2093ರ ನಂತರ ರಾಜಕೀಯ ಸೇರ್ಪಡೆ: ಶಾರೂಖ್
Publish Date: Thu, 05 Feb 2009 (18:03 IST)
Updated Date: Thu, 05 Feb 2009 (18:02 IST)
ಅಲ್ಲೊಮ್ಮೆ ಇಲ್ಲೊಮ್ಮೆ ಶಾರೂಖ್ ಖಾನ್ ರಾಜಕೀಯ ಸೇರುತ್ತಾರಂತೆ.. ಸೋನಿಯಾ ಗಾಂಧಿ ಜತೆ ಮಾತುಕತೆ ಮುಗಿದಿದೆಯಂತೆ... ಸೇರುವುದಿದ್ದರೆ ಕಾಂಗ್ರೆಸ್ಸಿಗೇ ಅಂತ ಖಾನ್ ತಮ್ಮ ಆಪ್ತರಲ್ಲಿ ತಿಳಿಸಿದ್ದಾರಂತೆ ಎಂಬ ಅಂತೆ-ಕಂತೆಗಳ ಸಂತೆಗಳಿಗೆಲ್ಲ ಸ್ವತಃ ಶಾರೂಖ್ ಖಾನ್ ಬೆಂಕಿ ಹಚ್ಚಿದ್ದಾರೆ.ತಾನು ರಾಜಕೀಯಕ್ಕೆ ಹೇಳಿ ಮಾಡಿಸಿದವನಲ್ಲ ಎಂದಿರುವ 43ರ ಚಿರಯುವಕ ಶಾರೂಖ್, "ಹಾಗೂ ಸೇರಲೇ ಬೇಕಿದ್ದರೆ ನನಗೆ 127 ವರ್ಷ ಪ್ರಾಯವಾಗಬೇಕು. ಅದಕ್ಕಿಂತ ಮೊದಲು ಸಾಧ್ಯವಿಲ್ಲ. ನಿಮಗೆಲ್ಲ ಸಾಕಷ್ಟು ವಯಸ್ಸಾಗಿದೆ.. ನಾನಿನ್ನೂ ಚಿರ ಯುವಕ. ಹಾಗಾಗಿ ಈಗಲೇ ಅದು ಸಾಧ್ಯವಿಲ್ಲ" ಎಂದು ತಮಾಷೆಯಿಂದಲೇ ಗಂಭೀರ ವ್ಯಾಖ್ಯೆಯನ್ನು ಪುಡಾರಿಗಳಿಗೆ ರವಾನಿಸಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು ಪತ್ರಕರ್ತರ ಹಾಗೂ ನೆರೆದಿದ್ದವರ ಹಲವು ಸಂಶಯಗಳನ್ನು ಇದೇ ಸಂದರ್ಭದಲ್ಲಿ ನಿವಾರಿಸಿದರು.
ಭುಜ ನೋವಿನಿಂದ ಬಳಲುತ್ತಿರುವ ಶಾರೂಖ್ ಖಾನ್‌ರನ್ನು 'ಹೇಗಿದ್ದೀರಿ?' ಎಂದು ಪತ್ರಕರ್ತರು ಪ್ರಶ್ನಿಸಿದಾಗ ತಮಾಷೆಯಾಗಿ ಉತ್ತರಿಸಿದ ಅವರು, "ನಿಮ್ಮನ್ನು ಗಟ್ಟಿಯಾಗಿ ಅಪ್ಪಿಕೊಳ್ಳಲು ನನ್ನಿಂದ ಸದ್ಯಕ್ಕೆ ಅಸಾಧ್ಯ" ಎಂದರು.
"ಬೇಗನೆ ಗುಣಮುಖನಾಗಲಿದ್ದೇನೆ. ಸದ್ಯದಲ್ಲೇ ಶಸ್ತ್ರಚಿಕಿತ್ಸೆಗಾಗಿ ತೆರಳುವವನಿದ್ದು, ಅದಕ್ಕಿಂತ ಮುಂಚೆ ಒಪ್ಪಿಕೊಂಡಿರುವ ಕೆಲಸಗಳನ್ನು ಮುಗಿಸಬೇಕಾಗಿದೆ. ಅದರಲ್ಲಿ 'ಬಿಲ್ಲೂ ಬಾರ್ಬರ್' ಕೂಡ ಒಂದು. ಅದರ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅನಿವಾರ್ಯ" ಎಂದಿದ್ದಾರೆ.