Article Blind Faith Articles %e0%b2%b8%e0%b3%8a%e0%b2%b2%e0%b3%8a%e0%b2%ae%e0%b2%a8%e0%b3%8d%e2%80%8c%e0%b2%a8 %e0%b2%b2%e0%b2%be%e0%b2%a1%e0%b3%8d%e0%b2%9c%e0%b3%8d%e2%80%8c%e0%b2%a8 %e0%b2%a8%e0%b2%bf%e0%b2%97%e0%b3%82%e0%b2%a2 %e0%b2%b0%e0%b2%b9%e0%b2%b8%e0%b3%8d%e0%b2%af 107123100045_1.htm

Daily Horoscope

Select Your Language

Notifications

webdunia
webdunia
webdunia
webdunia

ಸೊಲೊಮನ್‌ನ ಲಾಡ್ಜ್‌ನ ನಿಗೂಢ ರಹಸ್ಯ

ಸೊಲೊಮನ್‌ನ ಲಾಡ್ಜ್‌ನ ನಿಗೂಢ ರಹಸ್ಯ
WD
ನಂಬಿದ್ರೆ ನಂಬಿ, ಬಿಟ್ರೆ ಬಿಡಿ ಎಂಬ ಸರಣಿಯಲ್ಲಿ ಈ ಬಾರಿ ಭಯಹುಟ್ಟಿಸುವ ಲಾಡ್ಜ್ ಒಂದನ್ನು ನಾವು ನಿಮಗೆ ಪರಿಚಯಿಸುತ್ತಿದ್ದೇವೆ. ರಾತ್ರಿ ಕಾಲದಲ್ಲಿ ಈ ಭೂತಬಂಗಲೆಯಂತಿರುವ ತಾಣದಿಂದ ವಿಚಿತ್ರ ಧ್ವನಿಗಳು ಕೇಳಿಬರುತ್ತವಂತೆ. ಈ ವಿಷಯ ತಿಳಿದ ಬಳಿಕ, ನಾವು ಮಧ್ಯಪ್ರದೇಶದ ಇಂದೋರ್ ಸಮೀಪವಿರುವ ಮಹವು ಎಂಬ ತಾಣಕ್ಕೆ ತೆರಳಿದೆವು.

ಸ್ಥಳೀಯರಲ್ಲಿ ಮಾತನಾಡಿದಾಗ, ಈ ಲಾಡ್ಜ್ ಹಿಂದಿರುವ ಭಯಾನಕತೆಯ ದೃಶ್ಯ ನಮ್ಮೆದುರು ತೆರೆದುಕೊಂಡಿತು. ಇದು ಮೆಸೊನಿಕ್ ಸಮಾಜಕ್ಕೆ ಸೇರಿದ ಕಥೆ. ಚಕ್ರವರ್ತಿ ಸೊಲೊಮನ್ ಕಾಲದಲ್ಲಿ ಇದನ್ನು ಕಟ್ಟಿಸಲಾಗಿತ್ತಂತೆ.

ಈ ಸಮಾಜದ ಸದಸ್ಯರ ಶಂಕಾಸ್ಪದ ಚಟುವಟಿಕೆಗಳಿಂದಾಗಿ ಇದು ನಿಗೂಢ ತಾಣವೆಂದು ಕರೆಯಲ್ಪಟ್ಟಿದೆ. ಇಲ್ಲಿ ಮಾಟ-ಮಂತ್ರ ನೆರವೇರಿಸಲಾಗುತ್ತದೆ ಎಂದು ಕೆಲವರು ಹೇಳುತ್ತಿದ್ದರೆ, ಮೆಸೊನಿಕ್ ಸಮಾಜದ ಮಂದಿ ಏನೋ ಆಧ್ಯಾತ್ಮಿಕ ರಹಸ್ಯಗಳ ಬಗ್ಗೆ ಸಂಶೋಧನೆ ಮಾಡುತ್ತಾರೆ ಅಥವಾ ಭೂತ-ಪ್ರೇತ-ಪಿಶಾಚಿಗಳನ್ನು ಆರಾಧಿಸುತ್ತಾರೆ ಎಂದು ಕೆಲವರು ನುಡಿಯುತ್ತಾರೆ.

