ಇದು ಸೀಕ್ರೆಟ್ ಲೈಫ್ ಆಫ್ ಕರೀನಾ!!!
ಬಾಲಿವುಡ್ ಚಾಕೋಲೇಟ್ ಹೀರೋ ಜತೆಗೆ ಪ್ರೇಮಿಸಿ ಕೈಕೊಟ್ಟು ಸೈಫ್ ಜತೆಗೆ ಬಿಂದಾಸ್ ಆಗಿರುವ ಬಾಲಿವುಡ್ ರಾಣಿಯಾಗಿ ಮೆರೆಯುತ್ತಿರುವ ಕರೀನಾ ಕಪೂರ್ ಪ್ರೇಮಕಥೆ ಯಾರಿಗೆ ಗೊತ್ತಿಲ್ಲ ಹೇಳಿ. ಇದೀಗ ಆ ಪ್ರೇಮಕಥೆ ಇನ್ನಷ್ಟು ಅಧಿಕೃತವಾಗುತ್ತಿದೆ. ಶಾಹಿದ್, ಸೈಫ್ ಹಾಗೂ ಕರೀನಾ ನಡುವಿನ ತ್ರಿಕೋನ ಪ್ರೇಮಕಥೆ ಹಿಂದಿ ಸಿನಿಮಾ ರೂಪದಲ್ಲಿ ಸೆಟ್ಟೇರುತ್ತಿದೆ. ಚಿತ್ರಕ್ಕೆ ತುಂಬ ಆಕರ್ಷಕ ಹೆಸರೂ ನೀಡಲಾಗಿದೆ. 'ದಿ ಸೀಕ್ರೆಟ್ ಲೈಫ್ ಆಫ್ ಕರೀನಾ'!!!'
ದಿ ಸೀಕ್ರೆಟ್ ಲೈಫ್ ಆಫ್ ಕರೀನಾ' ಚಿತ್ರ ನಿಜಕ್ಕೂ ಕರೀನಾರ ಜೀವನ ಕುರಿತ ಚಿತ್ರ. ಅದರಲ್ಲೂ ಆಕೆಯ ತ್ರಿಕೋನ ಪ್ರೇಮಕಥೆಯಂತೆ. ಚಿತ್ರದ ಬಜೆಟ್ ಬರೋಬ್ಬರಿ 20 ಕೋಟಿ. ಮಾಧ್ಯಮಗಳಲ್ಲಿ ವರದಿಯಾದ ಕರೀನಾ ಕಪೂರಳ ವರ್ಣರಂಜಿತ ಪ್ರೇಮಕಥೆಯೇ ಚಿತ್ರದ ಕಥೆಗೆ ಸ್ಪೂರ್ತಿಯಂತೆ. ಇದರಲ್ಲಿ, ಕೆಲವೇ ವರ್ಷಗಳ ಮೊದಲು ಭಾರೀ ಸುದ್ದಿಯಾದ ಮುಂಬೈನಿಂದ ಕಾಶ್ಮೀರ ಕನ್ಯಾಕುಮಾರಿವರೆಗೂ ಮೊಬೈಲುಗಳಿಂದ ಮೊಬೈಲುಗಳಿಗೆ ಹರಿದಾಡಿದ ಕರೀನಾ- ಶಾಹಿದ್ ಕಪೂರ್‌ರ ರಹಸ್ಯ ಕಿಸ್ಸಿಂಗ್ ಎಂಎಂಎಸ್ ಕೂಡಾ ಇದೆಯಂತೆ!!! ಅಷ್ಟೇ ಅಲ್ಲ. ಸೈಫ್ ತಂಗಿ ಸೋಹಾ ಆಲಿಖಾನ್ ಕೆನ್ನೆಗೆ ಛಟೀರೆಂದು ಬಾರಿಸಿದ ಕರೀನಾಳ ದಿವ್ಯದರ್ಶನವೂ ಇದೆಯಂತೆ..!ಆದರೂ ಚಿತ್ರ ನಿರ್ಮಾಪಕರು ವಿವಾದದಿಂದ ಪಾರಾಗಲು ಚಿತ್ರದ ಮೂವರ ಹೆಸರನ್ನು ಕೊಚವೇ ಬದಲಾಯಿಸಿದ್ದಾರೆ. ಚಿತ್ರದಲ್ಲಿ ಕರೀನಾ ಹೆಸರು ಕರಿನಾ, ಸೈಫ್ ಹೆಸರು ಸೈಫೀ ಹಾಗೂ ಶಾಹಿದ್ ಕಪೂರ್ ಹೆಸರು ಶಹೀದ್ ಆಗಿದೆ. ಅಲ್ಲದೆ ಸೈಫೀ ಪಾತ್ರದಲ್ಲಿ ಸೈಫ್ ಅಲಿ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರ ವ್ಯಕ್ತಿತ್ವವನ್ನೂ ಬೆರೆಸಲಾಗಿದೆಯಂತೆ.
