ಕತ್ರಿನಾ ಐದು ಲಕ್ಷ ರೂ. ಹಂಚಿ ಬಿಟ್ಟಳಂತೆ!
ಕತ್ರಿನಾ ಕೈಫ್ ಎಂಬ ಸುಂದರಿ ತನ್ನ ಬಾಲಿವುಡ್‌ನ ಯಶಸ್ವಿ ದಿನಗಳನ್ನು ತುಂಬ ಎಂಜಾಯ್ ಮಾಡುತ್ತಿದ್ದಾಳಂತೆ. ತಾನು ಗಳಿಸಿದ ಯಶಸ್ಸಿನ ಜತೆಗೆ ಹಣವನ್ನು ತನಗಾಗಿ ಖರ್ಚು ಮಾಡುವುದು ಸಹಜವಾದರೂ ಇತ್ತೀಚೆಗೆ ಮಾತ್ರ ಕತ್ರಿನಾ ತುಂಬಾ ಧಾರಾಳಿಯಾಗಿಬಿಟ್ಟಳಂತೆ. ರಾಜ್ ಕುಮಾರ್ ಸಂತೋಷಿ ಅವರ 'ಅಜಬ್ ಪ್ರೇಮ್ ಕೀ ಗಜಬ್ ಕಹಾನಿ' ಚಿತ್ರದ ಶೂಟಿಂಗ್‌ನಲ್ಲಿ ಫಿಲಂ ಸಿಟಿಯಲ್ಲಿ ಐದು ಲಕ್ಷ ರೂಪಾಯಿಗಳನ್ನು ತನ್ನ ಯುನಿಟ್ ಸದಸ್ಯರಿಗೆ ಹಂಚಿ ಬಿಟ್ಟಳಂತೆ!ತುಂಬ ಖುಷಿಯ ಮೂಡ್‌ನಲ್ಲಿದ್ದ ಕತ್ರಿನಾ, ತನ್ನ ಶೂಟಿಂಗ್ ಸಮಯದಲ್ಲಿ ಸೀದಾ ತನ್ನ ವ್ಯಾನ್ ಹತ್ತಿ ಎಲ್ಲಿಗೋ ಹೋದಳಂತೆ. ಬರುವಾಗ ಕೈ ತುಂಬ ನೋಟಿನ ಕಂತೆಗಳನ್ನು ತಂದಳಂತೆ. ಆ ಹಣದ ಕಂತೆಯಲ್ಲಿ ಐದು ಲಕ್ಷ ರೂಪಾಯಿಗಳಿದ್ದವಂತೆ.ಶೂಟಿಂಗ್ ಯುನಿಟ್‌ನಲ್ಲಿದ್ದ ಪ್ರತಿಯೊಬ್ಬರಿಗೂ ತನ್ನ ಜತೆ ಸಹಕರಿಸಿದ್ದಕ್ಕೆ ಧನ್ಯವಾದ ಹೇಳುತ್ತಾ, ತನ್ನ ಖುಷಿಯನ್ನು ಹಂಚಿಕೊಳ್ಳಲು ಅವರಿಗೆ ಹಣವನ್ನೂ ನೀಡಿದಳಂತೆ. ಪ್ರತಿಯೊಬ್ಬರ ಹೆಸರನ್ನೂ ಕೂಗಿ ಕರೆದು ಅವರ ಕೈಕುಲುಕಿ ತಾನೇ ಸ್ವತಃ ಅವರ ಸಹಾಯವನ್ನು ಸ್ಮರಿಸಿ ಅವರಿಗೆ ಧನ ಸಹಾಯವನ್ನೂ ಮಾಡಿದ್ದು ಈಗ ಕತ್ರಿನಾ ಬಗ್ಗೆ ಎಲ್ಲರಿಗೂ ಆಶ್ಚರ್ಯ ಹುಟ್ಟಿಸಿದೆ. ಅಂದಹಾಗೆ ಸೆಟ್‌ನಲ್ಲಿ 300 ಮಂದಿ ಇದ್ದರಂತೆ.ಸ್ವತಃ ರಾಜ್ ಕುಮಾರ್ ಸಂತೋಷಿ ಅವರಿಗೇ ಕತ್ರಿನಾಳ ಈ ವರ್ತನೆ ಆಶ್ಚರ್ಯ ಹುಟ್ಟಿಸಿತಂತೆ. ಯಾರೂ ಈ ಹಿಂದೆ ಹೀಗೆ ಮಾಡಿಲ್ಲದಿರುವುದೇ ಅವರ ಆಶ್ಚರ್ಯಕ್ಕೆ ಕಾರಣ.