Publish Date: Fri, 27 Jul 2007 (15:13 IST)
Updated Date: Fri, 27 Jul 2007 (15:12 IST)
ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್‌ಖನ್ನಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇವರಿಬ್ಬರು ಜಗಳವಾಡಿದ ಕಾರಣ ಅಕ್ಷಯ್ ಕೆಲದಿನಗಳ ಕಾಲ ಹೊಟೇಲ್‌ಲಲ್ಲಿ ತಂಗಬೇಕಾಯಿತು. ಹೀಗೆಲ್ಲಾ ಬರೆದ ಟಾಬ್ಲೋಯ್ಡ್ ವಿರುದ್ದ ಇವರಿಬ್ಪರೂ ಕಾನೂನು ಅಸ್ತ್ರ ಕೈಗೆತ್ತಿಕೊಂಡಿದ್ದಾರೆ.
ಮುಂಬೈಯ ಪತ್ರಿಕೆಯೊಂದು ಟ್ವಿಂಕಲ್ ಹಾಗೂ ಅಕ್ಷಯ್ ನಡುವಿನ ವಿರಸದ ಕುರಿತು ಪುಟಗಟ್ಟಲೆ ಬರೆದಿತ್ತು. ಇದರಿಂದ ಇವರಿಬ್ಬರೂ ಆಕ್ರೋಶಗೊಂಡಿದ್ದಾರೆ. ಪ್ರತ್ಯುತ್ತರವಾಗಿ ಪತ್ರಿಕೆಯವಿರುದ್ಧ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದಾರೆ.
ಪತ್ರಿಕೆಯಲ್ಲಿ ಬಂದ ಲೇಖನದ ಸಾರಾಂಶ ಇಷ್ಟೇ: ಅಕ್ಷಯ್ ಹಾಗೂ ಟ್ವಿಂಕಲ್ ನಡುವೆ ವಿರಸವೇರ್ಪಟ್ಟ ಕಾರಣ ಆತ ನಾಲ್ಕು ದಿನಗಳ ಕಾಲ ಮನೆಗೆ ತೆರಳದೇ ಮುಂಬೈಯ ಪ್ರಖ್ಯಾತ ಜೆ.ಡಬ್ಲ್ಯೂ. ಮಾರ್ಯೋಟ್ ಹೊಟೇಲ್‌ನಲ್ಲಿ ತಂಗುವಂತಾಗಿದೆ... ಎಂಬಿತ್ಯಾದಿ.
ಈ ವರದಿಯಿಂದ ನಮಗೇನೂ ತೊಂದರೆ ಇಲ್ಲ. ಆದರೆ ಪತ್ರಿಕೆ ಮಾಧ್ಯಮದ ವಸ್ತುನಿಷ್ಠತೆಯನ್ನು ಗಾಳಿಗೆತೂರಿದೆ. ಹೊಣೆಗೇಡಿ ಕೆಲಸಮಾಡಿದೆ. ಇದಕ್ಕಾಗಿ ಪ್ರಕಾಶಕರ ವಿರುದ್ಧ ಕಾನೂನುಸಮರ ಹೂಡಿದ್ದು, ವಕೀಲರಿಂದ ನೋಟೀಸ್ ಜಾರಿ ಮಾಡಲಾಗಿದೆ. ನ್ಯಾಯಾಲಯದಲ್ಲೂ ದಾವೆ ಆರಂಭಿಸಲಾಗಿದೆ ಎಂಬುದು ಅಕ್ಷಯ್-ಟ್ವಿಂಕಲ್ ಪ್ರತಿಕ್ರಿಯೆ.
ಪತ್ರಿಕೆಯಲ್ಲಿ ಬಂದ ವರದಿಯ ಕುರಿತು ನಮಗೆ ಬೇಸರವಿಲ್ಲ. ಏಕೆಂದರೆ ನಾವು ನಮ್ಮದೇ ಪುಟ್ಟ ಲೋಕದಲ್ಲಿ ಸಂತುಷ್ಟರಾಗಿ ಇದ್ದೇವೆ. ಇದನ್ನು ಇತರರಿಗೆ ಮನದಟ್ಟು ಮಾಡಿಕೊಡುವ ಅನಿವಾರ್ಯತೆಯೇನಿಲ್ಲ. ಆದರೆ ವರದಿಯ ವಿರುದ್ಧ ಸುಮ್ಮನಿದ್ದರೆ ಕೆಲವು ಜನರು ಪರಿಸ್ಥಿತಿಯ ಲಾಭ ಪಡೆಯುವರು ಆದಕಾರಣ ಕಾನೂನುಹೋರಾಟ ಅಗತ್ಯವಾಯ್ತು ಎನ್ನುತ್ತಾರೆ ಅಕ್ಷಯ್.