ಚಿತ್ರದ ಪಾತ್ರವರ್ಗದ ಆಯ್ಕೆ ಇನ್ನೂ ನಡೆದಿಲ್ಲ. ಮುಂದಿನ ತಿಂಗಳಿಂದ ಶೂಟಿಂಗ್ ನಡೆಯಲಿದೆ. ಶ್ರದ್ಧಾ ಶರ್ಮಾರನ್ನು ಕರಿನಾ ಪಾತ್ರಕ್ಕೆ ಸಂಪರ್ಕಿಸಿದರೂ, ಆಕೆ ಈ ಪಾತ್ರಕ್ಕೆ ಒಪ್ಪಿಲ್ಲ. ನಾನು ಕರೀನಾ ಪಾತ್ರ ಮಾಡಿ ಆಕೆಯ ದ್ವೇಷ ಕಟ್ಟಿಕೊಳ್ಳಲು ತಯಾರಿಲ್ಲ ಎಂದಿದ್ದಾರಂತೆ.ಈ ಎಲ್ಲ ಸುದ್ದಿಗಳಿಗೆ ಸಲ್ಮಾನ್ ಖಾನ್‌ರ ಆಪ್ತ ಕಾರ್ಯದರ್ಶಿ ಹೀಗೆ ಮಾಡಿದ್ದು ಸಲ್ಮಾನ್ ಹೆಸರಿನಲ್ಲಿ ಪಬ್ಲಿಸಿಟಿ ಪಡೆಯಲು ಎಂದು ದೂರಿದ್ದಾರೆ. ಅಷ್ಟೇ ಅಲ್ಲ, ಇದು ಅಪಾಯಕ್ಕೆ ತಾವೇ ಆಹ್ವಾನ ಕೊಟ್ಟಂತೆ ಎಂದಿದ್ದಾರೆ. ಶಾಹಿದ್ ಕಪೂರ್ ಅವರ ಆಪ್ತ ಕಾರ್ಯದರ್ಶಿ ಇದಕ್ಕೆ ಏನೂ ಪ್ರತಿಕ್ರಿಯಿಸಿಲ್ಲ. ಜತೆಗೆ ಈ ವಾರ್ತೆ ಇನ್ನೂ ಶಾಹಿದ್‌ಗೆ ತಲುಪಿಲ್ಲ ಎಂದಿದ್ದಾರೆ. ಅಲ್ಲದೆ, ಇದಕ್ಕೆ ತಾವು ತಲೆಕೆಡಿಸಿಕೊಳ್ಳುವುದಿಲ್ಲ. ಇದೆಲ್ಲ ಕೇವಲ ಪಬ್ಲಿಸಿಟಿ ಗಿಮಿಕ್ಕು ಎಂದಿದ್ದಾರೆ.ಸಾರ್ವಜನಿಕವಾಗಿಯೇ ತಮ್ಮಿಬ್ಬರ ನಡುವಿನ ಪ್ರೀತಿಯನ್ನು ಧಾರಾಳವಾಗಿ ಪ್ರದರ್ಶನ ಮಾಡಿಕೊಂಡಿದ್ದ ಶಾಹಿದ್ ಹಾಗೂ ಕರೀನಾ ನಂತರ ಬೇರೆಬೇರೆಯಾದುದು ಹಳೇ ಕಥೆ. ಆದರೆ ಶಾಹಿದ್‌ಗೆ ಕೊಕ್ ಕೊಟ್ಟಿದ್ದಾದರೂ ಯಾಕೆ ಎಂದರೆ ಉತ್ತರ ಸೈಫ್ ಎಂಬುದು ಅಲ್ಲೇ ಸಿದ್ಧವಾಗುತ್ತದೆ. ಶಾಹಿದ್ ಜತೆಗಿದ್ದಾಗಲೇ ಕರೀನಾ ಸೈಫ್ ಪ್ರೇಮಪಾಶದಲ್ಲಿ ಬಿದ್ದಳು. ಹೀಗಾಗಿ ಶಾಹಿದ್‌ಗೆ ಕೈಕೊಟ್ಟಳು ಎಂಬ ವದಂತಿಯೂ ಇದ್ದರೂ, ಇವರಿಬ್ಬರ ಬ್ರೇಕ್‌ಅಪ್ ಬಗ್ಗೆ ನಿಜವಾದ ಕಾರಣಗಳು ಹೊರಬಿದ್ದಿಲ್ಲ. ಕರೀನಾ ಎಂಬ ಸುಂದರಿ ತನ್ನ ಜೀವನದಿಂದ ಹೋದ ಮೇಲೆ ಶಾಹಿದ್ ಜತೆಗೆ ಕ್ರೀಡಾ ತಾರೆ ಸಾನಿಯಾರಿಂದ ಹಿಡಿದು ಅಮೃತಾರಾವ್, ವಿದ್ಯಾಬಾಲನ್, ಪ್ರಿಯಾಂಕಾ ಛೋಪ್ರಾವರೆಗೂ ಗಾಸಿಪ್ ಮೆತ್ತಿಕೊಂಡಿತ್ತು. ಆದರೆ ಶಾಹಿದ್ ಇವ್ಯಾವ ಸಂಬಂಧಗಳನ್ನು ಅಧಿಕೃತಗೊಳಿಸಿರಲಿಲ್ಲ. ಆದರೂ ಪ್ರಿಯಾಂಕಾ ಜತೆಗಿನ ಅಫೇರ್ ಸ್ವಲ್ಪ ಲಯ ಪಡೆದಂತೆ ಕಾಣುತ್ತಿದೆ.