ಆಹಾ, ಅಕ್ಷಯ್ ಚುಂಬನ ಅದ್ಭುತ ಎಂದ ಡೆನ್ಸಿ!!
ಬಾಲಿವುಡ್ಡಿನಲ್ಲಿ ತುಟಿಗೆ ತುಟಿ ಸೇರಿಸಿ ಚುಂಬಿಸುವ ಸಂಸ್ಕೃತಿಯನ್ನೇ ಹುಟ್ಟುಹಾಕಿದ 'ಕಿಸ್ಸರ್ ಬಾಯ್' ನಾಮಾಂಕಿತ ಇಮ್ರಾನ್ ಹಶ್ಮಿ ಹೆಸರು ಮೂಲೆ ಸೇರುವ ಎಲ್ಲ ಸಂದೇಹಗಳು ನಿಚ್ಛಳವಾಗುತ್ತಿದೆ. ಕಾರಣ, ಈಗ ಆ ಪಟ್ಟಕ್ಕೆ ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಸೇರುವ ಲಕ್ಷಣಗಳೂ ಹೆಚ್ಚಾಗಿವೆ.ಮೊನ್ನೆ ಮೊನ್ನೆ ಬಿಡುಗಡೆಯಾದ ಕಂಭಕ್ತ್ ಇಶ್ಕ್ ಎಂಬ ಮಸಾಲೆ ಚಿತ್ರದಲ್ಲಿ ಹಾಲಿವುಡ್ ನಟಿ ಡೆನ್ಸಿ ರಿಚರ್ಡ್ಸ್ ಅಕ್ಷಯ್ ಕುಮಾರ್ ಜತೆಗೆ ತುಟಿಗೆ ತುಟಿ ಸೇರಿಸಿ ಚುಂಬಿಸುವ ದೃಶ್ಯವಿದೆ. ಆ ಚುಂಬನ ಸ್ವೀಕರಿಸಿದ ಡೆನ್ಸಿ ಖುಲ್ಲಾಂಖುಲ್ಲಾ ಆಗಿ, ''ವಾಹ್ವ್..! ಅಕ್ಷಯ್ ತುಂಬ ಅದ್ಭುತವಾಗಿ ಮುತ್ತು ಕೊಡುತ್ತಾನೆ. ಆತ ತುಟಿಗೆ ತುಟಿ ಸೇರಿಸಿದ್ದು ನನಗೆ ಮರೆಯಲಾಗದ ಅನುಭವ'' ಎಂದೆಲ್ಲಾ ಹೇಳಿದ್ದು ಈಗ ಎಲ್ಲೆಲ್ಲೂ ದೊಡ್ಡ ಸುದ್ದಿ. ಭಾರತದಲ್ಲಿ ಕಂಭಕ್ತ್ ಇಶ್ಕ್ ಚಿತ್ರಕ್ಕಿಂತ ಅಕ್ಷಯ್ ಕುಮಾರ್ ಕಿಸ್ಸೇ ದೊಡ್ಡ ಸುದ್ದಿಯಾಗುತ್ತಿರುವಾಗ, ಅತ್ತ ಹೆಂಡತಿ ಟ್ವಿಂಕಲ್ ಜತೆ ಸ್ಪೈನ್‌ಗೆ ಪ್ರವಾಸ ಹೋಗಿದ್ದ ಅಕ್ಷಯ್ ಬಿದ್ದು ಬಿದ್ದು ನಗಲು ಶುರು ಮಾಡಿದ್ದಾನಂತೆ. ''ನಾನು ಬೆಸ್ಟ್ ಕಿಸ್ಸರಾ? ನಂಬಲು ಸಾಧ್ಯವೇ ಆಗುತ್ತಿಲ್ಲ'' ಎಂದು ಗೊಳ್ಳನೆ ನಕ್ಕು ಬಿಟ್ಟನಂತೆ.
