ಅಪ್ಪನ ಪಬ್ಬಿಗೆ ಮಗಳು ಸೆಲಿನಾಗೆ ಪ್ರವೇಶವಿಲ್ಲ!
ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಇತ್ತೀಚೆಗೆ ಬ್ಯಾಂಕಾಕ್‌ನ ಪಬ್ ಒಂದಕ್ಕೆ ಸೀದಾ ಹೊಕ್ಕಲು ಹೊರಟಳಂತೆ. ಆದರೆ, ಏನು ಮಾಡಿದರೂ ಪಬ್‌ನ ಭದ್ರತಾ ಸಿಬ್ಬಂದಿಗಳು ಆಕೆಯನ್ನು ಒಳಕ್ಕೆ ಸೇರಿಸಿಕೊಳ್ಳಲು ಸುತಾರಾಂ ಒಪ್ಪಲಿಲ್ಲ. ಯಾಕೆಂದರೆ, ಆಕೆ ಶಾಲೆಯ ಯೂನಿಫಾರಂ ಧರಿಸಿದ್ದಳಂತೆ. ಆಕೆ ಸಣ್ಣ ಹುಡುಗಿ ಅಂತ ತಿಳಿದು ಪಬ್‌ನೊಳಗೆ ಸೇರಿಸಿಕೊಳ್ಳಲಿಲ್ಲವಂತೆ.ಸೆಲಿನಾ ಬಿಳಿ ಶರ್ಟ್, ಕೆಂಪು ಕಪ್ಪು ಗೆರೆಯಿರುವ ಸ್ಕರ್ಟ್, ತಲೆಗೆ ಕೆಂಪು ರಿಬ್ಬನ್, ಕಾಲಿಗೆ ಬಿಳಿ ಸಾಕ್ಸ್, ಕಪ್ಪು ಶೂ ಧರಿಸಿ ಥೇಟ್ ಶಾಲೆ ಬಾಲಕಿಯಂತೆ ಹೋದರೆ ಕನ್ಫ್ಯೂಸ್ ಆಗದಿರುತ್ತಾರಾ ಹೇಳಿ. ವಿಷಯ ಇಷ್ಟೇ ಆದರೆ, ಸುಮ್ಮನೆ ಬಿಡಬಹುದಿತ್ತು. ಆದರೆ ಇದರಲ್ಲಿ ಇನ್ನೂ ಗಮ್ಮತ್ತಿದೆ. ಸೆಲಿನಾ ಹೋಗಿದ್ದು ಸ್ವತಃ ತನ್ನ ಅಪ್ಪನ ಪಬ್ಬಿಗೆ!ಬ್ಯಾಂಕಾಕ್‌ನಲ್ಲಿ ಸೆಲಿನಾಳ ಅಪ್ಪನ ಪಬ್ ಹಾಗೂ ರೆಸ್ಟೋರೆಂಟ್ ಇದೆ. ಪೇಯಿಂಗ್ ಗೆಸ್ಟ್ ಚಿತ್ರದಲ್ಲಿ ಸೆಲಿನಾಳದ್ದು ಮುಖ್ಯಪಾತ್ರ. ಶೂಟಿಂಗ್‌ಗೆ ಬ್ಯಾಂಕಾಕ್‌ಗೆ ಹೋಗಿದ್ದ ಸೆಲಿನಾ ಚಿತ್ರಕ್ಕಾಗಿ ಧರಿಸಿದ ಸ್ಕೂಲ್ ಯುನಿಫಾರಂನನ್ನು ತುಂಬ ಇಷ್ಟಪಟ್ಟಳು. ಅದೇ ಡ್ರೆಸ್ಸಿನಲ್ಲಿ ಬ್ಯಾಂಕಾಕ್‌ನಲ್ಲಿ ಕುಣಿದಾಡಿ, ಹೇಗೂ ಅಪ್ಪನ ಪಬ್ಬೇ ಇದೆಯಲ್ಲ. ನೇರವಾಗಿ ತಾನೇ ಒಡತಿ ಎಂಬಂತೆ ಶೂಟಿಂಗಿನಿಂದ ಅದೇ ಸ್ಕೂಲ್ ಯುನಿಫಾರಂ ವೇಷದಲ್ಲಿ ಪಬ್ಬಿಗೂ ದಾಂಗುಡಿಯಿಟ್ಟಳು. ಯಾವಾಗಲೂ ಸೆಲಿನಾ ಅಲ್ಲಿಗೆ ಬಂದರೆ ಅದ್ದೂರಿ ಉಪಚಾರ ಮಾಡುವ ಭದ್ರತಾ ಸಿಬ್ಬಂದಿಗಳು ಅಂದು ಮಾತ್ರ ಕ್ಯಾರೇ ಅನ್ನಲಿಲ್ಲ. ಮೇಲಾಗಿ ಅವರಿಗೆ ತಮ್ಮ ಯಜಮಾನನ ಮಗಳು ಸೆಲಿನಾಳ ಗುರುತೇ ಸಿಕ್ಕಲಿಲ್ಲವಂತೆ. ನಿಯಮದಂತೆ, ಸ್ಕೂಲ್ ಹುಡಗಿಯನ್ನು ಪಬ್ಬಿಗೆ ಸೇರಿಸಿಕೊಳ್ಳಲಿಲ್ಲ. ಈ ಅನಿರೀಕ್ಷಿತ ಆಘಾತದಿಂದ ಸೆಲೀನಾಗೆ ತುಂಬಾ ಬೇಜಾರಾಯಿತು. ಆದರೂ, ಇಷ್ಟಕ್ಕೇ ಈ ಸೆಲಿನಾ ಎಂಬ ಬೆಡಗಿ ಸುಮ್ಮನಿರುತ್ತಾಳೆ ಅಂದುಕೊಂಡಿರಾ? ಖಂಡಿತ ಇಲ್ಲ. ಹಾಗೇ ಅಲ್ಲಿಂದಲೇ ಇಣುಕಿದಾಗ, ಕಿಟಕಿಯಿಂದ ಅಪ್ಪನನ್ನು ಕಂಡಿತು. ತಕ್ಷಣ ಜೋರಾಗಿ ಕಿರುಚಿ, ಕೈಯನ್ನು ಅಪ್ಪನೆಡೆಗೆ ಬೀಸಿದಳು.
ಸ್ವಲ್ಪ ಹೊತ್ತು ಸೆಲಿನಾಳ ಕಿರುಚಾಟ ಕೇಳಿ ಅಪ್ಪ ಅಲ್ಲಿಂದಲೇ ಕಿಟಕಿಯಿಂದ ನೋಡಿದರು. ಅವರಿಗಂತೂ ತನ್ನ ಮಗಳು ಅಂತ ಗೊತ್ತಾಯಿತು. ಆದರೆ ಬಹಳ ಮುಖ್ಯವಾದ ಬ್ಯುಸಿನೆಸ್ ಮೀಟಿಂಗ್‌ನಲ್ಲಿ ಅಪ್ಪ ಬ್ಯುಸಿಯಾಗಿದ್ದರು. ಮಗಳ ಅರಚಾಟ ತಾಳಲಾರದೆ ಇರುಸು ಮುರುಸಿನಲ್ಲಿ ಹೊರಗಡೆ ಬಂದ ಅಪ್ಪನೂ ಮಗಳನ್ನು ಒಳಕ್ಕೆ ಬಿಡಲಿಲ್ಲ. ಸೆಲಿನಾ ಬಳಿ ಹೋಗಿ ಆಕೆಯ ಕೈಗೆ ಕಂತೆ ಕಂತೆ ನೋಟುಗಳನ್ನು ತುರುಕಿ ಹೋಗಿ ಶಾಪಿಂಗ್ ಮಾಡು. ಹೀಗೆಲ್ಲಾ ವೇಷ ಮಾಡಿಕೊಂಡು ಬಂದರೆ ಪಬ್ಬಿನೊಳಗೆ ಸೇರಿಸಲ್ಲ ಅಂತ ಮಗಳನ್ನು ಸಾಗ ಹಾಕಿದರು. ಸೆಲಿನಾಳೂ ಪುಸಕ್ಕಂತ ನೋಟಿನ ಕಂತೆಯೊಂದಿಗೆ ಬ್ಯಾಂಕಾಕಿನಲ್ಲಿ ಶಾಪಿಂಗ್ ಮಾಡಿದ್ದೇ ಮಾಡಿದ್ದು.ಈ ಬಗ್ಗೆ ಸೆಲಿನಾ ಹೇಳುವುದು ಹೀಗೆ. ''ನನಗೆ ಸ್ಕೂಲ್ ಯುನಿಫಾರಂ ತುಂಬ ಇಷ್ಟವಾಯಿತು. ಹೇಗೂ ನಮ್ಮದೇ ಪಬ್ಬು ಅಂತ ಅದೇ ಡ್ರೆಸ್ಸಿನಲ್ಲಿ ಹೋದೆ. ಆದರೆ ಯಾರೂ ನನ್ನನ್ನು ಒಳಕ್ಕೆ ಬಿಡದಿದ್ದುದು ನನಗೆ ಶಾಕ್ ಆಯ್ತು. ಅಪ್ಪನೂ ಅಷ್ಟೆ. ಒಳಕ್ಕೆ ಸೇರಿಸಲಿಲ್ಲ. ಹೊರಗಿನಿಂದಲೇ ದುಡ್ಡು ಕೊಟ್ಟು ಕಳುಹಿಸಿ ಬಿಟ್ಟರು. ಅಪ್ಪ ತುಂಬಾ ಸ್ಟ್ರಿಕ್ಟು. ಅವರು ರೂಲ್ಸನ್ನು ಯಾವತ್ತೂ ಮುರಿಯುವುದಿಲ್ಲ'' ಎನ್ನುತ್ತಾಳೆ.ಬ್ಯಾಂಕಾಕಿನಲ್ಲಿ ಇಷ್ಟೆಲ್ಲಾ ತಂಟೆ ತಕರರು ಮಾಡಿದ ಪೋಕರಿ ಸೆಲಿನಾ ಎಂಬ ಬೆಡಗಿಗೆ ಇತ್ತೀಚೆಗೆ ತುಂಬಾ ಬೇಜಾರಾಗಿದೆ. ಕಾರಣ ಮೊನ್ನೆ ಬಾಲಿವುಡ್ ನಟ, ನಿರ್ದೇಶಕ ಫಿರೋಜ್ ಖಾನ್ ನಿಧನ ಹೊಂದಿದ್ದು. ಅದಕ್ಕಿಂತಲೂ ಹೆಚ್ಚು ಶಾಕ್ ಆಗಿದ್ದು, ಫಿರೋಜ್ ಅಂತಿಮ ದರ್ಶನಕ್ಕೆ ಬಾಲಿವುಡ್ ಮಂದಿ ಬಾರದಿದ್ದುದು.ಆಕೆ ಹೀಗೆ ಹೇಳುತ್ತಾಳೆ. ''ಫಿರೋಜ್ ನನಗೆ ಅಪ್ಪನಿದ್ದಂತೆ. ನನ್ನನ್ನು ತಿದ್ದಿ ತೀಡಿದ ನನ್ನ ಆಪ್ತ ಗೆಳೆಯನಂತೆ ಫಿರೋಜ್ ಇದ್ದರು. ಅವರು ಸತ್ತರು ಎಂಬ ವಿಷಯ ಗೊತ್ತಾದ ತಕ್ಷಣ ಓಡೋಡಿ ಬೆಂಗಳೂರಿಗೆ ಬಂದೆ. ಆದರೆ ಫಿರೋಜ್ ಕುಟುಂಬ ಹೊರತುಪಡಿಸಿ ಯಾವ ನಟನಟಿಯರೂ ಅಲ್ಲಿರಲಿಲ್ಲ. ಹೃತಿಕ್ ಇದ್ದರು. ಆದರೂ ಅವರು ಫಿರೋಜ್ ಕುಟುಂಬ ವರ್ಗವೇ. ನನಗೆ ಶಾಕ್ ಆಯಿತು. ಇದಕ್ಕೂ ಮೊದಲು ನಾನು ಅವರು ಆಸ್ಪತ್ರೆಯಲ್ಲಿದ್ದಾಗ ಭೇಟಿಯಾಗಿದ್ದೆ. ನೋವಿನ ದಿನಗಳಲ್ಲೂ ಅವರು ಸ್ಟೈಲಿಶ್ ಆಗಿ ಕಾಣಿಸುತ್ತಿದ್ದರು. ಅವರ ಅಗಲಿಕೆಯಿಂದ ನಾನೊಬ್ಬ ಉತ್ತಮ ಫ್ರೆಂಡ್, ಅಪ್ಪನನ್ನು ಕಳೆದುಕೊಂಡಂತಾಗಿದೆ'' ಎನ್ನುತ್ತಾಳೆ.