ನಟಿಸಿದ್ದು ಒಂದೇ ಚಿತ್ರದಲ್ಲಿ. ಆದರೆ, ಹೆಸರು, ಬೆಲೆ ಗಗನದೆತ್ತರ! ಸದ್ಯದ ಪರಿಸ್ಥಿತಿಯಲ್ಲಿ, ಅತಿ ಹೆಚ್ಚು ಸಂಪಾದಿಸುತ್ತಿರುವ ಭಾರತೀಯ ನಟಿ ಯಾರು ಎಂದರೆ ಉತ್ತರ ಅದೇ ನಮ್ಮ 'ಸ್ಲಂಬಾಲೆ' ಫ್ರೀದಾ ಪಿಂಟೋ!ಆಶ್ಚರ್ಯವಾದರೂ ಸತ್ಯ. 'ಸ್ಲಂಡಾಗ್' ಆಸ್ಕರ್ ಗೆದ್ದಿದ್ದೇ ಗೆದ್ದಿದ್ದು. ಚಿತ್ರವೊಂದಕ್ಕೆ ಅತಿ ಹೆಚ್ಚು ಸಂಭಾವನೆ ಕೇಳುವ ನಟಿಯೆಂದರೆ ಈಗ ಫ್ರೀದಾ ಪಿಂಟೋ. ಹಾಗಾಗಿ ಈ 'ಸ್ಲಂಬಾಲೆ'ಯ ಅಲೆಯಲ್ಲಿ ಕರುನಾಡ ಸುಂದರಿ ಐಶ್ ಬೇಬಿ, ಸೆಕ್ಸೀ ಕತ್ರೀನಾ, ಕರೀನಾ ಎಲ್ಲರೂ ಕೊಚ್ಚಿ ಹೋಗಿದ್ದಾರೆ. ಬಾಲಿವುಡ್‌ನಲ್ಲಿ ಸದ್ಯಕ್ಕೆ ಐಶ್, ಕತ್ರೀನಾ, ಕರೀನಾರಿಗೆ ಉತ್ತಮ ಬೇಡಿಕೆಯಿದ್ದರೂ, ಸಂಭಾವನೆ ವಿಷಯದಲ್ಲಿ ಮಾತ್ರ ಭಾರತದ ಎಲ್ಲ ಬೆಡಗಿಯರಿಗಿಂತಲೂ ಫ್ರೀದಾ ಪಿಂಟೋ ಮುಂದು.ಬಾಕ್ಸಾಫೀಸಿನಲ್ಲಿ 270 ಮಿಲಿಯನ್‌ಗಳಿಗಿಂತಲೂ ಹೆಚ್ಚು ಸಂಪಾದಿಸಿದ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರ ಅದೇನು ಮಾಯೆ ಮಾಡಿದೆಯೋ?! ತನ್ನ ಒಂದು ಚಿತ್ರದಿಂದಲೇ ಹಾಲಿವುಡ್‌ನ ಖ್ಯಾತ ನಿರ್ದೇಶಕರಾದ ವೂಡಿ ಅಲೆನ್, ಜೂಲಿಯನ್ ಸ್ನಾಬೆಲ್‌ರ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸುವ ಭಾಗ್ಯ ಮಾತ್ರ ಒಲಿದಿದ್ದು ಫ್ರೀದಾಗೆ. ಫ್ರೀದಾ ಸದ್ಯ ತನ್ನ ಇಸ್ರೇಲ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾಳೆ. ಇತ್ತೀಚೆಗಿನ ವರದಿಗಳ ಪ್ರಕಾರ, ಆಕೆ ಈ ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆ ಎರಡು ಮಿಲಿಯನ್ ಪೌಂಡ್. ಅಂದರೆ ಸುಮಾರು 13ರಿಂದ 15 ಕೋಟಿ ರೂಪಾಯಿಗಳು!ಅಂತಾರಾಷ್ಟ್ರೀಯ ವಲಯದಲ್ಲಿ ಕಣ್ಣು ಮುಚ್ಚಿ ತೆರೆಯವಷ್ಟರಲ್ಲಿ, ರಾತ್ರಿ ಬೆಳಗಾಗುವುದರೊಳಗೆ ಎತ್ತರಕ್ಕೇರಿದ ಈ ಫ್ರೀದಾ, ಬಾಲಿವುಡ್ ನಟಿಯರು ಈವರೆಗೆ ಪಡೆಯದ ಅವಕಾಶಗಳನ್ನು ಪಡೆದಳು. ಫ್ರೀದಾಳ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿರ್ಬನ್ ದಾಸ್ ಹೇಳುವ ಪ್ರಕಾರ, ಫ್ರೀದಾಳನ್ನು ಐಶ್ವರ್ಯಾ ರೈಗಾಗಲೀ ಅಥವಾ ಯಾವುದೇ ಭಾರತೀಯ ನಟಿಗೆ ಹೋಲಿಸುವುದು ಸಾಧ್ಯವಿಲ್ಲ. ಯಾಕೆಂದರೆ ಭಾರತೀಯ ಬೆಡಗಿ ಅಂತಾರಾಷ್ಟ್ರೀಯ ಚಿತ್ರಗಳಲ್ಲಿ ಎಂದು ಆಕೆಯನ್ನು ನಾವು ಬ್ರ್ಯಾಂಡ್ ಮಾಡುವುದಿಲ್ಲ. ಫ್ರೀದಾ ಒಬ್ಬ ಪಕ್ಕಾ ಗ್ಲೋಬಲ್ ಬೆಡಗಿ ಎನ್ನುತ್ತಾರೆ.