ಆದರೆ ಇಲ್ಲಿರುವ ಯಾರಿಗೂ ಈ ಊಹಾಪೋಹಗಳ ಹಿಂದಿರುವ ಸತ್ಯ ಮಾತ್ರ ಏನೆಂಬುದು ಗೊತ್ತಿಲ್ಲ. ಈ ರಹಸ್ಯ ಭೇದಿಸಲು ನಾವು ಪ್ರಯತ್ನಿಸಿದೆವು. ಇದರ ಅಂಗವಾಗಿ ನಾವು ಮೊದಲು ಭೇಟಿಯಾದದ್ದು ಒಬ್ಬ ಪ್ರಾಂಶುಪಾಲರನ್ನು. ಅವರ ಹೆಸರು ಜೇಡಿ ಹೋಲಿವರ್. ಕಳೆದ 22 ವರ್ಷಗಳಿಂದ ಅವರಿಗೆ ಈ ಲಾಡ್ಜ್ ಬಗ್ಗೆ ಗೊತ್ತಿದೆ. ಮೆಸೊನಿಕ್ ಸಮಾಜದ ಇತರ ಸದಸ್ಯರಲ್ಲಿ ಚರ್ಚೆ ಮಾಡಿದ ನಂತರವಷ್ಟೇ ತಾನು ಇದರ ಹಿಂದಿರುವ ತಾತ್ವಿಕತೆ ಬಗ್ಗೆ ತಿಳಿಯಪಡಿಸುವುದಾಗಿ ಅವರು ನಮಗೆ ಹೇಳಿದರು. ಯಾಕೆಂದರೆ ಈ ಸಮಾಜದವರು ತಮ್ಮ ರಹಸ್ಯಗಳನ್ನು ಕಾಪಾಡುವ ಬದ್ಧತೆ ಹೊಂದಿದ್ದಾರೆ. ನಮ್ಮ ಮನವಿ ಮೇರೆಗೆ ಅವರು ಈ ಸಮಾಜದ ಕುರಿತು ವಿವರಣೆ ನೀಡಿದರು.

webdunia
WD
ಅದರಂತೆ, ಮೆಸೋನ್ ಹೋಲಿವರ್ ನಮ್ಮನ್ನು ಅವರ ಮಂದಿರಕ್ಕೆ ಆಹ್ವಾನಿಸಿದರು. ನಾವು ನಿಗದಿತ ವೇಳೆಗೆ ಅಲ್ಲಿ ತಲುಪಿದೆವು. ಈ ಸ್ಥಳವು ಊರಿನಿಂದ ತುಂಬಾ ದೂರದಲ್ಲಿದೆ. ರಾತ್ರಿಯಲ್ಲಿ ಈ ಲಾಡ್ಜ್ ಭಯಾನಕವಾಗಿ ಕಾಣಿಸುತ್ತದೆ. ಕೆಲವು ಸಮಯದ ನಂತರ ಮೆಸೋನ್ ಹೋಲಿವರ್, ಮೆಸೋನ್ ರಾಧಾ ಮೋಹನ್ ಮಾಳವೀಯ, ಮೆಸೋನ್ ಮೇಜರ್ ಬಿ.ಎಲ್.ಯಾದವ್, ಮೆಸೋನ್ ಕಮಲ್ ಕಿಶೋರ್ ಗುಪ್ತಾ ಕೂಡ ಈ ಬಂಗಲೆಗೆ ಆಗಮಿಸಿದರು. ಅಲ್ಲಿ ತಲುಪಿದಾಗ, ಅಲ್ಲೊಂದು ಕಣ್ಣಿನ ಚಿತ್ರವಿತ್ತು. ಈ ಜನಾಂಗದವರು ಕಣ್ಣನ್ನು ಪೂಜಿಸುತ್ತಾರಂತೆ. ನಂತರ ಅಲ್ಲಿ ಕೆಲವು ಪುರಾತನ ಚಿತ್ರ ಕಲಾಕೃತಿಗಳಿದ್ದವು. ಸಮಾಜದ ಅಗ್ರಗಣ್ಯ ಸದಸ್ಯರ ಚಿತ್ರಗಳವು. ಬಳಿಕ ನಾವು ಸಾಗಿದ್ದು ಆ ಮಂದಿರದತ್ತ. ಇದನ್ನು ಸ್ಥಾಪಿಸಿದ್ದು ಚಕ್ರವರ್ತಿ ಸೊಲೊಮನ್ ಎಂಬ ಪ್ರತೀತಿ. ಗೋಡೆಗಳಲ್ಲಿ ಕೆಲವು ಚಿತ್ರಗಳಿದ್ದು, ಅವು ಸೊಲೊಮನ್ ಸಿದ್ಧಾಂತಗಳನ್ನು ಸಾರುವಂತಿವೆ. ಆದರೆ ಅಲ್ಲಿ ಅವರೇನು ಮಾಡುತ್ತಾರೆ ಎಂಬುದನ್ನು ಯಾರೂ ಹೇಳಲಿಲ್ಲ.