ಕಂಭಕ್ತ್ ಇಶ್ಕ್ ಚಿತ್ರದಲ್ಲಿ ನಟಿಸಿ ತನ್ನ ದೇಶಕ್ಕೆ ಮರಳುವಾಗ ಪತ್ರಕರ್ತರಲ್ಲಿ ಮಾತನಾಡಿದ ಡೆನ್ಸಿ, ತನಗೆ ಭಾರತದಲ್ಲಿ ದಕ್ಕಿದ 'ಅದ್ಭುತ ಅನುಭವ'(!)ವನ್ನು ವರ್ಣಿಸಿದ್ದಾಳೆ. ಅಕ್ಷಯ್ ಕುಮಾರ್ ತುಂಬ ಚೆನ್ನಾಗಿ ತುಟಿಗೆ ತುಟಿ ಸೇರಿಸುತ್ತಾನೆ. ಆತನ ಚುಂಬನಕ್ಕೇ ನಾನು ಮರುಳಾಗಿದ್ದೇನೆ ಎಂದೆಲ್ಲಾ ವರ್ಣಿಸಿ ಕಾಲ್ಕಿತ್ತಿದ್ದಾಳೆ.ಇಷ್ಟೆಲ್ಲ ನಡೆದಾಗ ಅಕ್ಷಯ್ ಭಾರತದಲ್ಲಿರಲಿಲ್ಲ. ಸ್ಪೈನ್‌ನಲ್ಲಿ ಹೆಂಡತಿ ಜತೆ ಆರಾಮವಾಗಿ ಪ್ರವಾಸದ ಮೂಡ್‌ನಲ್ಲಿದ್ದಾಗ ಅಕ್ಷಯ್‌ಗೆ ಮೇಲಿಂದ ಮೇಲೆ ಕಾಲ್ ಬರತೊಡಗಿದವಂತೆ. ಬಾಲಿವುಡ್ಡಿನ ಹಲವು ಗೆಳೆಯರು, ''ಏನೋ.. ಅಕ್ಷಯ್ ಭಾರೀ ಚೆನ್ನಾಗಿ ಚುಂಬಿಸುತ್ತೀಯಂತೆಲ್ಲೋ...'' ಎಂದು ಕಿಚಾಯಿಸಿದ್ದಾರೆ. ಆಮೇಲೆ ಇಂಟರ್‌ನೆಟ್ಟಿನಲ್ಲಿ ಹೆಂಡತಿ ಜತೆಗೆ ಭಾರತದ ನ್ಯೂಸ್ ಪೇಪರುಗಳನ್ನೆಲ್ಲ ತಡಕಾಡಿದರೆ, ಕಂತೆ ಕಂತೆ ಕಿಸ್ಸು ಪುರಾಣಗಳು ಪ್ರಕಟವಾಗಿದ್ದವಂತೆ. ಅಕ್ಷಯ್‌ಗೆ ಶಾಕ್!ಇರಲಿ, ಅಕ್ಷಯ್ ಹೆಂಡತಿ ಪ್ರತಿಕ್ರಿಯೆ ಹೇಗಿದ್ದಿರಬಹುದಪ್ಪಾ ಎಂದು ಅಕ್ಷಯ್‌ನ ಕೇಳಿದರೆ ಮತ್ತೆ ನಗಲು ಶುರು ಮಾಡತ್ತಾರೆ ಅಕ್ಷಯ್. ''ಟ್ವಿಂಕಲ್ ಪೇಪರಲ್ಲಿ ಈ ವಿಷಯ ಓದಿ ಓದಿ ನಗುತ್ತಿದ್ದಾಳೆ. ಬಾಲಿವುಡ್ಡಿನ ಬೆಸ್ಟ್ ಕಿಸ್ಸರ್ ಎಂದು ತಮಾಷೆ ಮಾಡಿ ನಗುತ್ತಿರುತ್ತಾಳೆ. ಒಟ್ಟಾರೆ ಪ್ರವಾಸದಲ್ಲಿ ಈ ಕಿಸ್ಸು ಒಂದು ದೊಡ್ಡ ನಗುವನ್ನೇ ನೀಡಿತು ಎಂದು ಅಕ್ಷಯ್ ವರ್ಣಿಸುತ್ತಾರೆ.''
