ಕೇವಲ ಹತ್ತೇ ದಿನ ಇಲ್ಲಿ ಜಾತ್ರೆ ನಡೆಯುತ್ತದೆ. ಆದರೂ ಭರ್ತಿ ಎರಡು ಲಕ್ಷ ಆಡುಗಳ ಜೀವ ಅನ್ನೋದು ಬಲಿ ರೂಪದಲ್ಲಿ ಹೋಗಿರುತ್ತದೆ. ದಿನಕ್ಕೆ 20 ಸಾವಿರ ಆಡುಗಳ ಪ್ರಾಣ ಹರಣ. ಅದೆಷ್ಟು ರಕ್ತ ಇಲ್ಲಿ ಹರಿದು ಮಡುವಾಗಿ ನಿಂತಿರಬಹುದು. ಲೆಕ್ಕಕ್ಕೆ ಸಿಗದ ಮಾತಿದು. ಆದರೂ ಇಲ್ಲಿ ಒಂದೇ ಒಂದು ನೊಣ ಇಲ್ಲ. ರಕ್ತದ ವಾಸನೆ ಹಿಡಿದು ದಾಳಿ ಇಡಬೇಕಾಗಿದ್ದ ನೊಣಗಳಿಗೆ ಅಸಲು ಇಲ್ಲಿ ಪ್ರವೇಶವೇ ಇಲ್ಲ. ಇದೇ ಈ ಬಾರಿಯ ನಮ್ಮ ನಂಬಿಕೆ ಅಪನಂಬಿಕೆ ಪಯಣಗಳ ಕಥಾ ವಸ್ತು.
ಇದು ಸಾತ್ಪುರಾ ಬೆಟ್ಟಗಳಡಿಯಲ್ಲಿ ಬರುವ ಒಂದು ಕುಗ್ರಾಮ. ಹೆಸರು ಇಲ್ಲದ ಊರು. ಮಧ್ಯ ಪ್ರದೇಶದಿಂದ ಖಾಂಡ್ವಾದಿಂದ 55 ಕೀ. ಮೀ ದೂರದಲ್ಲಿ ಇರುವ ಈ ಊರು ಒಂದು ಬುಡಕಟ್ಟು ಜನರಿಗೆ ಸೇರಿದ ಊರು.
ವಸಂತ ಪಂಚಮಿಯಿಂದ ಪೂರ್ಣಿಮೆಯವರೆಗೆ ನಡೆಯುವ ಹತ್ತು ದಿನಗಳ ಜಾತ್ರೆಗೆ ಶಿವಬಾಬಾನ ಜಾತ್ರೆ ಎಂದು ಹೆಸರು. ಇದು ಸಾಮಾನ್ಯ ಜಾತ್ರೆಯಂತಾಗಿದ್ದರೆ ಸರಿ ಎನ್ನಬಹುದಿತ್ತು. ಆದರೆ ಇಲ್ಲೇನೊ ವಿಶೇಷ ಇದೆ.
ಇಷ್ಟಾರ್ಥ ಸಿದ್ದಿಸಿದ ಭಕ್ತರು ಇಲ್ಲಿಗೆ ಬರುವುದು ಆಡುಗಳನ್ನು ಕೈಯಲ್ಲಿ ಹಿಡಿದುಕೊಂಡೇ. ಇಲ್ಲಿರುವ ಶಿವಬಾಬಾ ದೈವಿಕ ಶಕ್ತಿಯೊಂದಿಗೆ ಅವತರಿಸಿದ್ದಾನೆ ಎಂದು ಕೆಲವರು ನಂಬಿದರೆ, ಸಂತ ಜೋಗಿನಾಥ್ ಬಾಬಾನ ಪ್ರಕಾರ ಶಿವ ಬಾಬಾ ಶಿವನ ಅವತಾರ. ಇಲ್ಲಿನ ಶಿವ ಬಾಬಾ ಮಂದಿರದ ವಿಶೇಷ ಎಂದರೆ ಇಲ್ಲಿ ಬಲಿ ನೀಡಿದ ಆಡಿನ ಮಾಂಸವನ್ನು ಅಲ್ಲಿಯೇ ತಿನ್ನಬೇಕು. ಒಂದೇ ಒಂದು ಕಣ ಮಂದಿರದ ಆವರಣದಿಂದ ಹೋಗುವಂತಿಲ್ಲ. ಬಂದ ಆಪ್ತೇಷ್ಟರು, ಭಕ್ತರು ತಿಂದು ಉಳಿದಿದ್ದನ್ನು ಇಲ್ಲಿನ ಬಡವರಿಗೆ ನೀಡಿ ಮನೆಗೆ ತೆರಳುತ್ತಾರೆ.
ಬಲಿ ಹಾಕುವ ಕಟುಕನನ್ನು ಇಲ್ಲಿ ಎಷ್ಟು ಪ್ರಾಣಿಗಳ ಬಲಿ ನೀಡುತ್ತಾರೆ ಅಂತ ಕೇಳಿದ್ರೆ, ಏನಿಲ್ಲ ಸ್ವಾಮಿ, ಒಂದೆರಡು ಲಕ್ಷ ದಾಟಬಹುದು ಅನ್ನುತ್ತಾನೆ. ಶಿವಬಾಬಾನ ಆಶೀರ್ವಾದದಿಂದ ಇಲ್ಲಿ ಒಂದೇ ಒಂದು ಕ್ರಿಮಿ ಕೀಟ ಇಲ್ಲ ಎಂದೂ ಹೇಳಿದನಾತ. ಸರಿ ಎಂದು ನಾವು ಅಲ್ಲಲ್ಲಿ ನೊಣಗಳ ಹುಡುಕಾಟ ಮಾಡಿದ್ದು ಆಯಿತು. ಕೈಸುಟ್ಟುಕೊಂಡದ್ದೂ ಆಯಿತು.
ಪ್ರಶ್ನೆ ಇರುವುದೇ ಇಲ್ಲಿ. ದೇವರು ಒಬ್ಬರನ್ನು ಅದ್ಯಾವುದೊ ಅಮಾಯಕ ಪ್ರಾಣಿಯ ಬಲಿ ನೀಡಿ ಮೆಚ್ಚಿಸಬಹುದಾ ? ವೆಬ್ ದುನಿಯಾದ ಓದುಗರಾಗಿ ನಿಮ್ಮ ಅನಿಸಿಕೆಗೆ ನಮ್ಮ ಸ್ವಾಗತ ಇದೆ.