ಧೈರ್ಯಲಕ್ಷ್ಮೀ, ಸಾಹಸ ಲಕ್ಷ್ಮೀ ಎಂದೆಲ್ಲ ಕರೆಸಿಕೊಂಡಿರುವ ಗುಳಿಕೆನ್ನೆಗಳ ಲಿರಿಲ್ ಹುಡುಗಿ, ಮೊಹಾಲಿ ಟಿ20 ಐಪಿಎಲ್ ಕ್ರಿಕೆಟ್ ತಂಡದ ಒಡತಿ, ಬಾಲಿವುಡ್ ಬೆಡಗಿ ಪ್ರೀತಿ ಝಿಂಟಾ, ಮಂಗಳವಾರ ತನ್ನ ತಂಡದ ಅನಾವರಣದ ವೇಳೆ ಗಾಯಗೊಂಡರಂತೆ.
ತನ್ನ ವ್ಯಕ್ತಿತ್ವದಿಂದಾಗಿ ಬಾಲಿವುಡ್ ನಟಿಯರ ಸಾಲಿನಲ್ಲಿ ಭಿನ್ನಾಗಿ ನಿಲ್ಲುವ ಈ ತಾರೆಗೆ ತನ್ನ ಕಣ್ಣಿಗೆ ಹೇಗೆ ಗಾಯವಾಯಿತೆಂದು ಗೊತ್ತಾಗಿಲ್ಲ. ಸಮಾರಂಭದ ವೇಳೆಗೆ ಮೊಣಕೈಯೊಂದು ತಗುಲಿತು, ಆದರೆ ಹೇಗೆಂದು ಗೋತ್ತೇ ಅಗಲಿಲ್ಲ ಅಂತ ಹೇಳಿಕೊಂಡಿದ್ದಾರೆ.
ಕಣ್ಣಿಗೆ ಗಾಯಗೊಂಡು ಒಕ್ಕಣ್ಣಿಯಂತಾದ ಅವರು ಕಾರ್ಯಕ್ರಮದುದ್ದಕ್ಕೂ ಕಪ್ಪುಕನ್ನಡಕ ಧರಿಸಿಯೇ ಇರಬೇಕಾಯಿತಂತೆ. ಕಾರ್ಯಕ್ರಮದ ಬಳಿಕ ಸಂಜೆಯಿಡೀ ಕಣ್ಣಿಗೆ ಐಸ್ ಪ್ಯಾಕ್‌ಗಳನ್ನು ಇರಿಸುವ ಮೂಲಕ ಕಣ್ಣಿನ ಆರೈಕೆಯಲ್ಲಿ ಕಳೆದರಂತೆ.
ಇಂತಹ ಕಾರ್ಯಕ್ರಮಗಳಲ್ಲಿ ಇವೆಲ್ಲ ಮಾಮಾಲಿ ಎಂಬುದಾಗಿ ಹೇಳುತ್ತಾರೆ ತನ್ನ ಕಣ್ಣಿನ ಗಾಯವನ್ನು ದೊಡ್ಡ ವಿಷಯವಾಗಿಸಲು ಇಚ್ಛಿಸದ ಪ್ರೀತಿ. ಇಂತವುಗಳಿಗಾಗಿಯೇ ಪ್ರೀತಿಯ ಮೇಲೆ ಹೆಚ್ಚುಪ್ರೀತಿ ಹುಟ್ಟುವುದು!