ನಿಮ್ಮಲ್ಲಿ ಅತೀತ ಶಕ್ತಿಯೇನಾದರೂ ಇದ್ದರೆ, ನೀವು ಕೂಡ ಮೆಸೊನಿಕ್ ಆಗುವುದು ಸಾಧ್ಯ ಎಂದು ಹಳೆಯ ಮೆಸೊನಿಕ್ ಸದಸ್ಯರು ನಮಗೆ ಹೇಳಿದರು. “ನಾವು ನಮ್ಮ ಸಮಾಜಕ್ಕೆ ಎಲ್ಲರನ್ನೂ ಸ್ವೀಕರಿಸುವುದಿಲ್ಲ” ಎಂದಿದ್ದಾರೆ ಅವರು. ಈ ಸಮಾಜದ ಹೊಸ ಸದಸ್ಯರನ್ನು ಡೆಕೋನ್ ಎಂದು ಕರೆಯಲಾಗುತ್ತದೆ. ಡೆಕೋನ್ ಅರ್ಹತೆ ಪಡೆದ ಬಳಿಕ ಆತ ಹಿರಿಯ ಡೆಕೋನ್ ಆಗುತ್ತಾನೆ. ನಂತರ ಆತ ಜೂನಿಯರ್ ಮತ್ತು ಸೀನಿಯರ್ ವಾರ್ಡನ್ ಆಗುತ್ತಾನೆ. ಕಟ್ಟಕಡೆಯದಾಗಿ ಮೆಸೋನ್ ಆಗಿ ಪದೋನ್ನತಿ ಹೊಂದುತ್ತಾನೆ. ಮೆಸೊನಿಕ್ ಚಟುವಟಿಕೆಗಳಲ್ಲಿ ಪರಿಪೂರ್ಣತೆ ಸಾಧಿಸಿದ ಬಳಿಕ, ಅವನಿಗೆ ವರ್ಚುವಲ್ ಮಾಸ್ಟರ್ ಎಂಬ ಪದವಿ ನೀಡಲಾಗುತ್ತದೆ, ಆತ ಮೆಸೋನ್‌ಗಳ ತಂಡವನ್ನು ಮುನ್ನಡೆಸುತ್ತಾನೆ.

webdunia
WD
ಕಟ್ಟಾ ಮೆಸೋನ್ ಆಗಲು ಮೂರು ಪದವಿಗಳನ್ನು ಪೂರೈಸಬೇಕು. ಮೊದಲ ಹಂತದಲ್ಲಿ, ಆತನೊಬ್ಬ ಕಾರ್ಮಿಕ, ಆತ ಸುಂದರ ನಿರ್ಮಾಣಗಳನ್ನು ಮಾಡಬೇಕು, ಅಂದರೆ ಮಾನವ ಜನಾಂಗಕ್ಕೆ ಆತ ಉತ್ತಮ ಸೇವೆ ಮಾಡಬೇಕು. ಎರಡನೇ ಹಂತದಲ್ಲಿ, ಉತ್ತಮ ಕೆಲಸಗಳು ಮಾನವನ ಜೀವನವನ್ನು ಸುಂದರ ಮಂದಿರವಾಗಿ ರೂಪಿಸುತ್ತದೆ ಎಂಬುದನ್ನು ಕಲಿಸಲಾಗುತ್ತದೆ. ಮೂರನೇ ಹಂತದಲ್ಲಿ ಜೀವನದ ಮೋಕ್ಷವನ್ನು ಬೋಧಿಸಲಾಗುತ್ತದೆ. ದಫನ ಮಾಡಿದ ಬಳಿಕ ಯಾವ ಎಲುಬು ಕೊನೆಯಲ್ಲಿ ಉಳಿಯುತ್ತದೆ ಎಂಬಿತ್ಯಾದಿ “ಸಂಗ್ರಹ”ಕ್ಕೆ ಸಂಬಂಧಪಟ್ಟ ವಿಷಯಗಳನ್ನು ಕೂಡ ತಿಳಿಸಲಾಗುತ್ತದೆ. ಇದಕ್ಕಾಗಿ ಮಾನವನ ತಲೆಬುರುಡೆ ಉಪಯೋಗಿಸಲಾಗುತ್ತದೆ. ಈ ಚಟುವಟಿಕೆಗಳಿಂದಾಗಿಯೇ ಜನತೆಗೆ ಮಸೋನಿಕ್ ಸಮಾಜದ ಬಗ್ಗೆ ಭಯಮಿಶ್ರಿತ ಸಂಶಯ ಇರುವುದು.

