಾಗಿ ಪರಿಗಣಿಸುವ ಬಾಲಿವುಡ್ ಹುಡುಗ ನಿಖಿಲ್ ಅಡ್ವಾನಿ ಬಗ್ಗೆ ನೀವೆಲ್ಲಾ ಕೇಳಿರಬಹುದು. ಇಷ್ಟಕ್ಕೂ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಸಹ ನಿರ್ದೇಶಕರಾಗಿ. ಕುಚ್ ಕುಚ್ ಹೋತಾ ಹೈ, ಕಭಿ ಖುಷಿ ಕಭಿ ಗಮ್ ಚಿತ್ರಗಳು ಸೂಪರ್ಹಿಟ್ ಆಗುತ್ತಲೇ ಇವರೂ ತಮ್ಮ ಬೇಡಿಕೆ ಹೆಚ್ಚಿಸಿಕೊಂಡರು. ಧರ್ಮ ಪ್ರೊಡಕ್ಷನ್ ಅಡಿಯಲ್ಲಿ ಇವರು ನಿರ್ದೇಶಿಸಿದ ಚಿತ್ರ ಕಲ್ ಹೋ ನಾ ಹೋ ಸೂಪರ್ ಹಿಟ್ ಆಗುತ್ತಲೇ ನಿಖಿಲ್ ಅವರ ಲಕ್ ಸಾಕಷ್ಟು ಎತ್ತರಕ್ಕೆ ಹೋಗಿತ್ತು. ಸ್ಟಾರ್ ನಿರ್ದೇಶಕರಲ್ಲಿ ಇವರೂ ಒಬ್ಬರು ಎನಿಸಿಕೊಂಡರು.
ಆದರೆ ಆ ಬಳಿಕ ಅವರು ಆಕ್ಷನ್ ಕಟ್ ಹೇಳಿದ ಚಿತ್ರಗಳಾವುದೂ ನಿರೀಕ್ಷಿಸಿದ ಯಶಸ್ಸು ಕಾಣಲಿಲ್ಲ. ದೊಡ್ಡ ಸ್ಟಾರ್ ನಟರ ದಂಡನ್ನೇ ಹಾಕಿಕೊಂಡು ತಯಾರಿಸಿದ ಚಿತ್ರ ಸಲಾಂ ಇ ಈಷ್ಕ್ ಎರಡು ವಾರಗಳ ಮೇಲೆ ಓಡಲಿಲ್ಲ. ಅಕ್ಷಯ್ ಕುಮಾರ್ ಓಡುವ ಕುದುರೆ ಎಂದೇ ಎನಿಸಿಕೊಂಡಿದ್ದ ಕಾಲದಲ್ಲಿ ಚಾಂದಿನಿ ಚೌಕ್ ಟು ಚೈನಾ ಹಾಗೂ ಪಾಟಿಯಾಲ ಹೌಸ್ ಎಂಬ ಎರಡು ಉತ್ತಮ ಚಿತ್ರಗಳನ್ನು ನೀಡಿದರು. ಆದಕ್ಕೂ ಪ್ರೇಕ್ಷಕ ಮಹಾಶಯ ಮನಸ್ಸು ತೋರಲಿಲ್ಲ. ಅಲ್ಲೂ ಗೆಲುವು ಕೈಕೊಟ್ಟಿತು ಎಂದು ಅವರು ಸುಮ್ಮನೆ ಕೂರಲಿಲ್ಲ.
ತೀರಾ ಇತ್ತೀಚೆಗೆ ಬಂದ ಡೀ-ಡೇ ಚಿತ್ರ ಕೂಡಾ ಬಾಲಿವುಡ್ನ ಥೀಮ್ ಪಾಯಿಂಟ್ ತೀರಾ ವಿಭಿನ್ನವಾಗಿತ್ತು. ಹಾಗಿದ್ದರೂ ಅದು ಬಾಕ್ಸಾಫೀಸಿನಲ್ಲಿ ಓಡಲಿಲ್ಲ. ಅರ್ಜುನ್ ರಾಂಪಾಲ್, ರಿಶಿ ಕಪೂರ್, ಇರ್ಫಾನ್ ಖಾನ್, ಹ್ಯೂಮಾ ಖುರೇಶಿ, ಶ್ರುತಿ ಹಾಸನ್ ಇದ್ದೂ ಚಿತ್ರ ಯಶಸ್ವಿ ಎನಿಸಿಕೊಳ್ಳಲಿಲ್ಲ. ಇದಕ್ಕೆ ಅವರು ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದೇನು ಗೊತ್ತೇ. ನನ್ನ ಯಾವುದಾದರೆ ಚಿತ್ರ ಸೋತರೆ ಅದಕ್ಕೆ ಏನು ಮಾಡುತ್ತೇನೆ ಗೊತ್ತೇ? ಇನ್ನೊಂದು ಚಿತ್ರ ತಯಾರಿಸುತ್ತೇನೆ. ನಿಜವಾದ ಸಾಹಸಿಗನ ಛಲ ಎಂದರೆ ಇದೇ ಅಲ್ಲವೇ.