ಈ ಎಲ್ಲ ಸುದ್ದಿಗಳಿಗೆ ಸೈಫ್ ಮಾತ್ರ ತುಂಬ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಕರೀನಾ ಮಾತ್ರ ಈ ಬಗ್ಗೆ ಚಕಾರವೆತ್ತದಿದ್ದರೂ, ಸೈಫ್ ಹಿಗ್ಗಾಮುಗ್ಗವಾಗಿ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ಕೇಳಿ ನನಗೆ ಸ್ವಲ್ಪ ಅಪ್‌ಸೆಟ್ ಆಗಿದೆ. ಅಲ್ಲದೆ ಗಾಬರಿಯ ಜತೆಗೆ ಸ್ವಲ್ಪ ತಮಾಷೆಯ ಸಂಗತಿ ಅಂತಲೂ ಅನಿಸಿದೆ. ನನ್ನ ಪಾತ್ರವನ್ನು ಸೈಫೀ ಎಂದು ನಾಮಕರಣ ಮಾಡಿದ್ದು ಮಾತ್ರ ನನಗೆ ಇನ್ನೂ ಬೇಸರವಾಗಿದೆ. ಸೈಫೀ ಅಂತ ಮಾಡುವ ಬದಲು ಸಮೀರ್ ಅಥವಾ ಇನ್ಯಾವುದೋ ಹೆಸರಿಡಬಹುದಿತ್ತು ನನ್ನ ಪಾತ್ರಕ್ಕೆ ಎಂದಿದ್ದಾರೆ.ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ, ಇದು ಕರೀನಾ ಮಟ್ಟಿಗೆ ಆಕೆಯನ್ನು ದುರ್ಬಳಕೆ ಮಾಡಿಕೊಂಡಂತೆ. ಆಕೆಯ ಹೆಸರಿನಲ್ಲಿ ಹೆಸರು ಪಡೆಯುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹೊರದೇಶಗಳಲ್ಲಿ ಸೆಲೆಬ್ರಿಟಿಗಳ ಲವ್ ಲೈಫ್ ಬಗ್ಗೆ ಹೀಗೆ ಚಿತ್ರ ಮಾಡುವುದು ಸಾಮಾನ್ಯ ನಿಜ. ಆದರೆ ಇದು ಭಾರತ. ನಮಗೆ ನಮ್ಮದೇ ಆದ ಸಂಸ್ಕೃತಿಯ ಚೌಕಟ್ಟಿದೆ. ಅಲ್ಲದೆ ನಾನು ಇಂಟರ್‌ನೆಟ್‌ನಲ್ಲಿ ಓದಿಕೊಂಡ ಪ್ರಕಾರ, ಈ ಚಿತ್ರದ ಮುಖ್ಯ ಪಾತ್ರಧಾರಿ ವೇಶ್ಯೆಯಂತೆ. ಇಂಥದ್ದೆಲ್ಲ ತಮಾಷೆ ಸಂಗತಿಗಳಲ್ಲ. ಹಾಗಾಗಿ ಈ ವಿಷಯ ಅರ್ಧ ತಮಾಷೆಯೆನಿಸಿದರೆ ಇನ್ನರ್ಧ ಜಿಗುಪ್ಸೆ, ಬೇಸರ ತರಿಸಿದೆ ಎಂದು ಸೈಫ್ ಪ್ರತಿಕ್ರಿಯೆ ನೀಡಿದ್ದಾರೆ. ಅಂತೂ, ಈ ಸುದ್ದಿ ಯಾವ್ಯಾವ ತಿರುವು ಪಡೆಯುತ್ತದೋ ಕಾಯಬೇಕು.