ಬೆಚ್ಚಿಬೀಳಿಸುವ "ಹಿಂಗೋತಾ" ಅಗ್ನಿಯುದ್ಧ
ದೀಪಗಳ ಹಬ್ಬದ ಬೆಳಕು ಸರಿದ ಬಳಿಕ, ಬಣ್ಣದ ಬಣ್ಣದ ದೀಪಗಳೊಂದಿಗೆ ಪಟಾಕಿಗಳ ಸದ್ದು ಕಡಿಮೆಯಾಗತೊಡಗುವಂತೆಯೇ, ದೀಪಾವಳಿಯನ್ನು ಭಯಾನಕವಾಗಿ ಆಚರಿಸಲಾಗುವ ಸಂಗತಿಯೊಂದರ ಬಗ್ಗೆ ನಾವಿಂದು ನಿಮ್ಮ ಗಮನ ಸೆಳೆಯುತ್ತಿದ್ದೇವೆ. ದೀಪಾವಳಿಯ ಸೆರಗಿನಲ್ಲಿ ಯುದ್ಧವನ್ನೇ ನಡೆಸುವ ವಿಶಿಷ್ಟ ಸಂಪ್ರದಾಯವೊಂದು ಮಧ್ಯಪ್ರದೇಶದ ಗೌತಮಪುರ ಎಂಬಲ್ಲಿ ಆಚರಣೆಯಲ್ಲಿದೆ.ಈ ಊರು ಇರುವುದು ಇಂದೋರಿನಿಂದ 55 ಕಿ.ಮೀ. ದೂರದಲ್ಲಿ. ಇಲ್ಲಿ ನಡೆಸುವ ಈ ಭೀಕರ ಆದರೆ ಸಾಂಪ್ರದಾಯಿಕ ಆಟಕ್ಕೆ ಹಿಂಗೋತಾ ಯುದ್ಧ ಎಂದು ಹೆಸರು. ಈ ಆಟವಾಡುವ ವೇಳೆ ಹಲವಾರು ಮಂದಿ ಹಳ್ಳಿಗರು ಗಾಯಗೊಳ್ಳುತ್ತಾರೆ. ಆದರೂ ಅವರು ಧೈರ್ಯಗುಂದುವುದಿಲ್ಲ. ಹಳ್ಳಿಗರೆಲ್ಲಾ ಸೇರಿ ದೀಪಾವಳಿಗೆ ಒಂದು ತಿಂಗಳು ಮೊದಲ್ ಹಿಂಗೋತಾ ಎಂಬ ಹೆಸರಿನ ಕಾಯಿಯೊಂದನ್ನು ಒಟ್ಟುಗೂಡಿಸುತ್ತಾರೆ. ಇದು ಮುಳ್ಳು ಮುಳ್ಳಿನ ಗಿಡದ ಮಧ್ಯೆ ಬೆಳೆಯುವ ಕಾಯಿ. ಅದನ್ನು ಸಂಗ್ರಹಿಸಿದ ನಂತರ ಕಾಯಿಯ ಟೊಳ್ಳು ಭಾಗದಲ್ಲಿ ಸಿಡಿ ಮದ್ದು (ಗನ್ ಪೌಡರ್) ತುಂಬುತ್ತಾರೆ. ಬಿದಿರು, ನೂಲು ಮತ್ತು ಆವೆಮಣ್ಣು ಸೇರಿಸಿ ಬಲವಾಗಿ ಕಟ್ಟಿ ಅದನ್ನು ಮುಚ್ಚುತ್ತಾರೆ. ಆ ಗ್ರಾಮದಲ್ಲಿ ಎಲ್ಲರೂ ದೀಪಾವಳಿಯ ಎರಡನೇ ದಿನ ಬರುವುದನ್ನೇ ಕಾತರದಿಂದ ಕಾಯುತ್ತಿರುತ್ತಾರೆ. ಯಾಕೆಂದರೆ ಆ ದಿನವೇ ವಿಖ್ಯಾತ ಹಿಂಗೋತ ಹೋರಾಟ ನಡೆಯುವುದು. ಅದರಲ್ಲಿ ಭಾಗಿಯಾಗುವವರೆಲ್ಲರನ್ನೂ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಕಲಂಗಾ ಮತ್ತು ತುರಾ ಗುಂಪುಗಳು ಹೋರಾಟಕ್ಕೆ ಸಜ್ಜಾಗುತ್ತವೆ.ಈ ಆಟದಲ್ಲಿ, ಎರಡೂ ಗುಂಪಿನವರು ಪರಸ್ಪರರ ಮೇಲೆ ಸಿಡಿಮದ್ದು ತುಂಬಿದ ಹಿಂಗೋತಾ ಕಾಯಿಗಳನ್ನು ಎಸೆಯುತ್ತಾರೆ. ಈ ಅಪಾಯಕಾರಿ ಆಟದ ಸಂದರ್ಭ ಪ್ರತಿವರ್ಷ ಕನಿಷ್ಠ 40ರಿಂದ 50ರಷ್ಟು ಮಂದಿ ಗಾಯಗೊಳ್ಳುತ್ತಾರೆ. ಆದರೂ ಜನರಲ್ಲಿ ಈ ಆಟ ಆಡುವ ಉತ್ಸಾಹ ಕುಗ್ಗುವುದಿಲ್ಲ. ತಮ್ಮ ಉದ್ಯೋಗಕ್ಕಾಗಿಯೋ, ಓದಿಗಾಗಿಯೋ ಊರಿನಿಂದ ಹೊರಗೆ ಹೋಗುವ ಮಂದಿ ಈ ಸಂದರ್ಭಕ್ಕಾಗಿಯೇ ಊರಿಗೆ ಮರಳಿ ಬರುತ್ತಾರೆ.
ಈ ಸಂಪ್ರದಾಯ ಯಾವಾಗ, ಹೇಗೆ ಆರಂಭವಾಯಿತು ಎಂಬುದು ಸರಿಯಾಗಿ ಯಾರಿಗೂ ಗೊತ್ತಿಲ್ಲ. ಆದರೂ ದೀಪಾವಳಿಯ ಎರಡನೇ ದಿನ ಪ್ರತಿವರ್ಷ ಸಾವಿರಾರು ಮಂದಿ ಈ ಹೋರಾಡುವ-ಆಟದಲ್ಲಿ ಪಾಲ್ಗೊಳ್ಳಲು ಜಮಾಯಿಸುತ್ತಾರೆ. ಅವರಿಗೆ ಈ ನಂಬಿಕೆಯಲ್ಲಿ ಬಲವಾದ ಶ್ರದ್ಧೆ. ಈ ಆಟ ಆರಂಭವಾಗುವ ಮೊದಲು ಪ್ರಾರ್ಥನೆ ನೆರವೇರುತ್ತದೆ. ಎರಡೂ ಕಡೆಯ ಭಾಗಾಳುಗಳು ಹಿಂಗೋತಗಳೊಂದಿಗೆ ಸಿದ್ಧವಾಗಿರುತ್ತಾರೆ. ಆಟಗಾರರೆಲ್ಲರೂ ತಮ್ಮಲ್ಲಿರುವ ಕಟ್ಟಕಡೆಯ ಹಿಂಗೋತವನ್ನು ಎಸೆದಾಗಲಷ್ಟೇ ಈ ಅಗ್ನಿಯುದ್ಧ ಕೊನೆಯಾಗುತ್ತದೆ.