ವಾರದಲ್ಲೊಂದು ದಿನ ಅವರೆಲ್ಲಾ ತಡರಾತ್ರಿ ಭೇಟಿಯಾಗುತ್ತಾರಂತೆ. ಬೆಳಕಿರುವಾಗ ಯಾವತ್ತೂ ಈ ಸಭೆ ನಡೆಯುವುದಿಲ್ಲ. ಕತ್ತಲಲ್ಲೇ ಅವರ ಕೆಲಸ. ಯಾರೆದುರು ಕೂಡ ಅವರು ಯಾವ ರೀತಿ ಕೆಲಸ ಮಾಡುತ್ತಾರೆ ಎಂಬುದನ್ನು ತೋರ್ಪಡಿಸುವುದಿಲ್ಲ. ಇದೇ ಕಾರಣಕ್ಕೆ ಅವರು ಭೂತ-ಪ್ರೇತಗಳೊಂದಿಗೆ ಮಾತನಾಡುತ್ತಾರೆ ಅಂತ ಜನ ತಿಳಿದುಕೊಂಡಿದ್ದಾರೆ. ಆದರೆ ಇದು ನಿಜವಲ್ಲ. ಅಲ್ಲಿದ್ದ ಚದುರಂಗ ಮಣೆ ಮತ್ತು ಖಡ್ಗಗಳ ಹಿಂದಿನ ರಹಸ್ಯಗಳ ಬಗ್ಗೆ ನಾವು ಕೇಳಿದಾಗ, ಮೆಸೋನ್ ಮಂದಿರವು ಪೈಥಗಾರಸ್ ನಿಯಮದ ಆಧಾರದಲ್ಲಿದೆ ಎಂದವರು ಹೇಳಿದರು. ಇದೇ ಕಾರಣಕ್ಕೆ ಅಲ್ಲಲ್ಲಿ ಇಂಥ ಚಿತ್ರಗಳಿರುತ್ತವೆ, ವಿಭಿನ್ನ ಉಡುಗೆ, ಆಭರಣಗಳನ್ನು ಅವರು ಧರಿಸುತ್ತಾರೆ ಮತ್ತು ಕುಳಿತುಕೊಳ್ಳುವ ವಿಶಿಷ್ಟ ಪದ್ಧತಿಯನ್ನವರು ಅನುಸರಿಸುತ್ತಾರೆ. ಅವರು ವೈಜ್ಞಾನಿಕ ರೀತಿಯಲ್ಲೇ ಚರ್ಚೆ ನಡೆಸುತ್ತಾರೆ, ಆದರೆ ಜನಸಾಮಾನ್ಯರು ಮಾತ್ರ ಇದನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ.

ಸೊಲೊಮನ್ ಆಡಳಿತಾವಧಿಯಲ್ಲಿ ಕೆಲವರಿಗೆ ಇಲ್ಲಿ ಕೈಯೋ ಕಾಲೋ ಕಡಿಯುವ, ಕೆಲವರ ಶಿರಚ್ಛೇದ ಮಾಡುವ ಕಠಿಣ ಶಿಕ್ಷೆಯನ್ನೂ ವಿಧಿಸಲಾಗುತ್ತಿತ್ತು. ಇದೇ ಕಾರಣಕ್ಕೆ ಈ ಲಾಡ್ಜ್ ಹೊರಗಿರುವ ಜನ ವಿಚಿತ್ರ ಚೀತ್ಕಾರಗಳನ್ನು ಕೇಳುತ್ತಿದ್ದಿರಬಹುದು. ಇದಕ್ಕಾಗಿಯೇ ಮೆಸೊನಿಕ್ ಸಮಾಜದ ಬಗ್ಗೆ ಸಂದೇಹ, ಭಯ, ಕುತೂಹಲ. ಇಂದಿಗೂ ಕೂಡ ಮೆಸೋನ್ ಜನರು ಮಾಟ-ಮಂತ್ರದಲ್ಲಿ ನಿರತರಾಗಿದ್ದಾರೆ ಅಂತಲೇ ತಿಳಿದುಕೊಂಡಿದ್ದಾರೆ.