ನನಗೆ ಈ ಹಿಂದೆ ಬೆಸ್ಟ್ ಆಕ್ಷನ್ ಹೀರೋ ಎಂಬ ಬಿರುದಿತ್ತು. ಆಮೇಲೆ ಬೆಸ್ಟ್ ಕಾಮಿಕ್ ಹೀರೋ ಎಂಬ ಪಟ್ಟವೂ ಒಲಿಯಿತು. ಈಗ ಇನ್ನೊಂದು ಪಟ್ಟವೂ ಒಲಿದಿದೆ. ಬೆಸ್ಟ್ ಕಿಸ್ಸರ್! ಇರಲಿ ಬಿಡಿ. ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸಿದ್ದೇನೆ. ನನಗೆ ಬೆಸ್ಟ್ ಆಕ್ಟರ್ ಎಂಬ ಬಿರುದು ಸಿಕ್ಕರೆ ನಾನು ಸಂತೃಪ್ತ'' ಎಂದೂ ನಗುತ್ತಾ ಹೇಳುತ್ತಾರೆ.
''ನಾವು ಭಾರತೀಯರು ಹೀಗೆಲ್ಲ ಕಿಸ್ಸಿನ ವರ್ಣನೆಯನ್ನು ರಾಜಾರೋಷವಾಗಿ ಹೇಳೋದಿಲ್ಲ. ಆದರೆ ಡೆನ್ಸಿ ಬೇರೆಯೇ ಸಂಸ್ಕೃತಿಯಲ್ಲಿ ಹುಟ್ಟಿದವಳು. ಆಕೆಗೆ ಕಿಸ್ಸು ದೊಡ್ಡ ವಿಷಯವೇ ಅಲ್ಲ. ಹಾಗಾಗಿ ಸಹಜವಾಗಿ ನನ್ನ ಕಿಸ್ಸನ್ನು ಆಕೆ ವರ್ಣಿಸಿದ್ದಾಳೆ. ಆಕೆಗೆ ಅದು ದೊಡ್ಡ ವಿಷಯವಾಗಿರಲಿಕ್ಕಿಲ್ಲ. ಆದರೆ ಭಾರತೀಯರಿಗೆ ಅದೇ ದೊಡ್ಡ ವಿಷಯ'' ಎಂದು ಆಕ್ಷಯ್ ವಿವರಿಸುತ್ತಾರೆ.
ಡೆನ್ಸಿ ವಿಷಯ ಹಾಗಿರಲಿ. ಕಂಭಕ್ತ್ ಇಶ್ಕ್ ಚಿತ್ರದಲ್ಲಿ ಅಕ್ಷಯ್ ತುಟಿಯ ಸವಿಯನ್ನು ಸವಿದ ಇನ್ನೊಬ್ಬಾಕೆ ಕರೀನಾ. ಈ ಕರೀನಾಳನ್ನು ಅಕ್ಷಯ್ ಜತೆಗಿನ ತುಟಿ ಅನುಭವ ಹೇಗಿತ್ತು ಎಂದು ಪತ್ರಕರ್ತರು ಕೇಳದೆ ಬಿಡಲಿಲ್ಲ. ಆದರೆ ಎಷ್ಟೇ ಬಿಂದಾಸ್ ಆಗಿದ್ರೂ, ಹೇಳಿ ಕೇಳಿ ಭಾರತೀಯಳಲ್ವಾ ಕರೀನಾ? ಡೆನ್ಸಿ ತರಹ ವಟಗುಟ್ಟಿಲ್ಲ. ಕೇವಲ 'ವೋ..' ಎಂದು ಹೇಳಿ ನಕ್ಕಳಂತೆ. ಹೆಚ್ಚೆಲ್ಲ ವರ್ಣಿಸಿಲ್ಲವಂತೆ.