ಇದು ನಮ್ಮ ಹಳ್ಳಿಯ ಸಂಪ್ರದಾಯ ಎನ್ನುತ್ತಾರೆ ಕಳೆದ ಹಲವಾರು ವರ್ಷಗಳಿಂದ ಇದರಲ್ಲಿ ಭಾಗವಹಿಸುತ್ತಿರುವ ಕೈಲಾಶ್ ಎಂಬಾತ. ಹಲವು ಬಾರಿ ಆತ ಗಾಯಗೊಂಡಿದ್ದರು. ಆದರೂ ಆಟ ಆಡುವುದನ್ನು ನಿಲ್ಲಿಸುತ್ತಿಲ್ಲ. ಕಳೆದ ಒಂದು ತಿಂಗಳಿಂದಲೇ ಹಿಂಗೋತಗಳನ್ನು ಸಿದ್ಧಪಡಿಸುತ್ತಿದ್ದುದಾಗಿ ರಾಜೇಂದ್ರ ಕುಮಾರ್ ಎಂಬಾತ ಹೇಳುತ್ತಾನೆ. ಕಳೆದ ವರ್ಷ ಹಿಂಗೋತವೊಂದು ಆತನ ಮುಖಕ್ಕೆ ಬಡಿದ ಪರಿಣಾಮವಾಗಿ ಮುಖಕ್ಕೆ ಏಳು ಕಡೆ ಹೊಲಿಗೆ ಹಾಕಿಸಬೇಕಾಗಿತ್ತು! ಆದರೂ ಆತ ಈ ವರ್ಷವೂ ಅದರಲ್ಲಿ ಪಾಲ್ಗೊಳ್ಳಲು ಬಂದಿದ್ದ.ಈ ಆಟ ಆಪಾಯಕಾರಿ ಅಷ್ಟೇ ಅಲ್ಲ, ಹಿಂಗೋತಗಳನ್ನು ತಯಾರಿಸುವ ವಿಧಾನ ಕೂಡ ಅಷ್ಟೇ ಅಪಾಯಕಾರಿ. ಹಿಂಗೋತ ಕಾಯಿಯ ಟೊಳ್ಳು ಭಾಗದೊಳಗೆ ಗನ್ ಪೌಡರ್ ತುಂಬುವಾಗ, ಹಲವು ಬಾರಿ ತಿಳಿಯದವರು ಈ ಕೆಲಸ ಮಾಡಿದ ಸಂದರ್ಭ, ದೊಡ್ಡ ದೊಡ್ಡ ಅನಾಹುತಗಳೂ ಘಟಿಸಿವೆ. ಚಿಕ್ಕ ಪುಟ್ಟ ಸ್ಫೋಟ, ಗಾಯ ಇವೆಲ್ಲಾ ಸಾಮಾನ್ಯ.ವಿಶೇಷವೆಂದರೆ, ಈ ಅಗ್ನಿಯುದ್ಧದಲ್ಲಿ ಪಾಲ್ಗೊಳ್ಳುವ ಮೊದಲು ಹೆಚ್ಚಿನವರು ಮದ್ಯ ಸೇವಿಸುತ್ತಾರೆ. ಇದರಿಂದ ಅವರ ಉತ್ಸಾಹ ಇಮ್ಮಡಿಯಾಗಿರುತ್ತದೆ. ಮಾತ್ರವಲ್ಲ, ಈ ಯುದ್ಧ ನಡೆಯುವ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತಿರಲು ಪೊಲೀಸರು ಮತ್ತು ಕ್ಷಿಪ್ರ ಕಾರ್ಯಾಚರಣೆ
ಪಡೆಯನ್ನೂ ನಿಯೋಜಿಸಲಾಗುತ್ತದೆ. ಅವರ ಕಣ್ಣೆದುರೇ ಇಂತಹ ಹಿಂಸಾತ್ಮಕ ಆಟ ನಡೆಯುತ್ತಿರುವುದು ವಿಶೇಷ.
ಸಾಮಾನ್ಯವಾಗಿ ಹೊಸ ಬಟ್ಟೆ ಧರಿಸಿ ಇಲ್ಲಿನ ಹಳ್ಳಿಗರು ಈ ಹಿಂಗೋತಾ ಯುದ್ಧವನ್ನೂ ಆಚರಿಸುತ್ತಾರೆ. ಆದರೆ ಕೆಲವು ಬಾರಿ ಅವರಿಗೆ ಇದು ದುಃಖದಾಯಕವಾಗಿಯೂ ಪರಿಣಮಿಸುತ್ತದೆ. ಇಂತಹ ವಿಶಿಷ್ಟ ಸಂಪ್ರದಾಯದ ಬಗ್ಗೆ ನಿಮಗೇನನ್ನಿಸುತ್ತದೆ?