'ಸ್ಲಂಡಾಗ್' ಅದ್ಯಾವ ಪರಿ ಎಲ್ಲರನ್ನು ಬೆಚ್ಚಿ ಬೀಳಿಸಿದೆಯೆದರೆ, ಬಾಲಿವುಡ್ ನಟೀಮಣಿಯರು ಮಾತ್ರವಲ್ಲ, ಹಾಲಿವುಡ್ ನಟಿಯರೂ ಈಕೆಯ ದಿಢೀರ್ ಯಶಸ್ಸಿಗೆ ಮೂಗಿನ ಮೇಲೆ ಬೆರಳಿಟ್ಟು ಮೈ ಪರಚಿಕೊಳ್ಳುತ್ತಿದ್ದಾರಂತೆ. 'ಎಸ್ಟೀ ಲಾಡರ್' ಅಂತಾರಾಷ್ಟ್ರೀಯ ಬ್ರ್ಯಾಂಡ್ ರಾಯಭಾರಿಯಾಗಿರುವ ಫ್ರೀದಾ ಇದಕ್ಕಾಗಿ ಒಂದು ವರ್ಷಕ್ಕೆ ಒಪ್ಪಂದದ ಸಹಿ ಹಾಕಿದ್ದು ಅದಕ್ಕಾಗಿ ಒಂದು ಮಿಲಿಯನ್ ಪೌಂಡ್ ಸಂಭಾವನೆ ಪಡೆದಿದ್ದಾಳೆ. ಇದೂ ಕೂಡಾ ಹಾಲಿವುಡ್ ನಟಿಯರ ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟಲು ಪ್ರಮುಖ ಕಾರಣ ಎಂಬುದೂ ಅಷ್ಟೇ ನಿಜ.
ಅಂದಹಾಗೆ, ಫ್ರೀದಾ ಸಂಭಾವನೆ ಚಿತ್ರವೊಂದಕ್ಕೆ 13ರಿಂದ 15 ಕೋಟಿ. ಸೈಫ್ ಅಲಿ ಖಾನ್ ಗೆಳತಿ ಕರೀನಾ ಕಪೂರ್ ಚಿತ್ರವೊಂದಕ್ಕೆ 7 ಕೋಟಿ ಸಂಭಾವನೆ ಪಡೆದರೆ, ವಿಶ್ವಸುಂದರಿ ಐಶ್ವರ್ಯಾ ರೈ ಚಿತ್ರವೊಂದರಲ್ಲಿ 6ರಿಂದ ಏಳು ಕೋಟಿ ರೂಪಾಯಿಗಳನ್ನು ಪಡೆಯುತ್ತಾಳೆ. ಆದರೆ ಐಶ್ ಸದ್ಯ ರಜನೀಕಾಂತ್ ಜತೆಗೆ ನಟಿಸುತ್ತಿರುವ ಬಹುನಿರೀಕ್ಷೆಯ 'ರಾವಣ' ಚಿತ್ರದಲ್ಲಿ ಕೇವಲ ನಾಲ್ಕು ಕೋಟಿ ರೂಪಾಯಿಗಳಿಗೆ ಒಪ್ಪಿಕೊಂಡಿದ್ದಾಳಂತೆ. ಸೆಕ್ಸೀ ಕತ್ರೀನಾ ಕೈಫ್ ನಿಧಾನವಾಗಿ ಯಶಸ್ಸಿನ ಏಣಿಯೇರುತ್ತಿದ್ದು, ತನ್ನ ಚಿತ್ರವೊಂದಕ್ಕೆ 6 ಕೋಟಿ ಪಡೆಯುತ್ತಾಳಂತೆ.
''ಎಲ್ಲ ಮಾಯೆಯೋ ಶಿವನೇ.. ಎಲ್ಲ ಮಾಯೆಯೋ..'' ಹೇಳದೆ ವಿಧಿಯಿಲ್ಲ. ''ಯಾರಿಗುಂಟು ಯಾರಿಗಿಲ್ಲ.. ಬಾಳೆಲ್ಲ...'' ಅನ್ನುತ್ತಾ ರಾತ್ರಿ ತಂಬೂರಿ ಮಿಡಿಯಬೇಕಷ್ಟೆ ಬಾಲಿವುಡ್ ಬೆಡಗಿಯರು.