webdunia
WD
ಸಹೋದರತೆಯಲ್ಲಿ ಮೆಸೋನ್‌ಗಳು ನಂಬಿಕೆ ಇರಿಸುತ್ತಾರೆ. ಅಂದರೆ ಪ್ರತಿಯೊಬ್ಬ ಮೆಸೊನ್, ತನ್ನ ಸಹೋದರ (ಸಮುದಾಯದ ಮತ್ತೊಬ್ಬ ಸದಸ್ಯ) ನಿಗೆ ಸಹಾಯ ಮಾಡಬೇಕು ಎಂಬ ನಿಯಮವಿದೆ. ಅವರು ತಮ್ಮ ಬಳಿ ಮನೆ ನಿರ್ಮಾಣಕ್ಕೆ ಬೇಕಾದ ವಿಭಿನ್ನ ಸಲಕರಣೆಗಳನ್ನು ಇಟ್ಟುಕೊಂಡಿರುತ್ತಾರೆ. ಈ ಸಾಮಾಗ್ರಿಗಳು, ಅಲ್ಲಿರುವ ಚಿಹ್ನೆಗಳು.. ಎಲ್ಲವೂ ವಿಚಿತ್ರ. ಇದನ್ನು ನೋಡಿದರೆ, ಅಲ್ಲೇನೋ ರಹಸ್ಯವಿದೆ ಎಂಬ ಶಂಕೆ ಮೂಡುವುದು ಸಹಜ. ಈ ಬಗ್ಗೆ ಅವರಿಂದಲೇ ಮಾಹಿತಿ ಕೇಳಿದಾಗ, ಮಾತು ತಿರುಗಿಸಲು ನೋಡಿದ ಅವರು, ಹಿಂದಿನ ಕಾಲದಲ್ಲಿ ಮನೆ ಕಟ್ಟುವುದಕ್ಕೆ ಇದೇ ಸಲಕರಣೆಗಳನ್ನು ಬಳಸಲಾಗುತ್ತಿತ್ತು ಎಂದಷ್ಟೇ ಹೇಳುತ್ತಾರೆ.

webdunia
WD
ಇಂದು ಇಡೀ ವಿಶ್ವದಲ್ಲಿ 240ರಷ್ಟು ಮೆಸೋನಿಕ್ ಲಾಡ್ಜ್‌ಗಳಿವೆ. ಅದರ ಮುಖ್ಯಾಲಯವಿರುವುದು ಸ್ಕಾಟ್ಲೆಂಡಿನಲ್ಲಿ. ಈ ಎಲ್ಲಾ ಲಾಡ್ಜುಗಳೂ ಪರಸ್ಪರ ಸಂಪರ್ಕ ಹೊಂದಿವೆ ಮತ್ತು ತಮ್ಮದೇ ಆದ ನಂಬಿಕೆಯನ್ನು ಪರಿಪಾಲಿಸಿಕೊಂಡು ಬರುತ್ತಿವೆ. ಪ್ರತಿಯೊಂದು ಲಾಡ್ಜಿಗೂ ನಿರ್ದಿಷ್ಟವಾದ ಸಂಖ್ಯೆಯೊಂದಿದೆ. ಮಹವುನಲ್ಲಿರುವ ಲಾಡ್ಜ್‌ನ ಸಂಖ್ಯೆ ಸೈಂಟ್ ಪೌಲ್ ನಂ. 389 (sc) ಅಂತ.

ಈ ರಹಸ್ಯಮಯ ಮೆಸೋನಿಕ್ ಲಾಡ್ಜ್ ಬಗ್ಗೆ ಇವಿಷ್ಟು ಮಾಹಿತಿ ನಮಗೆ ಸಿಕ್ಕಿದೆ. ನಾವು ಆ ರಹಸ್ಯ ಮಂದಿರಕ್ಕೂ ಪ್ರವೇಶಿಸಿದೆವು. ಆದರೆ ಇಲ್ಲಿ ಇನ್ನೂ ರಹಸ್ಯ ಸ್ಥಳಗಳಿವೆ, ಅವುಗಳ ನಿಗೂಢತೆ ಬಯಲಾಗಬೇಕಿದೆ ಎಂಬ ಅಭಿಪ್ರಾಯ ನಮ್ಮದಾಗಿತ್ತು.

Share this Story:

Follow Webdunia kannada