Publish Date: Fri, 21 Dec 2007 (14:56 IST)
Updated Date: Fri, 21 Dec 2007 (14:56 IST)
ಖ್ಯಾತ ಹಿಂದಿ ಕವಿ ಹರಿವಂಶರಾಯ್ ಬಚ್ಚನ್ ಅವರ ಪತ್ನಿ ಮತ್ತು ಬಾಲಿವುಡ್ ಬಾದ ಷಾ ಅಮಿತಾಬ್ ಬಚ್ಚನ್ ಅವರ ತಾಯಿ ತೇಜಿ ಬಚ್ಚನ್ ಅವರು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ವಿಧಿವಶರಾದರು.
93 ವರ್ಷದ ತೇಜಿ ಬಚ್ಚನ್ ಅವರು ಕಳೆದ ಕೆಲವು ದಿನಗಳಿಂದ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿಖ್ ಕುಟುಂಬದಲ್ಲಿ ಜನಿಸಿದ ತೇಜಿ ಸೂರಿ ಅವರು ಹರಿವಂಶರಾಯ್ ಬಚ್ಚನ್ ಅವರ ಮೊದಲ ಪತ್ನಿ ಶ್ಯಾಮಲಾ ವಿಧಿವಶರಾದ ನಂತರ, ಹರಿವಂಶರಾಯ್‌ರನ್ನು 1941ರಲ್ಲಿ ವಿವಾಹವಾಗಿದ್ದರು.
ಪರಿಪೂರ್ಣ ರಂಗ ಕಲಾವಿದೆ ಮತ್ತು ಹಾಡುಗಾರ್ತಿಯಾಗಿದ್ದ ತೇಜಿ, ಹರಿವಂಶರಾಯ್ ಅವರು ಅನುವಾದಿಸಿದ ಶೆಕ್ಸಪೀಯರ್ ನಾಟಕಗಳಲ್ಲಿ ಪ್ರಾರಂಭದ ದಿನಗಳಲ್ಲಿ ಅಭಿನಯಿಸಿದ್ದರು.
ತೇಜಿ ಅವರ ಅನಾರೋಗ್ಯದ ಕಾರಣ ಅಭಿಷೇಕ ಬಚ್ಚನ್ ಮತ್ತು ಐಶ್ವರ್ಯ ರೈ ವಿವಾಹ ಸಮಾರಂಭವನ್ನು ಸರಳ ರೀತಿಯಿಂದ ಆಚರಿಸಲು ಅಮಿತಾಬ್ ಬಚ್ಚನ್ ನಿರ್ಧರಿಸಿದ್ದರು. ದಿವಂಗತ ತೇಜಿ ಬಚ್ಚನ್ ಅವರು ಅಮಿತಾಬ್ ಮತ್ತು ಅಜಿತಾಬ್ ಬಚ್ಚನ್‌ರನ್ನು ಅಗಲಿದ್ದಾರೆ.