Article Blind Faith Articles %e0%b2%b9%e0%b2%be%e0%b2%b5%e0%b3%81 %e0%b2%aa%e0%b3%82%e0%b2%9c%e0%b2%bf%e0%b2%b8%e0%b3%81%e0%b2%b5 %e0%b2%87%e0%b2%b2%e0%b2%bf%e0%b2%97%e0%b2%b3%e0%b2%a8%e0%b3%8d%e0%b2%a8%e0%b3%81 %e0%b2%a8%e0%b3%8b%e0%b2%a1%e0%b2%bf%e0%b2%a6%e0%b3%8d%e0%b2%a6%e0%b3%80%e0%b2%b0%e0%b2%be 108060200043_1.htm

Daily Horoscope

Select Your Language

Notifications

webdunia
webdunia
webdunia
webdunia

ಹಾವು ಪೂಜಿಸುವ ಇಲಿಗಳನ್ನು ನೋಡಿದ್ದೀರಾ?

ಹಾವು ಪೂಜಿಸುವ ಇಲಿ
WD
ಇದೋ ನೋಡಿ, ಇಲ್ಲೊಂದು ವಿಚಿತ್ರ ದೇವಾಲಯವಿದೆ. ಈ ಬಾರಿಯ ‘ನೀವು ನಂಬುವಿರಾ?’ ಸರಣಿಯಲ್ಲಿ ನಾವು ನಿಮಗೆ ಪರಿಚಯಿಸುತ್ತಿದ್ದೇವೆ ಐತಿಹಾಸಿಕ ಮತ್ತು ಧಾರ್ಮಿಕ ನಂಬಿಕೆಗಳಿಗೆ ಪ್ರಸಿದ್ಧವಾದ ಮಂದಿರವೊಂದನ್ನು. ಇಲ್ಲಿನ ವಾತಾವರಣವು ಪವಾಡಗಳಿಂದಲೇ ತುಂಬಿಹೋದಂತಿದೆ. ಇದುವೇ ಗಂಧರ್ವಸೇನ ಮಂದಿರ. ಇದು ಇರುವುದು ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿರುವ ಗಂಧರ್ವಸೇನನ ರಾಜಧಾನಿ ಗಂಧರ್ವಪುರಿಯಲ್ಲಿ. ಗಂಧರ್ವ ಸೇನ ಯಾರೆಂಬ ಕುತೂಹಲವೇ? ಉಜ್ಜಯಿನಿಯ ಪ್ರಸಿದ್ಧ ರಾಜಾ ವಿಕ್ರಮಾದಿತ್ಯನ ತಂದೆಯೇ ಈತನಾಗಿದ್ದಾನೆ.

ಈ ಮಂದಿರದ ಗೋಪುರದಡಿಯಲ್ಲಿ ವರಸಿದ್ಧಿಪಡೆದ ಹಾವೊಂದು ವಾಸಿಸುತ್ತದೆ. ಪ್ರತಿ ರಾತ್ರಿಯೂ ಈ ಆಕಾರ ಬದಲಾಯಿಸುವ ನಾಗನ ಸುತ್ತ ಡಜನುಗಟ್ಟಲೆ ಇಲಿಗಳು ಬರುತ್ತವೆ, ನಾಗನನ್ನು ಸ್ತುತಿಸುತ್ತವೆ. ಇಂಥದ್ದೊಂದು ನಂಬಿಕೆ ಆ ಪರಿಸರವಿಡೀ ಚಾಲ್ತಿಯಲ್ಲಿದೆ. ಆದರೆ, ಇದುವರೆಗೂ ಯಾರು ಕೂಡ ಈ ವಿಚಿತ್ರವನ್ನು ಕಣ್ಣಾರೆ ಕಂಡವರಿಲ್ಲ. ವಿಶೇಷವೆಂದರೆ, ಬೆಳಗಾತ ಎದ್ದು ನೋಡಿದರೆ, ಇಲ್ಲಿ ಹಾವಿನ ಹಿಕ್ಕೆ (ಮಲ)ದೊಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಇಲಿಗಳ ಹಿಕ್ಕೆಗಳೂ ಕಾಣಸಿಗುತ್ತವೆ. ಇದೊಂದು ಪವಾಡವೇ ಆಗಿದ್ದು, ಇದೇಕೆ ಹೀಗಾಗುತ್ತಿದೆ ಎಂಬುದು ಇದುವರೆಗೆ ಪತ್ತೆ ಮಾಡಲಾಗಿಲ್ಲ. ಸ್ಥಳೀಯರು ಈ ಸ್ಥಳವನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಾರೆ. ಆದರೆ ಮತ್ತೆ ಇದೇ ರೀತಿ ಹಾವು-ಇಲಿಗಳ ಹಿಕ್ಕೆಗಳ ರಾಶಿ ಕಂಡುಬರುತ್ತದೆಯಂತೆ.

webdunia
WD
ಈ ಮಂದಿರದಲ್ಲಿ ಗಂಧರ್ವಸೇನ ರಾಜನ ಆಳೆತ್ತರದ ಪ್ರತಿಮೆಯಿದೆ. ಆತನಿಗೆ ಮಾಳ್ವಾ ಪ್ರದೇಶದಲ್ಲಿ ಗರ್ಧಾಭೀಲ್ ಎಂಬ ಹೆಸರೂ ಇದೆ. ಆದರೆ, ಈ ರಾಜನ ಬಗ್ಗೆ ವಿಭಿನ್ನ ಕಥೆಗಳೂ ಕೇಳಿಬರುತ್ತವೆ. ಆದರೆ ಈ ಪ್ರದೇಶದೊಂದಿಗೆ ಥಳುಕು ಹಾಕಿಕೊಂಡಿರುವ ಕಥೆಯೊಂದು ತೀರಾ ಅಸಹಜವೆನ್ನಿಸುತ್ತದೆ.