ಅಲ್ಲದೆ, ಕತ್ರಿನಾ ಹೀಗೆ ತನ್ನ ಯುನಿಟ್ ಸದಸ್ಯರಿಗೆ ಹಣ ನೀಡಿದ್ದಕ್ಕೆ ಪ್ರಚಾರ ಪಡೆಯುವುದು ಆಕೆಗೆ ಇಷ್ಟವಿಲ್ಲವಂತೆ. ಸಂತೋಷಿ ಅವರು ಹೇಳುವಂತೆ, ''ಆಕೆ ಐದು ಲಕ್ಷ ರೂಪಾಯಿಗಳನ್ನು ತಂದಿದ್ದಳು. ಪ್ರತಿಯೊಬ್ಬರಿಗೂ ನೀಡಿದಳು. ಆದರೆ ಆಕೆಯ ಬಳಿ ಈ ವಿಚಾರ ಮಾತನಾಡಿದರೆ ಅಕೆ ಸಂಕೋಚ ಪಡುತ್ತಾಳೆ. ಹಣ ಹಂಚಿ ಹೆಸರು ಪಡೆಯುವುದು ಆಕೆಗೆ ಇಷ್ಟವಿಲ್ಲ. ಸೆಟ್‌ನಲ್ಲಿದ್ದ ಪ್ರತಿಯೊಬ್ಬ ಸಣ್ಣ ಕೆಲಸಗಾರನನ್ನೂ ಕರೆದು ಆಕೆ ಪ್ರೀತಿಯಿಂದ ಆತನ ಶ್ರಮಕ್ಕೆ ಪ್ರತಿಫಲದ ರೂಪದಲ್ಲಿ ನೀಡಿದಳು'' ಎನ್ನುತ್ತಾರೆ.''
ಯಾವಾಗಲೂ ಚಲನಚಿತ್ರದ ಶೂಟಿಂಗ್ ಸಮಯದಲ್ಲಿ ಸ್ಕ್ರೀನ್ ಹಿಂದೆ ಕೆಲಸ ಮಾಡುವ ನೂರಾರು ಜನರಿಗೆ ಯಾವುದೇ ಪ್ರತಿಫಲ ಸಿಗುವುದಿಲ್ಲ. ಆದರೆ, ಇದು ಯಾರಿಂದಲೂ ಗುರುತಿಸಲ್ಪಡುವುದಿಲ್ಲ. ಯಾವ ಸ್ಟಾರ್‌ಗಳೂ ಹೀಗೆ ಧನ್ಯವಾದ ಹೇಳುವುದಿಲ್ಲ. ಆದರೆ ಕತ್ರಿನಾಗೆ ಮಾಡಬೇಕೆನಿಸಿತು. ಆಕೆ ಮಾಡಿದಳು'' ಎಂದು ಸಂತೋಷಿ ಹೆಮ್ಮೆಯಿಂದ ಹೇಳುತ್ತಾರೆ.ಆದರೆ ಕುಹಕಿಗಳು ಮಾತ್ರ ಹಿಂದಿನಿಂದ, ಕತ್ರಿನಾ ಈಗಾಗಲೇ ಈ ರೀತಿ ಮಾಡಿ ಪ್ರಚಾರ ಪಡೆದಿದ್ದಾಳೆ. ಆಕೆಗೆ ತನ್ನ ದಾನಗುಣವನ್ನು ಎತ್ತಿ ತೋರಿಸಬೇಕಿತ್ತು. ಮಾಡಿದಳು. ತಕ್ಕ ಪ್ರಚಾರವನ್ನೂ ಪಡೆದಳು ಎಂದು ನಗೆಯಾಡುತ್ತಿದ್ದಾರಂತೆ. ಏನೇ ಇರಲಿ, ಪ್ರತಿಯೊಬ್ಬ ಚಿತ್ರದ ಹಿಂದೆ ಶ್ರಮವಹಿಸಿ ಕೆಲಸ ಮಾಡಿದ ಪ್ರತಿಯೊಬ್ಬನಿಗೂ ಧನ್ಯವಾದ ಹೇಳಿ ಅವರ ಬೆನ್ನುತಟ್ಟಿದ ಕತ್ರಿನಾ ಬೆನ್ನನ್ನೂ ತಟ್ಟಲೇ ಬೇಕು ಬಿಡಿ.