ಈ ಮಂದಿರನ್ನು ಏಳೆಂಟು ಭಾಗಗಳಾಗಿ ವಿಭಾಗಿಸಲಾಗಿದೆ. ಮಂದಿರದ ಮಧ್ಯಭಾಗದಲ್ಲಿ ರಾಜನ ಪ್ರತಿಮೆಯಿದೆ. ಆದರೆ ಕಾಲದ ಹೊಡೆತಕ್ಕೆ ಸಿಲುಕಿ ಮಂದಿರದ ಮುಖ್ಯ ಭಾಗದ ಹೊರತಾಗಿ ಉಳಿದೆಲ್ಲವೂ ನಾಶವಾದವು.

ಇಲ್ಲಿನ ಅರ್ಚಕ ಮಹೇಶ್ ಕುಮಾರ್ ಪ್ರಕಾರ, ಈ ಮಂದಿರದಲ್ಲಿರುವ ಪುರಾತನ ಹುತ್ತವೊಂದಿದ್ದು, ಜನರು ಇಲ್ಲಿ ಸಾಕಷ್ಟು ಹಾವುಗಳನ್ನು ಕಂಡಿದ್ದಾರೆ. ಇದೇ ಹಾವುಗಳು ಸಮೀಪದ ನದಿಯಲ್ಲಿ, ಕಾಡಿನಲ್ಲೆಲ್ಲಾ ಸುತ್ತಾಡುತ್ತಿರುತ್ತವಂತೆ. ಆದರೆ ವಿಚಿತ್ರವೆಂದರೆ, ಇಲ್ಲಿ ಇಲಿಗಳು ಕೂಡ ಇದೇ ಮಂದಿರದಲ್ಲಿ ಒಟ್ಟಾಗಿರುವುದು. ಆಕಾರ ಬದಲಿಸುತ್ತಿರುವ ಹಾವೊಂದು ಈ ಮಂದಿರವನ್ನು ಕಾಯುತ್ತಿರುತ್ತದೆ ಎಂದು ಸ್ಥಳೀಯರು ನಂಬುತ್ತಾರೆ.

ಚಿಕ್ಕವರಿರುವಾಗಿಂದಲೂ ಈ ಪವಾಡವನ್ನು ನೋಡುತ್ತಾ ಬಂದಿದ್ದೇನೆ ಎಂದಿದ್ದಾರೆ ಸ್ಥಳೀಯ ನಿವಾಸಿಗಳಾದ ಕಮಲ್ ಸೋನಿ ಮತ್ತು ಕೇದಾರನಾಥ್. ಈ ಹಳದಿ ಬಣ್ಣದ ನಾಗ ಸುಮಾರು 12 ಅಡಿ ಉದ್ದವಿದ್ದು, ಉದ್ದನೆಯ ಮೀಸೆಯನ್ನೂ ಹೊಂದಿದೆಯಂತೆ. ಸ್ಥಳೀಯರಲ್ಲೊಬ್ಬರಾಗಿರುವ ರಮೇಶ್ ಚಂದ್ರ ಝಾಲಾಜಿ ಎಂಬವರಿಗೆ ತಾವು ಹಾವನ್ನು ಕಂಡಿದ್ದೇನೆ ಎಂಬುದೇ ದೊಡ್ಡ ಹೆಮ್ಮೆಯ ಸಂಗತಿಯಾಗಿಬಿಟ್ಟಿದೆ.

webdunia
WD
ಇಲ್ಲಿ ಇಲಿಗಳು ಹೇಗೆ ಹಾವನ್ನು ಸುತ್ತುವರಿಯುತ್ತವೆಯೋ, ಅದೇ ಮಾದರಿಯಲ್ಲಿ ಸೋಮವತಿ ನದಿಯೂ ಕೂಡ ಮಂದಿರವನ್ನು ಆವರಿಸಿಕೊಂಡಿದೆ. ಈ ಸಂಪ್ರದಾಯಕ್ಕೆ ಸುಮಾರು ಸಾವಿರ ವರ್ಷದ ಇತಿಹಾಸವಿದೆ ಎನ್ನುತ್ತಾರೆ ಗ್ರಾಮದ ಮುಖ್ಯಸ್ಥರಾದ ವಿಜಯ್ ಸಿಂಗ್ ಚೌಹಾಣ್. ಈ ತಾಣದೊಳಗೆ ಪ್ರವೇಶಿಸಿದರೆ ಎಲ್ಲ ದುಃಖ, ನೋವುಗಳನ್ನು ಮರೆಯಬಹುದು ಎಂದು ಸ್ಥಳೀಯರು ಬಲವಾಗಿ ನಂಬುತ್ತಾರೆ.

ಪಾರಮಾರ ರಾಜವಂಶಸ್ಥರ ಕಾಲದಲ್ಲಿ ಈ ಮಂದಿರದ ಗೋಪುರವನ್ನು ಕಟ್ಟಲಾಗಿದ್ದು, ಕಂಬಗಳು ಮತ್ತು ತಳಭಾಗವನ್ನು ಬುದ್ಧರ ಕಾಲದಲ್ಲಿ ರಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ರೀತಿಯ ಪವಾಡಗಳನ್ನು ನೀವು ನಂಬುತ್ತೀರಾ? ನಿಮ್ಮ ಅನಿಸಿಕೆಗಳನ್ನು ಇಲ್ಲೇ ತಿಳಿಸಿ.

Share this Story:

Follow Webdunia kannada